ADVERTISEMENT

ಅಕ್ರಮ ಮದ್ಯ ಮಾರಾಟ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 6:45 IST
Last Updated 20 ಸೆಪ್ಟೆಂಬರ್ 2011, 6:45 IST

ಎಚ್.ಡಿ. ಕೋಟೆ: ಸ್ವಸಹಾಯ ಸಂಘಗಳಲ್ಲಿ ಸಾಲ ಮಾಡಿ ವ್ಯವಸಾಯಕ್ಕೆ ಹಣ ಹೊಂದಿಸಿ ಕೊಡುತ್ತೇವೆ. ಬೆಳೆ ಕೈಗೆ ಬಂದು ಆದಾಯ ಬರುವ ಸಂದರ್ಭದಲ್ಲಿ ಮಹಿಳೆಯರನ್ನು ಕಡೆಗಣಿಸಿ ಪುರುಷರು ಕೈಗೆ ಹಣ ನೀಡುತ್ತಾರೆ.

ಅವರು ಹಣ ಕುಡಿತಕ್ಕೆ ವ್ಯಯ ಮಾಡುತ್ತಿದ್ದು, ಇದರಿಂದ ಸ್ವ ಸಹಾಯ ಸಂಘದಲ್ಲಿ ಪಡೆದ ಸಾಲದ ಮರುಪಾವತಿ ಸಾಧ್ಯವಾಗುತ್ತಿಲ್ಲ ಎಂದು ಮಹಿಳಾ ಒಕ್ಕೂಟ ಸದಸ್ಯೆ ಬೊಮ್ಮಿ ಆರೋಪಿಸಿದರು.

ಪ್ರಕೃತಿ ಗಿರಿಜನ ಮಹಿಳಾ ಒಕ್ಕೂಟ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಹಯೋಗದಲ್ಲಿ ಸೋಮವಾರ ಗಂಡತ್ತೂರು ಗ್ರಾಮದಿಂದ ಎನ್. ಬೇಗೂರು ಗ್ರಾಪಂ. ಕಚೇರಿ ವರೆಗೆ ಸುಮಾರು 7 ಕಿ.ಮೀ  ಕಾಲ್ನಡಿಗೆ ಜಾಥಾದಲ್ಲಿ ಅವರು ಮಾತನಾಡಿದರು.

ಹತ್ತಿ ಬೀಜ ಹಾಗೂ ಇತರ ವ್ಯವಸಾಯದ ವೆಚ್ಚಕ್ಕಾಗಿ ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ಸಾಲ ಪಡೆದು ನೀಡುತ್ತಾರೆ. ಬೆಳೆ ಬಂದು ಅದರಿಂದ ಬರುವ ಆದಾಯವನ್ನು ಕುಡಿತದ ಚಟಕ್ಕೆ ಪುರುಷರು ಬಳಸುತ್ತಿದ್ದಾರೆ.

ಸ್ಥಳೀಯವಾಗಿ ಗ್ರಾಮಗಳಲ್ಲಿ ಇರುವ ಕೆಲವು ಅಂಗಡಿಗಳಲ್ಲೇ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರತಿದಿನ ಶಾಲಾ ಮಕ್ಕಳೂ ಸೇರಿದಂತೆ ಗಿರಿಜನ ಯುವಕರು, ಕೂಲಿ ಕಾರ್ಮಿಕರು ಮದ್ಯಪಾನ ಮಾಡಿ ಗಲಾಟೆ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಹೆಂಗಸರು ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ. ಆದ್ದರಿಂದ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಚಿಲ್ಲರೆ ಮದ್ಯ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎನ್. ಬೇಗೂರು ಗ್ರಾ.ಪಂ. ಅಧ್ಯಕ್ಷ ಬಿ.ಟಿ. ನರಸಿಂಹಮೂರ್ತಿ ಮನವಿ ಸ್ವೀಕರಿಸಿ, ಅಗತ್ಯ ಕ್ರಮದ ಭರವಸೆ ನೀಡಿರು. ಪುಟ್ಟಿ, ರಾಜಿ, ಚಿಕ್ಕಮ್ಮಣಿ, ಸುನಿತಾ ಸೇರಿದಂತೆ 200ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.