ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ಹೋಬಳಿಯ 12 ಗ್ರಾಮಗಳ ಕೆರೆ– ಕಟ್ಟೆಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆ ಈ ವರ್ಷಾಂತ್ಯಕ್ಕೆ ಅನುಷ್ಠಾನಗೊಳ್ಳಲಿದೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ತಾಲ್ಲೂಕಿನ ಅರಕೆರೆ, ನೇರಲಕೆರೆ, ಕಾಲ್ಕೆರೆ, ಮಾರಸಿಂಗನಹಳ್ಳಿ, ಗಾಮನಹಳ್ಳಿ ಇತರ ಗ್ರಾಮಗಳಿಗೆ ಕಾವೇರಿ ನೀರಾವರಿ ನಿಗಮ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಸೋಮವಾರ ಭೇಟಿ ನೀಡಿ ಆಯಾ ಗ್ರಾಮಗಳ ರೈತರ ಜತೆ ಅವರು ಚರ್ಚಿಸಿದರು. ಈ ಭಾಗದ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಬೇಕು ಎಂಬುದು ನನ್ನ ತಂದೆ, ಮಾಜಿ ಸಚಿವ ಎ.ಎಸ್. ಬಂಡಿಸಿದ್ದೇಗೌಡ ಅವರ ಆಶಯವಾಗಿತ್ತು. ಈ ಯೋಜನೆ ಅನುಷ್ಠಾನಕ್ಕೆ ಕಾಲ ಕೂಡಿ ಬಂದಿದೆ ಎಂದು ಹೇಳಿದರು.
ಕಾವೇರಿ ನದಿಯಿಂದ ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆ. ತಕ್ಷಣ ಸ್ಪಂದಿಸಿದ ಅವರು ಈ ಯೋಜನೆಗೆ ₹35 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಮಂಡ್ಯಕೊಪ್ಪಲು ಬಳಿ ಕಾವೇರಿ ನದಿಯಿಂದ, ಏತ ನೀರಾವರಿ ಯೋಜನೆ ಮೂಲಕ ನೇರಲಕೆರೆ ಮಾರ್ಗವಾಗಿ ಮೊತ್ತಹಳ್ಳಿ ವರೆಗೂ ನೀರು ಕೊಂಡೊಯ್ಯಲಾಗುತ್ತದೆ. ಇದರಿಂದ ಮಳೆಯಾಶ್ರಿತ ಗ್ರಾಮಗಳ ಜನ, ಜಾನುವಾರುಗಳಿಗೆ ಬೇಸಿಗೆಯಲ್ಲೂ ನೀರು ಸಿಗಲಿದೆ. ಕೃಷಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಜಯಂತ್, ಎಇಇ ಜಯರಾಂ, ಎಇ ಕಿರಣ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಈಶ್ವರ್, ತಾ.ಪಂ. ಮಾಜಿ ಸದಸ್ಯ ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.