ADVERTISEMENT

ಅರ್ಜುನಹಳ್ಳಿ: ಮುಗಿಯದ ಸಮಸ್ಯೆ

ಸಾಲಿಗ್ರಾಮ ಯಶವಂತ್
Published 20 ಜೂನ್ 2012, 8:45 IST
Last Updated 20 ಜೂನ್ 2012, 8:45 IST

ಸಾಲಿಗ್ರಾಮ: ಈ ಗ್ರಾಮದಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸದೇ ವರ್ಷವೇ ಉರುಳಿದೆ. ಕಾರಣ ಚರಂಡಿಯಲ್ಲಿಯ ನೀರು ಮುಂದೆ ಹರಿಯದೇ ಅಲ್ಲಲ್ಲೇ ನಿಂತು ನಾರುತ್ತಿದೆ.ಹಾಸನ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸಿಗುವ ಕೆ.ಆರ್.ನಗರ ತಾಲ್ಲೂಕಿನ ಅರ್ಜುನಹಳ್ಳಿ ಗ್ರಾಮದ ದುಃಸ್ಥಿತಿ.

ಗ್ರಾಮದ ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ ಚರಂಡಿಯ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಆದ್ಯತೆ ನೀಡದ ಕಾರಣ ಮನೆಗಳ ಮುಂದೆ ಕೊಳಚೆ ನೀರು ನಿಂತು ಸೊಳ್ಳೆಗಳು ಹೆಚ್ಚಾಗಿವೆ. ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೂ ಗ್ರಾಮ ಪಂಚಾಯಿತಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಗ್ರಾಮದ ಯುವಕರು ಕಿಡಿ ಕಾರುತ್ತಾರೆ.

ನೀರಿನ ಸಮಸ್ಯೆಯೂ ಮುಗಿದಿಲ್ಲ:ಕೊಳವೆಯಲ್ಲಿ ಕುಡಿಯುವ ನೀರು ಬರುವುದು ವಾರಕ್ಕೊಮ್ಮೆ ಮಾತ್ರ. ಉಳಿದ ದಿನಗಳಲ್ಲಿ ಮಹಿಳೆಯರು ದೂರದ ಕೊಳವೆಬಾವಿಯನ್ನು ಹುಡುಕಿ ಹೋಗುತ್ತಿದ್ದಾರೆ. ಕುಡಿಯುವ ನೀರಿಗಾಗಿ ದೂರದಲ್ಲಿರುವ ನಾಲೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಅವ್ಯವಸ್ಥೆ:ರಸ್ತೆ ನಿರ್ಮಾಣಕ್ಕೆ ಹಾಕಿರುವ ಜಲ್ಲಿ ಕಲ್ಲು ಮೇಲೆದ್ದು ಜನ ಓಡಾಡಲು ಕಷ್ಟವಾಗಿದೆ.  ಬಹುತೇಕ ಪರಿಶಿಷ್ಟ ಸಮುದಾಯದ ಜನರೇ ಇಲ್ಲಿ ಹೆಚ್ಚು ವಾಸ  ಮಾಡುತ್ತಿದ್ದಾರೆ. ಈ ಗ್ರಾಮದ ಮುಖ್ಯರಸ್ತೆಗೆ ಹತ್ತಾರು ವರ್ಷಗಳ ಹಿಂದೆ ಕಲ್ಲು ಸುರಿದು ರಸ್ತೆ ಮಾಡಿರುವುದು ಬಿಟ್ಟರೆ, ಮತ ಪಡೆದವರು ಮತ್ತೆ ಇತ್ತ ಕಡೆ ತಿರುಗಿ ನೋಡಿಲ್ಲ.

ಗ್ರಾಮದಲ್ಲಿ ಇರುವ ಮೂರು ದೇವಾಲಯಗಳ ಪೈಕಿ ಎರಡು ದೇವಾಲಯಕ್ಕೆ ಬಾಗಿಲು ಇಲ್ಲ. ಮತ್ತೊಂದು ದೇವಾಲಯ ಹೆದ್ದಾರಿ ಪಕ್ಕದಲ್ಲೇ ಇದ್ದು ಇದರ ಕಾಮಗಾರಿ ಕೂಡಾ ಅರ್ಧಕ್ಕೆ ನಿಂತು ವರ್ಷಗಳೇ ಕಳೆಯುತ್ತಿದ್ದರೂ ಕಾಮಗಾರಿ  ಮಾತ್ರ ಪೂರ್ಣಗೊಂಡಿಲ್ಲ. ಗ್ರಾಮದ ಹಲವು ಕುಟುಂಬಗಳಿಗೆ ಸೂರಿಲ್ಲ. ಸೂರಿಗಾಗಿ  ಅರ್ಜಿ ಸಲ್ಲಿಸಿದರೂ ಪ್ರಯಾೀಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.