ADVERTISEMENT

ನೈತಿಕ ಮೌಲ್ಯಗಳು ಇಂದಿನ ಅಗತ್ಯ

ಮುದುಗುರ್ಕಿ ಬಳಿಯ ಆರ್‌ಸಿಎಂ ಕಾಲೇಜಿನಲ್ಲಿ ‘ಸಂತೋಷದಾಯಕ ತರಗತಿಗಳು ಮತ್ತು ಉಲ್ಲಾಸಭರಿತ ವಾತಾವರಣ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 14:38 IST
Last Updated 6 ಸೆಪ್ಟೆಂಬರ್ 2019, 14:38 IST
ಆರ್‌ಸಿಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಂತೋಷದಾಯಕ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದರು.
ಆರ್‌ಸಿಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಂತೋಷದಾಯಕ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದರು.   

ಚಿಕ್ಕಬಳ್ಳಾಪುರ: ‘ಇಂದಿನ ಯುವ ಜನಾಂಗ ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮುಖ್ಯವಾಗಿ ನೈತಿಕ ಮೌಲ್ಯಗಳ ಮಹತ್ವ ತಿಳಿಸಿಕೊಡುವ ಮೂಲಕ ಯುವ ಪೀಳಿಗೆಯನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಹೇಳಿದರು.

ದೇವನಹಳ್ಳಿ ಸಮೀಪದ ಮುದುಗುರ್ಕಿ ಬಳಿ ಇರುವ ರೀಜನಲ್ ನಿರ್ವಹಣಾ ಅಧ್ಯಯನ ಕಾಲೇಜಿನಲ್ಲಿ (ಆರ್‌ಸಿಎಂ) ಶುಕ್ರವಾರ ಆಯೋಜಿಸಿದ್ದ ‘ಸಂತೋಷದಾಯಕ ತರಗತಿಗಳು ಮತ್ತು ಉಲ್ಲಾಸಭರಿತ ವಾತಾವರಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಬದುಕುವುದೇ ನಿಜವಾದ ಸಂತೋಷ. ಆ ನಿಟ್ಟಿನಲ್ಲಿ ಯುವಜನರು ಇವತ್ತು ಪೋಷಕರನ್ನು ಗೌರವಿಸುವ ಗುಣ ರೂಢಿಸಿಕೊಳ್ಳಬೇಕಿದೆ. ಸ್ವಾರ್ಥ ಮನೋಭಾವ ಬಿಟ್ಟು ಇಡೀ ಸಮಾಜವೇ ನನ್ನದು ಎಂಬ ಭಾವನೆ ಬೆಳೆಸಿಕೊಳ್ಳಬೇಕಿದೆ’ ಎಂದು ತಿಳಿಸಿದರು.

ADVERTISEMENT

‘ನಮ್ಮ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಬರೀ ಪಠ್ಯವನ್ನು ಬೋಧಿಸುವುದು ಮಾತ್ರವಲ್ಲದೇ, ಯೋಗ, ಧಾನ್ಯ, ಸಂಗೀತ ಮುಂತಾದ ಪಠ್ಯೇತರ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳಿಗೆ ಒತ್ತು ನೀಡುವ ಮೂಲಕ ಉತ್ತಮ ಮಾರ್ಗದರ್ಶನ ಕಲ್ಪಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಆರ್‌ಸಿಎಂ ಕಾಲೇಜು ಸಾಂಪ್ರದಾಯಿಕತೆಯನ್ನು ಮೀರಿ ಸಾಗುತ್ತಿರುವುದು, ಪದವೀಧರರಲ್ಲಿ ಪ್ರಾಯೋಗಿಕ ಜ್ಞಾನ ಬೆಳೆಸುತ್ತಿರುವುದು ಸಂತಸದ ವಿಚಾರ’ ಎಂದು ಶ್ಲಾಘಿಸಿದರು.

ಆರ್‌ಸಿಎಂ ಬೆಂಗಳೂರು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಸ್.ಆರ್.ಮಂಡಲ್ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ನಾಯಕತ್ವದ ಕೌಶಲ ಬೆಳೆಸುವಲ್ಲಿ ಮತ್ತು ಹಲವಾರು ಸಂಸ್ಥೆಗಳು, ನಾಯಕರು ತಮ್ಮ ನಿರೀಕ್ಷೆಗಳನ್ನು ಪೂರೈಸಲು ತೀವ್ರ ಒತ್ತಡದಲ್ಲಿ ಸಿಲುಕಿದ್ದಾರೆ. ಆದ್ದರಿಂದ, ಒತ್ತಡ ರಹಿತ ವಾತಾವರಣ ನಿರ್ಮಿಸುವುದು ಹೇಗೆ ಎಂಬುದನ್ನು ಕಲಿಸುವುದು ಈ ಸಂತೋಷದಾಯಕ ತರಗತಿಗಳ ಮುಖ್ಯ ಉದ್ದೇಶವಾಗಿದೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳಲ್ಲಿ ಸಂತೋಷದ ಆಂತರಿಕ ಶಕ್ತಿಯನ್ನು ಅಭಿವೃದ್ಧಿಪಡಿಸಿ, ಅದನ್ನು ಬಳಸಿಕೊಂಡು ಯಶಸ್ಸಿನ ನಡುವೆ ವೈಫಲ್ಯಗಳನ್ನು ಸ್ವೀಕರಿಸುವ ಗುಣ ಬೆಳೆಸುವುದು ನಮ್ಮ ಗುರಿ. ವ್ಯವಹಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಆದರ್ಶವಾಗಿ ಬದುಕುವುದು, ಸಮಾಜದಲ್ಲಿನ ಪ್ರತಿಯೊಬ್ಬರನ್ನು ಗೌರವಿಸುವುದು ಹೇಗೆ ಎಂಬುದನ್ನು ಈ ತರಗತಿಗಳಲ್ಲಿ ಹೇಳಿಕೊಡಲಾಗುತ್ತದೆ’ ಎಂದರು.

‘ಹ್ಯಾಪಿ ಫೀಟ್‌’ ನಿರ್ದೇಶಕ ಪೃಥ್ವಿ, ಯೋಗ ಮತ್ತು ಧ್ಯಾನ ಕೇಂದ್ರದ ನಿರ್ದೇಶಕ ನಾಬೇಂದು ಸಾಹು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.