ADVERTISEMENT

ಅಧಿಕಾರಿ ರಕ್ಷಿಸಲು ಷಡ್ಯಂತ್ರ: ಆರೋಪ

ವಿಚಾರಣೆ: ಎಪಿಎಂಸಿ ಸದಸ್ಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 7:26 IST
Last Updated 6 ಜೂನ್ 2018, 7:26 IST

ನಂಜನಗೂಡು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಭಾರಿ ಕಾರ್ಯದರ್ಶಿ ನಂಜುಂಡಸ್ವಾಮಿ ಅವರ ವಿರುದ್ಧ ಸಲ್ಲಿಸಲಾಗಿದ್ದ ದೂರಿನ ವಿಚಾರಣೆಯನ್ನು  ಸದಸ್ಯರ ಗಮನಕ್ಕೆ ತರದೆ ಏಕಪಕ್ಷೀಯವಾಗಿ  ನಡೆಸಲಾಗುತ್ತಿದೆ ಎಂದು ಆರೋಪಿಸಿ ಎಪಿಎಂಸಿ. ಸದಸ್ಯರಾದ ಸಿಂಧೂವಳ್ಳಿ ಕೆಂಪಣ್ಣ ಹಾಗೂ ಗುರುಸ್ವಾಮಿ ಎಪಿಎಂಸಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಜನವರಿ 6 ರಂದು ಅಧ್ಯಕ್ಷ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಸಲಾದ ಸಾಮಾನ್ಯ ಸಭೆಗೆ ಸಮಿತಿಯ ಪ್ರಭಾರಿ ಕಾರ್ಯದರ್ಶಿ ನಂಜುಂಡಸ್ವಾಮಿ ಒಂದು ಗಂಟೆ ತಡವಾಗಿ ಬಂದಿದ್ದರು. ಈ ಬಗ್ಗೆ  ಅವರನ್ನು ಪ್ರಶ್ನಿಸಿದ ಸದಸ್ಯರು, ಅಧ್ಯಕ್ಷರ ಅನುಮತಿ ಪಡೆಯದೆ ಮನ ಬಂದಂತೆ ಬೇಕಾಬಿಟ್ಟಿಯಾಗಿ ಸಭೆಗೆ ಹಾಜರಾಗಿದ್ದ ಬಗ್ಗೆ ತಕರಾರು ತೆಗೆದಿದ್ದರು.

ಈ ವೇಳೆ ನಂಜುಂಡಸ್ವಾಮಿ ತಮ್ಮ ಕೈಲಿದ್ದ ಕಡತವನ್ನು ಎಸೆದು, ನಾನು ಬರುವುದೆ ಹೀಗೆ, ಯಾರಿಗೆ ಬೇಕಾದರೂ ದೂರು ನೀಡಿಕೊಳ್ಳಿ ಎಂದು ಸದಸ್ಯರ ವಿರುದ್ಧ ಅಗೌರವದಿಂದ ಮಾತನಾಡಿ ಸಭೆಯಿಂದ ಹೊರ ನಡೆದಿದ್ದರು. ಅವರ ಉದ್ದಟತನದ ವರ್ತನೆ ಖಂಡಿಸಿ,  ಶಿಸ್ತು ಕ್ರಮ ಜರುಗಿಸಲು ನಿರ್ಣಯ ಕೈಗೊಂಡು ಮಾರುಕಟ್ಟೆ ಸಮಿತಿಯ ರಾಜ್ಯ ನಿರ್ದೇಶಕರಿಗೆ ಜನವರಿ 30 ದೂರು ನೀಡಲಾಗಿತ್ತು’ ಎಂದು ಸದಸ್ಯ ಕೆಂಪಣ್ಣ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ರಾಜ್ಯ ನಿರ್ದೇಶಕರು ಮೈಸೂರಿನ ಎಪಿಎಂಸಿ ಕಾರ್ಯದರ್ಶಿ ಮಹೇಶ್ ಅವರನ್ನು ವಿಚಾರಣೆ ನಡೆಸುವಂತೆ ನೇಮಿಸಿದ್ದರು. ಅದರಂತೆ ವಿಚಾರಣೆ ನಡೆಸಲಾಗುತ್ತಿದ್ದು, ಈ ಕುರಿತು ದೂರು ನೀಡಿದ್ದ ಸದಸ್ಯರ ಗಮನಕ್ಕೆ ತರದೆ,  ಅಧ್ಯಕ್ಷ ಮಾದಪ್ಪ ಅವರ ಕಚೇರಿಯಲ್ಲಿ ಗುಪ್ತವಾಗಿ ಮಹೇಶ್ ಅವರು ವಿಚಾರಣೆ ನಡೆಸುತ್ತಿದ್ದಾರೆ. ವಿಷಯ ತಿಳಿದು ಈ ಬಗ್ಗೆ ಪ್ರಶ್ನಿಸಿದ ನಮ್ಮನ್ನು ಕಚೇರಿಯಿಂದ ಹೊರಗೆ ಕಳುಹಿಸಿದ್ದಾರೆ.  ನಂಜುಂಡಸ್ವಾಮಿ ಅವರನ್ನು ರಕ್ಷಿಸಲು ಮಹೇಶ್ ಅವರು ವಿಚಾರಣೆ ನಡೆಸುವಂತೆ ನಾಟಕವಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೂರು ನೀಡಿದ್ದ ಅಧ್ಯಕ್ಷರಿಗೆ ಸಮನ್ಸ್ ಕಳುಹಿಸಲಾಗಿತ್ತು. ನಿಯಮದಂತೆ ಅಧ್ಯಕ್ಷರನ್ನು ವಿಚಾರಣೆ ನಡೆಸಿದ್ದೇನೆ. ಹೆಚ್ಚುವರಿ ಸಾಕ್ಷಿಗಳ ಅಗತ್ಯ ಬಿದ್ದರೆ ಸದಸ್ಯರನ್ನು ಕರೆದು ವಿಚಾರಣೆ ನಡೆಸುತ್ತೇನೆ. ಯಾರನ್ನೂ ರಕ್ಷಿಸುತ್ತಿಲ್ಲ’ ಎಂದು ವಿಚಾರಣಾಧಿಕಾರಿ ಮಹೇಶ್ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.