ADVERTISEMENT

ಅಧ್ಯಕ್ಷೆ, ಸದಸ್ಯರ ನಡುವೆ ಮುಸುಕಿನ ಗುದ್ದಾಟ

ಕೆ.ಆರ್.ನಗರ ಪುರಸಭೆ; ಅರ್ಧಗಂಟೆಯಲ್ಲಿ ಮುಗಿದ ಬಜೆಟ್ ಸಭೆ, ಹಲವು ಸದಸ್ಯರು ಗೈರುಹಾಜರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 11:22 IST
Last Updated 1 ಮಾರ್ಚ್ 2018, 11:22 IST
ಸಭೆಯಲ್ಲಿದ್ದ ಸದಸ್ಯರು
ಸಭೆಯಲ್ಲಿದ್ದ ಸದಸ್ಯರು   

ಕೆ.ಆರ್.ನಗರ: ಇಲ್ಲಿನ ಪುರಸಭೆಯಲ್ಲಿ ಅಧ್ಯಕ್ಷೆ ಕವಿತಾ ವಿಜಯಕುಮಾರ್ ಬುಧವಾರ 2017–18ನೇ ಸಾಲಿನ ₹ 31.95ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.

ಎಸ್.ಎಫ್.ಸಿ ಅಭಿವೃದ್ಧಿ ಅನುದಾನದಿಂದ ₹ 1.51 ಕೋಟಿ, 14ನೇ ಹಣಕಾಸು ಯೋಜನೆಯಿಂದ ₹ 1.50 ಕೋಟಿ, ಎಸ್.ಎಫ್.ಸಿ ಕುಡಿಯುವ ನೀರು ಅನುದಾನದಿಂದ ₹ 30 ಲಕ್ಷ, ಸಿ.ಎಂ.ಎಸ್.ಎಂ.ಟಿ.ಡಿ.ಪಿ ಅನುದಾನದಿಂದ ₹ 7.50ಕೋಟಿ, ಸ್ವಚ್ಛ ಭಾರತ್ ಯೋಜನೆ ಅನುದಾನದಿಂದ ₹ 3.3 ಕೋಟಿ, ಎಸ್.ಎಫ್.ಸಿ ವಿಶೇಷ ಅನುದಾನದಿಂದ ₹ 15 ಲಕ್ಷ, ಎಸ್.ಎಫ್.ಸಿ ವೇತನ ಅನುದಾನದಿಂದ
₹ 1.35 ಕೋಟಿ, ಎಸ್.ಎಫ್.ಸಿ ವಿದ್ಯುತ್ ಚ್ಛಕ್ತಿ ಅನುದಾನದಿಂದ ₹ 1.9 ಕೋಟಿ ಸೇರಿ ಒಟ್ಟು ₹ 16.43 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದರು.

ಅಲ್ಲದೆ, ಪುರಸಭೆ ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ ₹ 1.18 ಕೋಟಿ, ನೀರಿನ ಕಂದಾಯದಿಂದ
₹ 50ಲಕ್ಷ, ಮನೆ ಕಂದಾಯದಿಂದ
₹ 96.16 ಲಕ್ಷ, ಇತರೆ ಮೂಲಗಳಿಂದ ₹ 62 ಲಕ್ಷ ಸೇರಿ ಒಟ್ಟು ₹ 3.26 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.

ADVERTISEMENT

ವೆಚ್ಚಗಳು: ರೇಡಿಯೊ ಮೈದಾನ ನವೀಕರಣಕ್ಕೆ ₹ 10 ಲಕ್ಷ, ಕಟ್ಟಡಗಳ ನಿರ್ಮಾಣಕ್ಕೆ ₹ 30 ಲಕ್ಷ, ಅಭಿವೃದ್ಧಿ ಕಾಮಗಾರಿಗಳಿಗೆ ₹ 8 ಕೋಟಿ, ನೆಲಭರ್ತಿ ಜಾಗದ ಅಭಿವೃದ್ಧಿಗಾಗಿ
₹ 70 ಲಕ್ಷ, ನೈರ್ಮಲ್ಯ ಶಾಖೆಗೆ ವಿವಿಧ ಪರಿಕರಗಳಿಗಾಗಿ ₹ 75 ಲಕ್ಷ, ನೀರು ಸರಬರಾಜು ವಿಭಾಗಕ್ಕೆ ₹ 30 ಲಕ್ಷ, ಒಳಚರಂಡಿ ಕಾಮಗಾರಿಗೆ ₹ 20 ಲಕ್ಷ, ಮೂಲಸೌಕರ್ಯಗಳ ನಿರ್ವಹಣೆಗೆ
₹ 15 ಲಕ್ಷ, ಸರ್ಕಾರಿ ಕಾರ್ಯಕ್ರಮಗಳಿಗೆ ₹ 5 ಲಕ್ಷ, ಕಂಪ್ಯೂಟರ್ ಖರೀದಿಗೆ ₹ 5 ಲಕ್ಷ, ಬೀದಿದೀಪ ನಿರ್ವಹಣೆಗೆ ₹ 32 ಲಕ್ಷ, ಶೇ 24.10 ಅಭಿವೃದ್ಧಿ ಯೋಜನೆಗೆ ₹ 39.64 ಲಕ್ಷ, ಶೇ 7.25 ಯೋಜನೆಗೆ ₹ 11.93 ಲಕ್ಷ, ಶೇ 3 ಯೋಜನೆಗೆ
₹ 4.93 ಲಕ್ಷ, ಒಟ್ಟು ₹ 11.48 ಕೋಟಿ ಖರ್ಚು ಮಾಡಲಾಗುತ್ತದೆ ಎಂದರು.

ಏಪ್ರಿಲ್ ನಿಂದ ನಗದು ವ್ಯವಹಾರ ನಿಷೇಧಿಸಲಾಗುವುದು. ಕಚೇರಿಯಲ್ಲಿಯೇ ಬ್ಯಾಂಕ್ ಕೌಂಟರ್ ತೆರೆಯಲಾಗುವುದು. ಪ್ರತಿನಿತ್ಯ ಕುಡಿಯುವ ನೀರು ಒದಗಿಸಲು ಮತ್ತು ನಲ್ಲಿಗಳಿಗೆ ಮೀಟರ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯವಾಗಿ ಆದಾಯ ಹೆಚ್ಚಿಸಲು ಸೆಲ್ಲರ್ ಮೇಲೆ ಕಾಂಪ್ಲೆಕ್ಸ್ ಮತ್ತು ಮಧುವನಹಳ್ಳಿಯ ರಸ್ತೆಯ ಕಚೇರಿ ಹಿಂಭಾಗ ಕಾಂಪ್ಲೆಕ್ಸ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪಂಪ್ ಹೌಸ್ ಆಧುನೀಕರಣಗೊಳಿ ಸಲು ಮುಂದುವರೆದ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ಹಾಗೂ ನಿರ್ಬಂಧಿತ ಸ್ಥಳಗಳಲ್ಲಿ ಕಸ ಹಾಕಿದ್ದಲ್ಲಿ ವ್ಯಕ್ತಿ, ಸಂಸ್ಥೆಗಳಿಗೆ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.
**
ಫೆ.27ರಂದು ಸಾಮಾನ್ಯ ಸಭೆ: ಫೆ.28ರಂದು ಬಜೆಟ್ ಸಭೆ ಕರೆಯಲಾಗಿತ್ತು. ಆದರೆ, ಅಧ್ಯಕ್ಷರು ಮತ್ತು ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಸಾಮಾನ್ಯ ಸಭೆಗೆ ಬಹುತೇಕರು ಗೈರು ಹಾಜರಾಗಿದ್ದರು. ಕೋರಂ ಅಭಾವದಿಂದಾಗಿ ಫೆ.28ರಂದು ಸಾಮಾನ್ಯ ಸಭೆ ಮತ್ತು ಬಜೆಟ್ ಸಭೆ ಎರಡೂ ಒಂದೇ ದಿನ ಕರೆಯಲಾಯಿತು. ಅಧ್ಯಕ್ಷರ ಮತ್ತು ಸದಸ್ಯರ ಭಿನ್ನಾಭಿಪ್ರಾಯ ಬುಧವಾರವೂ ಮುಂದುವರೆದಿತ್ತು.

ಇದರಿಂದ ಬೆಳಿಗ್ಗೆ 23 ಸದಸ್ಯರಲ್ಲಿ 7 ಸದಸ್ಯರು ಸಭೆಗೆ ಆಗಮಿಸಿದ್ದರು. ಮುಂದುವರಿದ ಸಾಮಾನ್ಯ ಸಭೆಗೆ 6 ಜನ ಸದಸ್ಯರು ಸಾಕಾಗುತ್ತದೆ ಎಂದು ಸಾಮಾನ್ಯ ಸಭೆ ನಡೆಸಲಾಯಿತು. ಅಲ್ಲದೇ ವಿವಿಧ ವಿಷಯಗಳಿಗೆ ಅನುಮೋದನೆಯೂ ಪಡೆಯಲಾಯಿತು.

ಆದರೆ ಬಜೆಟ್ ಸಭೆ ಮಧ್ಯಾಹ್ನ 3ಕ್ಕೆ ಮುಂದೂಡಲಾಯಿತು. ಭಿನ್ನಾಭಿಪ್ರಾಯ ಹೊಂದಿದ್ದ ಸದಸ್ಯರು ಶಾಸಕ ಸಾ.ರಾ.ಮಹೇಶ್ ಅವರನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರಲ್ಲದೇ ಅಧ್ಯಕ್ಷೆ ಕವಿತಾ ವಿಜಯಕುಮಾರ್ ಅವರಿಂದ ರಾಜೀನಾಮೆ ಪಡೆದು ಹರ್ಷಲತಾ ರಾಜಾ ಶ್ರೀಕಾಂತ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಪಟ್ಟು ಹಿಡಿದರು ಎನ್ನಲಾಗಿದೆ.

ಇದಕ್ಕೆ ಒಪ್ಪಿಗೆ ನೀಡಿದ ಶಾಸಕರು ಏಪ್ರಿಲ್ 15ರಂದು ರಾಜೀನಾಮೆ ನೀಡುವಂತೆ ಅಧ್ಯಕ್ಷೆ ಕವಿತಾ ವಿಜಯಕುಮಾರ್ ಅವರಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕವಿತಾ ಅವರು ಬಜೆಟ್ ಸಭೆಯಲ್ಲಿ ಬೇಸರದಿಂದ ಇರುವುದು ಕಂಡು ಬಂದಿತು. ಅಲ್ಲದೇ, ಬಹುತೇಕ ಸಸದಸ್ಯರು ಭಾಗವಹಿಸಿದ್ದರಾದರೂ ಕೇವಲ ಅರ್ಧ ಗಂಟೆಯಲ್ಲಿ ಬಜೆಟ್ ಸಭೆ ಮುಕ್ತಾಯ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.