ADVERTISEMENT

ಕೊರೊನಾ ಸೋಂಕಿತರಿಗೆ ಯೋಗಾಭ್ಯಾಸ, ತರಬೇತಿ

ಸ್ವಯಂ ಪ್ರೇರಿತರಾಗಿ ಮಾರ್ಗದರ್ಶನ ನೀಡುತ್ತಿರುವ ಡಾ.ರಾಘವೇಂದ್ರ

ಹಾರೋಹಳ್ಳಿ ಪ್ರಕಾಶ್‌
Published 10 ಮೇ 2021, 3:56 IST
Last Updated 10 ಮೇ 2021, 3:56 IST
ಪಾಂಡವಪುರ ತಾಲ್ಲೂಕಿನ ಕಿತ್ತೂರು ರಾಣಿ ಚನ್ನಮ್ಮ ಹಾಸ್ಟೆಲ್‌ನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ಯೋಗಾಭ್ಯಾಸ ಮಾಡಿಸುತ್ತಿರುವ ಡಾ.ರಾಘವೇಂದ್ರ
ಪಾಂಡವಪುರ ತಾಲ್ಲೂಕಿನ ಕಿತ್ತೂರು ರಾಣಿ ಚನ್ನಮ್ಮ ಹಾಸ್ಟೆಲ್‌ನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ಯೋಗಾಭ್ಯಾಸ ಮಾಡಿಸುತ್ತಿರುವ ಡಾ.ರಾಘವೇಂದ್ರ   

ಪಾಂಡವಪುರ: ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಘವೇಂದ್ರ ಅವರು ಕೊರೊನಾ ಸೋಂಕಿತರಿಗೆ ಸ್ವಯಂಪ್ರೇರಿತರಾಗಿ ಯೋಗಾಭ್ಯಾಸ ಮಾಡಿಸುವ ಮೂಲಕ ಅವರಲ್ಲಿ ಧೈರ್ಯ ತುಂಬುತ್ತಿದ್ದಾರೆ.

ತಾಲ್ಲೂಕಿನ ಮೂಡಲಕೊಪ್ಪಲು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕೋವಿಡ್‌ ಕೇರ್ ಸೆಂಟರ್‌ನ ಸೋಂಕಿತರಿಗೆ ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದ,ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಡಾ.ರಾಘವೇಂದ್ರ ಅವರು ನಿತ್ಯ ಯೋಗಾಭ್ಯಾಸ ಮಾಡಿಸುತ್ತಿದ್ದಾರೆ.

ಸೋಂಕಿತರಿಗೆ ಕೋವಿಡ್ ಚಿಕಿತ್ಸೆಯ ಜತೆಗೆ ಯೋಗಾಭ್ಯಾಸ ಮಾಡಿಸಿದರೆ ದೇಹ, ಮನಸ್ಸು ಸದೃಢಗೊಳ್ಳುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ. ಇದರಿಂದಾಗಿ ಸೋಂಕಿತರು ಬೇಗ ಗುಣಮುಖ ರಾಗಲು ಸಾಧ್ಯ ಎಂದು ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ADVERTISEMENT

ಮೂಡಲಕೊಪ್ಪಲು ವಸತಿ ಶಾಲೆಯ ಕೋವಿಡ್ ಕೇರ್‌ ಕೇಂದ್ರದಲ್ಲಿರುವ 130 ಮಂದಿಗೆ ನಿತ್ಯ ಬೆಳಿಗ್ಗೆ 6.30ರಿಂದ 8ರವರೆಗೆ ಸೂರ್ಯ ನಮಸ್ಕಾರ, ವೃಕ್ಷಾಸನ, ತಾಡಾಸನ, ಶಲಭಾಸನ, ಬಕಾಸನ, ಗರುಡಾಸನ, ಪದ್ಮಾಸನ, ಬಸ್ತೀಕಾ, ಕಪಾಲಬಾತಿ, ಪ್ರಾಣಾಯಾಮ ಹೇಳಿಕೊಡುತ್ತಿದ್ದಾರೆ.

ಆತಂಕ ಮತ್ತು ಭಯದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರೊಂದಿಗೆ ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಹಾಗೂ ಡಾ.ರಾಘವೇಂದ್ರ ಅವರು ಚರ್ಚೆ ನಡೆಸಿದರು. ಮಾ‌ತ್ರೆ, ಔಷಧಿ, ಊಟೋಪಚಾರದ ಜತೆಗೆ ಮಾನಸಿಕ ಸ್ಥೈರ್ಯದ ಅಗತ್ಯವನ್ನು ಮನದಟ್ಟು ಮಾಡಿಕೊಟ್ಟರು. ಪ್ರಾರಂಭದಲ್ಲಿ ಯೋಗಾಭ್ಯಾಸದಲ್ಲಿ ನಿರಾಸಕ್ತಿ ತೋರಿಸುತ್ತಿದ್ದ ಸೋಂಕಿತರು ಕ್ರಮೇಣ ತೊಡಗಿಸಿಕೊಂಡರು. ಯುವಕ, ಯುವತಿಯರು, ಮಧ್ಯವಯಸ್ಸಿನವರು ಗಂಭೀರವಾಗಿ ಅಭ್ಯಾಸ ಮಾಡುತ್ತಾರೆ. ವೃದ್ಧರು ಸಾಮರ್ಥ್ಯಕ್ಕನುಗುಣವಾಗಿ ಅಭ್ಯಾಸ ಮಾಡುತ್ತಾರೆ.

‘ನಾನು ಕಲಿತಿರುವುದನ್ನು ಮತ್ತೊಬ್ಬರಿಗೆ ಕಲಿಸುವುದು ನನ್ನ ಅಭಿಲಾಷೆ. ಅದರಲ್ಲೂ ಸೋಂಕಿತರಿಗೆ ಮಾನಸಿಕ ಮತ್ತು ದೈಹಿಕವಾಗಿ ಸ್ಥೈರ್ಯ, ಆತ್ಮಶಕ್ತಿ ತುಂಬುವುದು ಅಗತ್ಯವಿದೆ. ಇದನ್ನು ಮನಗಂಡು ನಾನು ಸ್ವಇಚ್ಛೆಯಿಂದ ಯೋಗಾಭ್ಯಾಸ ಮಾಡಿಸುತ್ತಿದ್ದೇನೆ’ ಎನ್ನುತ್ತಾರೆ ಡಾ.ರಾಘವೇಂದ್ರ ಅವರು.

ಗುಣಮುಖರಾದವರು ಡಾ.ರಾಘವೇಂದ್ರ ಅವರಿಗೆ ಧನ್ಯವಾದ ಹೇಳುತ್ತಾರೆ. ಮನೆಗೆ ಹೋದರೂ ಯೋಗಾಭ್ಯಾಸ ಮಾಡುವಂತೆ ರಾಘವೇಂದ್ರ ಅವರು ಸಲಹೆ ನೀಡುತ್ತಾರೆ.

‘ಮನಸ್ಸಿಗೆ ಆರಾಮ ಅನ್ನಿಸುತ್ತದೆ. ಕೊರೊನಾ ಭಯವಿಲ್ಲ. ಎದುರಿಸಲು ಮಾನಸಿಕ ಧೈರ್ಯ ಬಂದಿದೆ. ಯೋಗಾಭ್ಯಾಸ ಉಪಯುಕ್ತವಾಗಿದೆ. ಮನೆಯಲ್ಲಿಯೂ ಇದನ್ನು ಮುಂದುವರಿಸುತ್ತೇನೆ’ ಎಂದು ಪಲ್ಲವಿ ಕಾಳೇನಹಳ್ಳಿ, ವೀಣಾ ಮಾಡ್ರಹಳ್ಳಿ ತಿಳಿಸಿದರು. ‘ಜೀವನಕ್ಕೆ ಉಪಯುಕ್ತವಾದ ಯೋಗಾಸನ ‌ಕಲಿತೆ. ಅದರಲ್ಲೂ ಪ್ರಾಣಾಯಾಮ ಈ ಸಂದರ್ಭದಲ್ಲಿ ಉಪಯೋಗಕ್ಕೆ ಬಂತು. ಅಭ್ಯಾಸ ಮುಂದುವರಿಸುತ್ತೇನೆ’ ಎಂದು ಯೋಗಣ್ಣ ಮಾಡರಹಳ್ಳಿ ಖುಷಿ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.