ADVERTISEMENT

ಅನುದಾನದ ಕೊರತೆ: ಪರಿಹಾರ ವಿಳಂಬ

ಕಾಲುಬಾಯಿ ಜ್ವರಕ್ಕೆ ಜಿಲ್ಲೆಯಲ್ಲಿ 609 ರಾಸು ಬಲಿ

ಜಿ.ಬಿ.ನಾಗರಾಜ್
Published 9 ಜನವರಿ 2014, 9:41 IST
Last Updated 9 ಜನವರಿ 2014, 9:41 IST
ಅನುದಾನದ ಕೊರತೆ: ಪರಿಹಾರ ವಿಳಂಬ
ಅನುದಾನದ ಕೊರತೆ: ಪರಿಹಾರ ವಿಳಂಬ   

ಮೈಸೂರು: ಕಾಲುಬಾಯಿ ಜ್ವರಕ್ಕೆ ಬಲಿಯಾದ ಜಾನುವಾರುಗಳಿಗೆ ಸರ್ಕಾರ ವಿತರಿಸುವ ಪರಿಹಾರ ಮಂದಗತಿಯಲ್ಲಿ ಸಾಗುತ್ತಿದೆ. ಸಾಂಕ್ರಾಮಿಕ ರೋಗಕ್ಕೆ ತುತ್ತಾದ 609 ಜಾನುವಾರುಗಳ ಪೈಕಿ 462 ರಾಸುಗಳಿಗೆ ಪರಿಹಾರ ನೀಡಲು ಸರ್ಕಾರ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ.

ಕಾಲುಬಾಯಿ ಜ್ವರ ಆಗಸ್ಟ್‌ನಲ್ಲಿ ವ್ಯಾಪಕವಾಗಿ ಹರಡಿದ ಬಳಿಕ ರಾಜ್ಯದಲ್ಲಿ ಜಾನುವಾರು ಸಾವಿನ ಸರಣಿಯೂ ಆರಂಭವಾಯಿತು. ಸಾವಿರಾರು ರಾಸುಗಳು ಬಲಿಯಾದ ನಂತರ ಎಚ್ಚೆತ್ತುಕೊಂಡ ಸರ್ಕಾರ ರೈತರಿಗೆ ನೆರವಾಗಲು ಪರಿಹಾರ ಘೋಷಿಸಿತು. ಹಸುಗೆ ₨ 25 ಸಾವಿರ, ಎತ್ತಿಗೆ ₨ 20 ಸಾವಿರ ಹಾಗೂ ಕರುಗೆ ₨ 15 ಸಾವಿರ ನಿಗದಿ ಮಾಡಿತು. ಡಿ. 5ರವರೆಗೆ ಜಿಲ್ಲೆಯಲ್ಲಿ ಮೃತಪಟ್ಟ 609 ಜಾನುವಾರುಗಳಲ್ಲಿ ಪರಿಹಾರ ಸಿಕ್ಕಿದ್ದು 147ಕ್ಕೆ ಮಾತ್ರ.

ಕಾಲುಬಾಯಿ ಜ್ವರದಿಂದ ಮೃತಪಟ್ಟ ಜಾನುವಾರುಗಳ ಕುರಿತು ಪಶುಸಂಗೋಪನಾ ಇಲಾಖೆಗೆ 1,028 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ 419 ಅರ್ಜಿಗಳು ತಿರಸ್ಕೃತಗೊಂಡಿದ್ದು, ಸರ್ಕಾರ ಮೊದಲ ಹಂತದಲ್ಲಿ ಬಿಡುಗಡೆ ಮಾಡಿದ ₨ 24.35 ಲಕ್ಷ ಅನುದಾನದಲ್ಲಿ ನಂಜನ­ಗೂಡು, ಕೆ.ಆರ್‌. ನಗರ, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಪರಿಹಾರ ವಿತರಿಸಲಾಗಿದೆ. ಉಳಿದ ತಾಲ್ಲೂಕುಗಳ ಪರಿಹಾರ­ಕ್ಕಾಗಿ ₨ 67.34 ಲಕ್ಷ ಅನುದಾನದ ಅಗತ್ಯವಿದ್ದು, ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಆದರೆ, ಈವರೆಗೆ ಅನುದಾನ ಬಂದಿಲ್ಲ. ಇದರಿಂದ ರೈತರು ಪರಿಹಾರ­ಇಲ್ಲದೇ ಪರದಾಡುತ್ತಿದ್ದಾರೆ.

ಸರ್ಕಾರ ಪರಿಹಾರ ಘೋಷಿಸಿದ ಬಳಿಕ ಕಾಲುಬಾಯಿಗೆ ಬಲಿಯಾದ ರಾಸುಗಳನ್ನು ಗುರುತಿಸಲು ಪಶುಸಂಗೋಪನಾ ಇಲಾಖೆ ಹರಸಾಹಸ ಪಟ್ಟಿದೆ. ಸಾವಿನ ಕಾರಣ ಅರಿಯಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮೈಸೂರು ಮತ್ತು ಚಾಮರಾಜನಗರ ಹಾಲು ಸಹಕಾರ ಮಹಾಮಂಡಳಿ, ಪಶುಸಂಗೋಪನಾ ಹಾಗೂ ಕಂದಾಯ ಇಲಾಖೆಗಳ ಸದಸ್ಯತ್ವದಲ್ಲಿ ತಂಡ ರಚಿಸಿತು. ಶವಪರೀಕ್ಷೆ ಮೂಲಕ ರೋಗಕ್ಕೆ ಬಲಿ­ಯಾ­ಗಿ­­ರು­ವುದನ್ನು ಖಚಿತಪಡಿಸಿ­ಕೊಳ್ಳಲಾಯಿತು.

5 ಹಂತದ ಲಸಿಕೆ: ಎತ್ತು, ಎಮ್ಮೆ, ಹಸು ಹಾಗೂ ಕರು ಸೇರಿದಂತೆ ಜಿಲ್ಲೆಯಲ್ಲಿ 5.64 ಲಕ್ಷ ರಾಸುಗಳಿವೆ. ರೋಗದ ನಿರ್ಮೂಲನೆಗೆ ಪಶಸಂಗೋಪನಾ ಇಲಾಖೆ ಕಾಲುಬಾಯಿ ಜ್ವರ ತಡೆ ಲಸಿಕೆ ಹಾಕಿದೆ. ಐದು ಹಂತದಲ್ಲಿ 5.37 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಫೆ. 15ರಿಂದ ಮಾರ್ಚ್‌ 15ರವರೆಗೆ ಮತ್ತೊಂದು ಹಂತದ ಲಸಿಕೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಜೊತೆಗೆ, ಐದು ತಿಂಗಳಿಂದ ಜಿಲ್ಲೆಯಲ್ಲಿ ಜಾನುವಾರು ಜಾತ್ರೆಯನ್ನು ನಿಷೇಧಿಸಲಾಗಿದೆ. ಸುತ್ತೂರು, ಜಾನುವಾರು ಜಾತ್ರೆಗಳು ನಿಷೇಧವಾಗುವ ಸಾಧ್ಯತೆ ಇದೆ.

‘ಕಾಲುಬಾಯಿ ಜ್ವರ ಜಿಲ್ಲೆಯಲ್ಲಿ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಜಾನುವಾರು ಜಾತ್ರೆಗಳಿಗೆ ನಿಷೇಧ ಹೇರಲಾಗುತ್ತಿದೆ. 462 ಜಾನುವಾರುಗಳಿಗೆ ಪರಿಹಾರ ನೀಡಲು ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಸಿಕ್ಕ ಬಳಿಕ ಪರಿಹಾರ ವಿತರಿಸಲಾಗು­ತ್ತದೆ’ ಎಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ದೇವದಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.