ADVERTISEMENT

₹14 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಂಡ ಬಂಗಾರದೊಡ್ಡಿ ನಾಲೆಗೆ ಬಂತು ನೀರು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 7:42 IST
Last Updated 12 ಆಗಸ್ಟ್ 2021, 7:42 IST
ಆಧುನೀಕರಣಗೊಂಡ ಬಂಗಾರದೊಡ್ಡಿ ನಾಲೆಗೆ ಮುಂಗಾರು ಹಂಗಾಮು ಬೆಳೆಗಾಗಿ ನೀರು ಹರಿಸುವ ಕಾರ್ಯಕ್ಕೆ ಶಾಸಕ ರವೀಂದ್ರ ಶ್ರೀಕಂಠಯ್ಯ ಬುಧವಾರ ಚಾಲನೆ ನೀಡಿದರು
ಆಧುನೀಕರಣಗೊಂಡ ಬಂಗಾರದೊಡ್ಡಿ ನಾಲೆಗೆ ಮುಂಗಾರು ಹಂಗಾಮು ಬೆಳೆಗಾಗಿ ನೀರು ಹರಿಸುವ ಕಾರ್ಯಕ್ಕೆ ಶಾಸಕ ರವೀಂದ್ರ ಶ್ರೀಕಂಠಯ್ಯ ಬುಧವಾರ ಚಾಲನೆ ನೀಡಿದರು   

ಶ್ರೀರಂಗಪಟ್ಟಣ: ₹14 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಂಡಿರುವ ಐತಿಹಾಸಿಕ ಬಂಗಾರದೊಡ್ಡಿ ನಾಲೆ ಮೂಲಕ ಕೃಷಿ ಭೂಮಿಗೆ ನೀರು ಹರಿಸುವ ಕಾರ್ಯಕ್ಕೆ ಶಾಸಕ ರವೀಂದ್ರ ಶ್ರೀಕಂಠಯ್ಯ ಬುಧವಾರ ಚಾಲನೆ ನೀಡಿದರು.

ಪಟ್ಟಣ ಸಮೀಪ ಕಾವೇರಿ ನದಿಗೆ ನಿರ್ಮಿಸಿರುವ ಬಂಗಾರದೊಡ್ಡಿ ಅಣೆಕಟ್ಟೆಯ ಬಳಿ ಕಾವೇರಿ ನದಿಗೆ ಪೂಜೆ ಸಲ್ಲಿಸಿ, ಗೇಟ್‌ ತೆರೆದು ನೀರು ಹರಿಯಬಿಟ್ಟರು.

350 ವರ್ಷಗಳ ಹಿಂದೆ, ಕಂಠೀರವ ನರಸರಾಜ ಒಡೆಯರ್‌ ಅವರು ನಿರ್ಮಿಸಿರುವ 8 ಕಿ.ಮೀ. ಉದ್ದದ ಈ ನಾಲೆ ತೀರಾ ಶಿಥಿಲಗೊಂಡಿತ್ತು. ನೀರು ಸೋರಿಕೆ ತಡೆಯುವುದು ಮತ್ತು ಮುಂದಿನ ಭಾಗಕ್ಕೆ ಸರಾಗವಾಗಿ ನೀರು ಹರಿಯು ವಂತೆ ಮಾಡಲು ಕಳೆದ ಬೇಸಿಗೆಯ ಆರಂಭದಲ್ಲಿ ನಾಲೆಯ ಆಧುನೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು ಒಂದು ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸುವ ಈ ನಾಲೆಯ ಆಧುನೀಕರಣ ಕಾಮಗಾರಿ ಭಾಗಶಃ ಮುಗಿದಿದ್ದು, ಮುಂಗಾರು ಹಂಗಾಮು ಬೆಳೆಗೆ ಅನುಕೂಲ ಆಗಲೆಂದು ನೀರು ಹರಿಸಲಾಗಿದೆ ಎಂದು ರವೀಂದ್ರ ಶ್ರೀಕಂಠಯ್ಯ ಹೇಳಿದರು.

ADVERTISEMENT

‘ಕಾವೇರಿ ನೀರಾವರಿ ನಿಗಮದ ಅನುದಾನದಲ್ಲಿ 65 ಕ್ಯುಸೆಕ್‌ ನೀರು ಹರಿವಿನ ಸಾಮರ್ಥ್ಯದ ನಾಲೆಯ ಆಧುನೀಕರಣ ಕಾಮಗಾರಿ ನಡೆದಿದೆ. ನಾಲೆಯ ಅಲ್ಪ ಸ್ವಲ್ಪ ಕೆಲಸ ಮಾತ್ರ ಬಾಕಿ ಇದ್ದು, ಒಂದೆರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಅವರು ತಿಳಿಸಿದರು.

ವೈದಿಕರಾದ ಕೆ.ಎಸ್‌. ಲಕ್ಷ್ಮೀಶ್‌ ಶರ್ಮಾ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು.

ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ತಮ್ಮೇಗೌಡ, ಪುರಸಭೆ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ಎಸ್‌.ಪ್ರಕಾಶ್‌, ಸದಸ್ಯರಾದ ಕೃಷ್ಣ‍ಪ್ಪ, ಗಂಜಾಂ ಶಿವು, ಲಿಂಗರಾಜು, ಎಸ್‌.ಟಿ. ರಾಜು, ಪೂರ್ಣಿಮಾ, ರವಿಕುಮಾರ್‌, ಚೈತ್ರಾ, ಮಾಜಿ ಸದಸ್ಯ ವಿಜೇಂದ್ರು, ಮುಖಂಡರಾದ ಸತ್ಯಪ್ಪ, ಬಾಲು, ಶೇಖರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.