ADVERTISEMENT

ಶ್ರೀರಂಗಪಟ್ಟಣ: ಕರಿಘಟ್ಟದಲ್ಲಿ ಬಾಡಿದ ಗಿಡಗಳಿಗೆ ‘ಅಡ್ಡೆ’ ನೀರಿನ ಆಸರೆ

ಶಿವರಾತ್ರಿ ಪ್ರಯುಕ್ತ ವಿಶೇಷ ಪರಿಸರ ಸೇವೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 3:42 IST
Last Updated 2 ಮಾರ್ಚ್ 2022, 3:42 IST
ಕರಿಘಟ್ಟ ಪ್ರಕೃತಿ ತಾಣದಲ್ಲಿ ಹಸಿರು ಸೇನೆ ಬಳಗದ ಸದಸ್ಯರು ಶಿವರಾತ್ರಿಯ ದಿನವಾದ ಮಂಗಳವಾರ ಅಡ್ಡೆಯಲ್ಲಿ ನೀರು ಹೊತ್ತೊಯ್ದು ಗಿಡಗಳಿಗೆ ಉಣಿಸಿದರು
ಕರಿಘಟ್ಟ ಪ್ರಕೃತಿ ತಾಣದಲ್ಲಿ ಹಸಿರು ಸೇನೆ ಬಳಗದ ಸದಸ್ಯರು ಶಿವರಾತ್ರಿಯ ದಿನವಾದ ಮಂಗಳವಾರ ಅಡ್ಡೆಯಲ್ಲಿ ನೀರು ಹೊತ್ತೊಯ್ದು ಗಿಡಗಳಿಗೆ ಉಣಿಸಿದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಕರಿಘಟ್ಟ ಪ್ರಕೃತಿ ತಾಣದಲ್ಲಿ ಎರಡು ವರ್ಷಗಳ ಹಿಂದೆ ನೆಟ್ಟಿದ್ದ ಗಿಡಗಳು ಬಾಡುತ್ತಿದ್ದರಿಂದ ಹಸಿರು ಸೇನೆ ಬಳಗದ ಸದಸ್ಯರು, ಶಿವರಾತ್ರಿಯ ಪ್ರಯುಕ್ತ ಅಡ್ಡೆಯಲ್ಲಿ ನೀರು ತುಂಬಿಬೆಟ್ಟದ ತುದಿಯವರೆಗೂ ಹೊತ್ತೊಯ್ದು ಗಿಡಗಳಿಗೆ ಉಣಿಸಿದರು.

ಕರಿಘಟ್ಟದಲ್ಲಿ ಒಂದು ದಶಕದಿಂದ ಬಗೆಬಗೆಯ ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ‘ಪರಿಸರ’ ರಮೇಶ್‌ ನೇತೃತ್ವದ ಹಸಿರು ಸೇನೆ ಬಳಗದ ಸದಸ್ಯರು, ಚಿಕ್ಕದೇವರಾಯ ಸಾಗರ ನಾಲೆಯಿಂದ ಬೆಟ್ಟದ ಅರ್ಧ ಮಟ್ಟದವರೆಗೆ ಆಟೊರಿಕ್ಷಾದಲ್ಲಿ ನೀರು ಸಾಗಿಸಿ, ಅಲ್ಲಿಂದ ಬಿದಿರಿನ ಬೊಂಬಿನ ತುದಿಗೆ 20 ಲೀಟರ್‌ ಸಾಮರ್ಥ್ಯದ ನೀರಿನ ಕ್ಯಾನ್‌ಗಳನ್ನು ಕಟ್ಟಿಕೊಂಡು ಶಿಖರದವರೆಗೂ ಸಾಗಿಸಿದರು.‌

‘ಕರಿಘಟ್ಟದಲ್ಲಿ ಆಲ, ಅರಳಿ, ಬೇವು, ಹೊಂಗೆ ಗಿಡಗಳು ಬಾಡುತ್ತಿದ್ದವು. ಸಮುದ್ರ ಮಟ್ಟದಿಂದ ಸುಮಾರು 4 ಸಾವಿರ ಅಡಿಗಳ ಎತ್ತರದಲ್ಲಿರುವ ಕರಿಘಟ್ಟದ ತುದಿಗೆ ವಾಹನಗಳು ಹೋಗಲು ಸಾಧ್ಯವಿಲ್ಲ. ಹೀಗಾಗಿ, ಅಡ್ಡೆ ಕಟ್ಟಿಕೊಂಡು ನೀರು ಸಾಗಿಸಿ ಉಣಿಸುತ್ತಿದ್ದೇವೆ. ಗಿಡಗಳ ಬೇರಿನ ಸುತ್ತ ಒಣಗಿದ ಎಲೆ, ಹುಲ್ಲುಗಳನ್ನು ಮುಚ್ಚಿ ತೇವಾಂಶ ಆರದಂತೆ ನೋಡಿ ಕೊಳ್ಳುತ್ತಿದ್ದೇವೆ. ವಿವಿಧ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು ಕೈ ಜೋಡಿಸುತ್ತಿದ್ದಾರೆ. ಇನ್ನೂ ಕೆಲವು ದಿನ ನೀರುಣಿಸುತ್ತೇವೆ’ ಎಂದು ರಮೇಶ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.