ADVERTISEMENT

ಅಂದು ಇಂಗ್ಲಿಷರ ಆಡಳಿತ, ಇಂದು ಇಂಗ್ಲಿಷ್ ಆಳ್ವಿಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 5:40 IST
Last Updated 16 ಆಗಸ್ಟ್ 2012, 5:40 IST

ಮೈಸೂರು: ಅಂದು ಇಂಗ್ಲಿಷರು ನಮ್ಮನ್ನು ಆಳುತ್ತಿದ್ದರು, ಇಂದು ಇಂಗ್ಲಿಷ್ ನಮ್ಮನ್ನು ಆಳುತ್ತಿದೆ ಎಂದು ನಾಡೋಜ ದೇ. ಜವರೇಗೌಡ ಅಭಿಪ್ರಾಯಪಟ್ಟರು.

ನಗರದ ಬಂಬೂಬಜಾರ್‌ನಲ್ಲಿರುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸಂಘದ ಅವರಣದಲ್ಲಿ ಬುಧವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಕ್ಕಿಂತ ಶ್ರೇಷ್ಠವಾದುದು ಮತ್ತೊಂದಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನೇ ಮರೆಯುತ್ತಿರುವುದು ವಿಷಾದದ ಸಂಗತಿ. ಸ್ವಿಟ್ಜರ್‌ಲ್ಯಾಂಡಿಗೆ ಭೇಟಿ ನೀಡಿದ್ದಾಗ ಭೋಜನಕೂಟವೊಂದರಲ್ಲಿ ಪಾಲ್ಗೊಂಡಿದ್ದೆ. ಅಲ್ಲಿನ ಪ್ರಜೆಯೊಬ್ಬರು ನೀವು ಗಾಂಧೀಜಿ ಅವರನ್ನು ಪ್ರತ್ಯಕ್ಷವಾಗಿ ನೋಡಿದ್ದೀರಾ ಎಂದು ಕೇಳಿದರು. ನೋಡಿರುವುದಷ್ಟೇ ಅಲ್ಲ ಅವರ ಉಡುಪನ್ನೂ ಸ್ಪರ್ಶಿಸಿದ್ದೇನೆ ಎಂದು ಹೇಳಿದೆ.

ಆಗ ವ್ಯಕ್ತಿಯು, ನೀವೇ ಪುಣ್ಯವಂತರು ಎಂದು ವಂದಿಸಿದ್ದರು. ಬಾಪೂಜಿ ಅವರ ಅಹಿಂಸೆ, ಪ್ರಾಮಾಣಿಕತೆ, ಹೋರಾಟಗಳು ವಿಶ್ವಕ್ಕೇ ಮಾದರಿಯಾದವು. ಆದರೆ ಇಂಥ ಮಹಾತ್ಮ ಭಾರತದಲ್ಲಿ ಎಲ್ಲರಿಗೂ ಅರ್ಥವಾಗಲಿಲ್ಲ. ಅವರನ್ನು ನೆಹರು ಅವರೇ ಮರೆತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಇಂದು ಶ್ರೀಮಂತರು, ಅಧಿಕಾರಿಗಳು, ಹಣಬಾಕರ ಪಾಲಾಗಿದೆ. ಸಿರಿ ಗರ ಬಡಿದವರ ನುಡಿಸಲಾಗದು ಎಂದು ಬಸವೇಶ್ವರರು ಅಂದೇ ಹೇಳಿದ್ದರು. ವಾಮಮಾರ್ಗದಲ್ಲಿ ಹಣ ಗಳಿಸಿ ತಿರುಪತಿ ತಿಮ್ಮಪ್ಪನಿಗೆ ವಜ್ರದ ಕಿರೀಟ ಅರ್ಪಿಸಿದವರು ಜೈಲು ಪಾಲಾಗಿದ್ದಾರೆ. ತಿಮ್ಮಪ್ಪನೇ ಕೋಪಗೊಂಡು ಅವರನ್ನು ಜೈಲಿಗೆ ಕಳುಹಿಸಿದ್ದಾನೆ ಎಂದು ಮಾರ್ಮಿಕವಾಗಿ ನುಡಿದರು.

ಇಂದಿನ ವಿದ್ಯಾರ್ಥಿಗಳು ಪುಸ್ತಕದ ಹುಳುಗಳು. ಅವರಲ್ಲಿ ಸಾಮಾನ್ಯಜ್ಞಾನದ ಕೊರತೆ ಎದ್ದು ಕಾಣುತ್ತದೆ. ಮಕ್ಕಳಲ್ಲಿ ಪಠ್ಯ ಕಲಿಕೆಯ ಜೊತೆಗೆ ಸಾಮಾನ್ಯಜ್ಞಾನ ವೃದ್ಧಿಸುವ ಪೂರಕ ವಾತಾವರಣವನ್ನು ಪೋಷಕರು, ಶಿಕ್ಷಕರು ಕಲ್ಪಿಸಬೇಕು ಎಂದು ಸಲಹೆ ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕಿ ಶಾರದಮ್ಮ ಮಾತನಾಡಿದರು. ಮಾಜಿ ಮೇಯರ್ ವಾಸು ಅವರು ದೇ.ಜವರೇಗೌಡ ಅವರನ್ನು ಸನ್ಮಾನಿಸಿದರು. ಏಳನೇ ತರಗತಿ, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಎಸ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.