ADVERTISEMENT

ಕುಟುಂಬ ರಾಜಕಾರಣ ಮಾಡುವುದಿಲ್ಲ: ಸುಮಲತಾ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 13:06 IST
Last Updated 14 ಆಗಸ್ಟ್ 2022, 13:06 IST

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ‘ನಾನು ಎಂದಿಗೂ ಕುಟುಂಬ ರಾಜಕಾರಣ ಮಾಡುವುದಿಲ್ಲ, ನನ್ನ ಮಗನಿಗಾಗಿ ಯಾವ ಪಕ್ಷದಿಂದಲೂ ಟಿಕೆಟ್‌ ಕೇಳುವುದಿಲ್ಲ. ಅರ್ಹತೆ, ಅದೃಷ್ಟ, ಜನರ ಆಶೀರ್ವಾದ ಇದ್ದರೆ ಮಾತ್ರ ನನ್ನ ಮಗ ಅಭಿಷೇಕ್‌ ರಾಜಕಾರಣ ಮಾಡುತ್ತಾನೆ’ ಎಂದು ಸಂಸದೆ ಸುಮಲತಾ ಭಾನುವಾರ ಹೇಳಿದರು.

ಕೆಂಪೇಗೌಡ ಜಯಂತಿ, ಶಂಕರೇಗೌಡ ಟ್ರಸ್ಟ್‌ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಟಿಕೆಟ್‌ ಕೊಡಿ, ಮಂತ್ರಿ ಸ್ಥಾನ ಕೊಡಿ ಎಂದು ಅಂಬರೀಷ್‌ ಅವರು ಎಂದೂ, ಯಾರ ಮುಂದೆಯೂ ಕೈಚಾಚಿಲ್ಲ. ನಾನು ಕೂಡ ಅವರ ದಾರಿಯಲ್ಲೇ ನಡೆಯುತ್ತೇನೆ. ಅಂಬರೀಷ್‌ ಕೂಡ ಕುಟುಂಬ ರಾಜಕಾರಣ ಮಾಡಿಲ್ಲ’ ಎಂದರು.

‘ನಾನು ಬಿಜೆಪಿ ಸೇರುತ್ತಿದ್ದೇನೆ, ಕೇಂದ್ರ ಮಂತ್ರಿ ಸ್ಥಾನ ಕೇಳುತ್ತಿದ್ದೇನೆ, ಮದ್ದೂರಿನಿಂದ ಮಗನಿಗೆ ಟಿಕೆಟ್‌ ಕೇಳುತ್ತಿದ್ದೇನೆ ಎಂದೆಲ್ಲಾ ಕೆಲವರು ಕೇಳುತ್ತಾರೆ. ಅಂಬರೀಷ್‌ ಅವರ ಹೆಂಡತಿಯಾಗಿ ನಾನು ಈ ಜನ್ಮದಲ್ಲಿ ಯಾರನ್ನೂ, ಯಾವುದಕ್ಕೂ ಕೈಚಾಚುವುದಿಲ್ಲ. ಅಭಿಷೇಕ್‌ಗಾಗಿ ನಾನು ಏನನ್ನೂ ಕೇಳುವುದಿಲ್ಲ, ನನ್ನ ಚುನಾವಣೆಯಲ್ಲಿ ನನಗೆ ಬೆಂಬಲ ಕೊಟ್ಟವರ ಪರವಾಗಿ ನಾನು ನಿಲ್ಲುತ್ತೇನೆ’ ಎಂದರು.

ADVERTISEMENT

ಸಚಿವ ಆರ್‌.ಅಶೋಕ್‌ ಆಹ್ವಾನ: ಕಂದಾಯ ಸಚಿವ ಆರ್‌.ಅಶೋಕ್‌ ಸಂಸದೆ ಸುಮಲತಾ ಅವರನ್ನು ಬಿಜೆಪಿ ಸೇರುವಂತೆ ಸಭೆಯಲ್ಲಿ ಆಹ್ವಾನ ನೀಡಿದರು. ‘ಬಿಜೆಪಿ ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಪಕ್ಷ. ಬೇಗ ಪಕ್ಷ ಸೇರಿ ದಡ ಮುಟ್ಟುವಂತೆ ಸುಮಲತಾ ಅವರಿಗೆ ತಿಳಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.