ADVERTISEMENT

ಅನಂತತೆಯ ವೈಚಾರಿಕ ಒಲವಿದ್ದ ಅನಂತಮೂರ್ತಿ; ಟಿಆರ್‌ಎಸ್‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 10:27 IST
Last Updated 10 ಜೂನ್ 2018, 10:27 IST

ಮೈಸೂರು: ಸಾಹಿತಿ ಯು.ಆರ್.ಅನಂತಮೂರ್ತಿ ಅವರು ತರ್ಕವಲ್ಲದ ವೈಚಾರಿಕತೆಯ ಕುರಿತು ಒಲವು ಉಳ್ಳ ವರಾಗಿದ್ದರು ಎಂದು ಅನಂತ ಮೂರ್ತಿ ಅವರ ಒಡನಾಡಿ ಪ್ರೊ.ಟಿ.ಆರ್‌.ಎಸ್‌.ಶರ್ಮಾ ಅಭಿಪ್ರಾಯಪಟ್ಟರು.

ಡಾ.ಯು.ಆರ್.ಅನಂತಮೂರ್ತಿ ಸಾಹಿತ್ಯಾಸಕ್ತರ ಬಳಗ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ‘ಅನಂತ ಸ್ಮರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತರ್ಕಬದ್ಧವಾದ ವಿಶ್ಲೇಷಣೆ ಹಾಗೂ ಖಚಿತತೆಯ ನೆಲೆಯಲ್ಲಿ ನೋಡುವ ವೈಚಾರಿಕರು ಒಂದೆಡೆಯಾದರೆ, ಸಂಕುಚಿತ ದೃಷ್ಟಿಯಾಚೆ ನೋಡುವ ಚಿಂತನೆ ಮತ್ತೊಂದೆಡೆ. ಕಲ್ಲು ಮೂರ್ತಿಯ ಹಿಂದೆ ಕಾಣಬಹುದಾದ ಅನುಭೂತಿ ಈ ವರ್ಗದ ಚಿಂತನೆಯಾಗಿದೆ. ಅಲ್ಲಿ ಅನಂತತೆ ಇರುತ್ತದೆ ಎಂದು ಹೇಳಿದರು.

ADVERTISEMENT

ಮೊದಲನೆಯದರಲ್ಲಿ ತರ್ಕವೇ ಮುಖ್ಯವಾದರೆ, ಎರಡನೇಯದರಲ್ಲಿ ತರ್ಕದ ಆಚೆಯ ದೃಷ್ಟಿಕೋನಗಳಿವೆ. ಅನಂತಮೂರ್ತಿ ಅವರ ಚಿಂತನೆ ಈ ಎರಡರ ನಡುವೆ ಇದೆ ಅನಿಸುತ್ತದೆ. ಅದರಲ್ಲೂ ಅನಂತತೆಯ ವೈಚಾರಿಕತೆಯನ್ನು ಹೆಚ್ಚು ಹೋಲುತ್ತದೆ ಎಂದು ತಿಳಿಸಿದರು.

ಭಾರತೀಯ ಸಂಸ್ಕೃತಿಯನ್ನು ಹೇಗೆ ನೋಡಬೇಕು, ವಿಮರ್ಶಿಸಬೇಕು ಎಂದು ಅವರು ಚಿಂತಿಸುತ್ತಿದ್ದರು. ಮನುಷ್ಯನ ಧೂರ್ತತನ ಅಭಿವ್ಯಕ್ತವಾದಾಗ ನೈಜ ಸಾಹಿತ್ಯ ರಚನೆಯಾಗುತ್ತದೆ. ಅಂಥ ನೈಜತೆಗೆ ಅವರು ಒತ್ತು ನೀಡುತ್ತಿದ್ದರು. ಆದರೆ, ಇಂದಿನ ಯುವ ಸಾಹಿತಿಗಳು ಅರಿಷಡ್ವರ್ಗಗಳ ಕುರಿತು ಚಿಂತಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಅನಂತಮೂರ್ತಿ ಅವರ ಶಿಷ್ಯ, ಲೇಖಕ ಕೃಷ್ಣಮೂರ್ತಿ ಚಂದರ್ ಮಾತನಾಡಿ ‘ಕನ್ನಡವನ್ನು ಸಂಕ್ಷಿಪ್ತವಾಗಿ ಕಲಿಸಿಕೊಟ್ಟ ಮೇಷ್ಟ್ರು ಅನಂತಮೂರ್ತಿ. ಅವರ ಕುರಿತು ಲಂಕೇಶ್‌ ಕೆಟ್ಟದಾಗಿ ಬರೆದಾಗ ನಮಗೆಲ್ಲ ಬೇಸರವಾಗಿತ್ತು. ಬರೆಯಲು ವಿಷಯ ಸಿಗದಿದ್ದಾಗ ಅನಂತಮೂರ್ತಿ ಕುರಿತು ಬರೆಯುತ್ತಿದ್ದರು. ಇದ್ಯಾವುದನ್ನೂ ಲೆಕ್ಕಿಸದ ಮೇಷ್ಟ್ರು, ಲಂಕೇಶ್‌ ಭಾಷಣ ಕೇಳಲು ನಮ್ಮನ್ನು ಕರೆದೊಯ್ಯುತ್ತಿದ್ದರು. ಲಂಕೇಶ್ ಅವರಿಂದ ಕಲಿಯಲು ಬಹಳ ಇದೆ ಎನ್ನುತ್ತಿದ್ದರು’ ಎಂದು ಅವರು ಹೇಳಿದರು.

ಪ್ರೊ.ಕೆ.ಸಿ.ಬೆಳ್ಳಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಅನಂತಮೂರ್ತಿ ಅವರ ಪತ್ನಿ ಎಸ್ತರ್, ಪ್ರೊ.ವಿಜಯ ವಾಮನ್‌, ಪ್ರೊ.ಬಿ.ಎನ್.ಬಾಲಾಜಿ, ಪ್ರೊ.ಬಿ.ಕೆ.ಚಂದ್ರಶೇಖರ್‌ ಇದ್ದರು.

‘ಅನಂತಮೂರ್ತಿ ಅವರಂಥ ಚಿಂತಕರ ಕೊರತೆ’

ಮೈಸೂರು: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಇಂದು ಯು.ಆರ್.ಅನಂತಮೂರ್ತಿ ಅವರಂಥ ಚಿಂತಕರ ಕೊರತೆ ಇದೆ ಎಂದು ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್ ವಿಷಾದ ವ್ಯಕ್ತಪಡಿಸಿದರು.

ಪ್ರಾಧ್ಯಾಪಕರು ಯಾವುದೋ ಪಕ್ಷದ ಪರ ಅಥವಾ ವಿರುದ್ಧ ಇರಬೇಕು ಎನ್ನುತ್ತಿಲ್ಲ. ಆದರೆ, ಅಭಿವ್ಯಕ್ತಿಯೇ ಕಾಣೆಯಾಗಿದೆ. ಕಟ್ಟಡಗಳನ್ನು ಕುಲಪತಿ ಕಟ್ಟಿಸಬೇಕಿಲ್ಲ. ಆ ಕೆಲಸವನ್ನು ಲೋಕೋಪಯೋಗಿ ಇಲಾಖೆಗೆ ವಹಿಸಬಹುದು. ಶೈಕ್ಷಣಿಕ ಮಟ್ಟವನ್ನು ಅಭಿವೃದ್ಧಿಪ‍ಡಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.

ದೇಶದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮಟ್ಟದ ಪಟ್ಟಿಯಲ್ಲಿ ಮೈಸೂರು ವಿ.ವಿ 123ನೇ ಸ್ಥಾನದಲ್ಲಿದೆ. 124ನೇ ವಿಶ್ವವಿದ್ಯಾಲಯ ಇಲ್ಲದ ಕಾರಣ 123ನೇ ಸ್ಥಾನ ಲಭಿಸಿದೆ ಎಂದು ನಾನು ಗೇಲಿ ಮಾಡುತ್ತಿರುತ್ತೇನೆ. ಆ ಮಟ್ಟಕ್ಕೆ ಮೈಸೂರು ವಿ.ವಿ ಇಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅನಂತಮೂರ್ತಿ ಅವರು ಮೋದಿ ಪ್ರಧಾನಿಯಾದರೆ ಈ ದೇಶ ಬಿಟ್ಟು ಹೋಗುತ್ತೇನೆ ಎಂದಾಗ ಅನೇಕರು ಆಕ್ಷೇಪ ವ್ಯಕ್ತಪಡಿಸಿದರು. ಅವರ ಹೇಳಿಕೆ ಹಿಂದಿನ ಕಾಳಜಿ ಅಂದು ಅರ್ಥಮಾಡಿಕೊಳ್ಳಲಿಲ್ಲ. ಆದರೆ, ಇಂದು ಬಹಳಷ್ಟು ಮಂದಿ ಅನಂತಮೂರ್ತಿಯವರ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.