ADVERTISEMENT

ಅಪಹಾಸ್ಯಕ್ಕೂ ಪರೀಕ್ಷೆಯಲ್ಲೇ ಉತ್ತರಿಸಿ: ಭಾರತಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 8:00 IST
Last Updated 19 ಫೆಬ್ರುವರಿ 2012, 8:00 IST

ಮೈಸೂರು: `ಕಲಾ ವಿಭಾಗದ ವಿದ್ಯಾರ್ಥಿ ಗಳು, ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡರೆ ಅಪಹಾಸ್ಯ ಮಾಡುವವರೆ ಹೆಚ್ಚು. ಇದರಿಂದ ಕೀಳರಿಮೆಗೆ ಒಳಗಾಗದೇ ಹಾರೈಕೆ ಎಂದು ಭಾವಿಸಿ ಪರೀಕ್ಷೆಯ ಮೂಲಕ ಉತ್ತರಿಸಿ~ ಎಂದು ಉಪ ವಿಭಾಗಾಧಿಕಾರಿ ಡಿ.ಭಾರತಿ ಕರೆ ನೀಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಮಾನಸಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷಾ ತರಬೇತಿ ಶಿಬಿರಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಶುಭಹಾರೈಕೆ ಕಾರ್ಯಕ್ರಮದಲ್ಲಿ `ಮುಕ್ತ ಭಂಡಾರ~ ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಶೈಕ್ಷಣಿಕ ಅಧ್ಯಯನಕ್ಕೂ, ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೂ ವ್ಯತ್ಯಾಸವಿದೆ. ತರಗತಿಯಲ್ಲಿ ರ‌್ಯಾಂಕ್ ಪಡೆದ ಮಾತ್ರಕ್ಕೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಿಲ್ಲ. ಶೈಕ್ಷಣಿಕ ಪರೀಕ್ಷೆಗಳಿಗಿಂತ ಇದು ಭಿನ್ನವಾಗಿರುತ್ತದೆ. ತರಬೇತಿ ಕೇಂದ್ರಗಳು ಸಂಚಾರ ಪೊಲೀಸ್ ಇದ್ದ ಹಾಗೆ. ನಿಮ್ಮ ಗೊಂದಲಗಳನ್ನು ನಿವಾರಿಸಿ ಮಾರ್ಗದರ್ಶನ ನೀಡುತ್ತವೆ. ಆ ದಾರಿಯಲ್ಲಿ ನಡೆಯುವ ಚೈತನ್ಯ ಅಭ್ಯರ್ಥಿಗಳಲ್ಲಿ ಇರಬೇಕು~ ಎಂದು ಅಭಿಪ್ರಾಯಪಟ್ಟರು.


`ಸ್ಪರ್ಧಾತ್ಮಕ ಪರೀಕ್ಷಾ ಪತ್ರಿಕೆಯ ಮಾದರಿ ಬದಲಾಗಿದೆ. ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಸಂವಿಧಾನ ಸೇರಿದಂತೆ ಎಲ್ಲ ವಿಷಯದ ಜ್ಞಾನವನ್ನು ಅಭ್ಯರ್ಥಿ ಹೊಂದಿರಬೇಕಾಗುತ್ತದೆ. ಪರೀಕ್ಷೆಗೆ ಆಯ್ಕೆ ಮಾಡಿಕೊಂಡ ಐಚ್ಛಿಕ ವಿಷಯವನ್ನು ಪದವಿಯಲ್ಲೇ ತಿಳಿದುಕೊಂಡಿದ್ದೇನೆ ಎಂಬ ತಾತ್ಸಾರ ಬೇಡ.
 
ಎಲ್ಲ ವಿಷಯವನ್ನೂ ಹೊಸ ವಿದ್ಯಾರ್ಥಿಯಂತೆ ಅಭ್ಯಾಸ ಮಾಡಿ. ವಿದ್ಯಾರ್ಥಿಗಳಲ್ಲಿರುವ ಉತ್ತರಿಸುವ ಸಾಮಾರ್ಥ್ಯ, ಜ್ಞಾನ ಮಟ್ಟದಂತಹ ಸೂಕ್ಷ್ಮ ವಿಚಾರಗಳನ್ನು ಆಧರಿಸಿ ಪ್ರಶ್ನೆ ಪತ್ರಿಕೆ ತಯಾರಿಸಲಾಗಿರುತ್ತದೆ. ಹೀಗಾಗಿ ಗುಣಾತ್ಮಕ ಓದನ್ನು ರೂಢಿಸಿಕೊಳ್ಳಿ~ ಎಂದು ಸಲಹೆ ನೀಡಿದರು.

ನಿವೃತ್ತ ಅಧಿಕಾರಿ ವಿ.ಗಿರೀಶಗೌಡ ಮಾತನಾಡಿ, `ಕೆಎಎಸ್ ಪಾಸ್ ಆಗದಿರುವ ಅನೇಕರು ಐಎಎಸ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಪಾಸ್ ಆಗಲಿಲ್ಲ ಎಂಬ ಕೀಳರಿಮೆ ಬಿಟ್ಟು, ಮರಳಿ ಯತ್ನವ ಮಾಡಿ. ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪತ್ರಿಕೆಗಳನ್ನು ಓದಿ. ಮಾನಸಿಕ ಸಾಮರ್ಥ್ಯದ ವಿಷಯವನ್ನು ಮನನ ಮಾಡಿಕೊಳ್ಳಿ~ ಎಂದರು.

ಮುಕ್ತ ವಿಶ್ವವಿದ್ಯಾನಿಲಯದ ಕುಲ ಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, `ಹಣ, ರಾಜಕೀಯ ಪ್ರಭಾವ ಬಳಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಫಲರಾಗಲು ಸಾಧ್ಯವಿಲ್ಲ. ಅಂಥ ಭಾವನೆ ವಿದ್ಯಾರ್ಥಿಗಳು ತೊಡೆದು ಹಾಕ ಬೇಕು. ಅದೃಷ್ಟ ಕೂಡ ಲಾಟರಿಯಂಥ ಸಂದರ್ಭದಲ್ಲಿ ಮಾತ್ರ ಕೈ ಹಿಡಿಯಬ ಹುದು. ನಿಮ್ಮಲ್ಲಿರುವ ಜ್ಞಾನವೇ ನಿರ್ಧಾರಕ ಅಂಶವಾಗಿರುತ್ತದೆ. ಹೀಗಾಗಿ ಪರೀಕ್ಷೆಯನ್ನು ಎದುರಿಸಲು ಜ್ಞಾನವನ್ನು ಕ್ರೋಡೀಕರಿಸಿಕೊಳ್ಳಿ. ಜ್ಞಾನ ಸಂಪತ್ತು ದೇಶದ ಆಸ್ತಿ~ ಎಂದು ನುಡಿದರು.

ತರಬೇತಿ ಪಡೆದ ಅಭ್ಯರ್ಥಿಗಳಾದ ಶ್ರೀನಿವಾಸ್, ಸುಪ್ರಿತಾ ಅನಿಸಿಕೆ ಹಂಚಿಕೊಂಡರು. ಕರಾಮುವಿವಿ ಡೀನ್ ದೇವೇಗೌಡ, ವಿಕ್ರಮರಾಜೇ ಅರಸ್, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜಕ ಜೈನಹಳ್ಳಿ ಸತ್ಯನಾರಾಯಣಗೌಡ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT