ಮೈಸೂರು: ತಂಬಾಕು ಬೆಳೆಗಾರರ ಪರವಾನಗಿಯಲ್ಲಿನ ತಾರತಮ್ಯವನ್ನು ನಿವಾರಿಸಿ, ಆಂಧ್ರಪ್ರದೇಶದ ಮಾದರಿಯನ್ನು ಜಾರಿಗೊಳಿಸುವಂತೆ ಕಾಂಗ್ರೆಸ್ ಜನಪ್ರತಿನಿಧಿಗಳೇ ಕೇಂದ್ರ ಸರ್ಕಾರವನ್ನು ಒತ್ತಾಯಿ ಸಿದ ಪ್ರಸಂಗಕ್ಕೆ ಪಿರಿಯಾಪಟ್ಟಣದ ತಂಬಾಕು ಹರಾಜು ಕೇಂದ್ರ ಶುಕ್ರವಾರ ಸಾಕ್ಷಿಯಾಯಿತು.
ಪಿರಿಯಾಪಟ್ಟಣದ ತಂಬಾಕು ಹರಾಜು ಕೇಂದ್ರದ 4ನೇ ಪ್ಲಾಟ್‌ಫಾರ್ಮ್‌ನಲ್ಲಿ ಎಲೆಕ್ಟ್ರಾನಿಕ್ಸ್ ಹರಾಜು ಪದ್ಧತಿಗೆ ಚಾಲನೆ ನೀಡಿದ ಬಳಿಕ ನಡೆದ ಸಮಾರಂಭದಲ್ಲಿ ಶಾಸಕರು, ಸಂಸದರು ರಾಜ್ಯದ ತಂಬಾಕು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯವನ್ನು ಒಕ್ಕೊರಲಿನಿಂದ ಖಂಡಿಸಿದರು. ಹೀಗಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ರಾಜ್ಯ ಸಚಿವೆ ಡಿ.ಪುರಂದೇಶ್ವರಿ ಮುಜುಗರಕ್ಕೆ ಒಳಗಾದರು.
ಶಾಸಕ ಕೆ.ವೆಂಕಟೇಶ್ ಮಾತನಾಡಿ, ಸಚಿವರ ಮುಂದೆ ಅಹವಾಲುಗಳ ಪಟ್ಟಿಯನ್ನೇ ಮಂಡಿಸಿದರು. `ಆಂಧ್ರಪ್ರದೇಶದಲ್ಲಿ ವಿದ್ಯುನ್ಮಾನ ಪದ್ಧತಿಯನ್ನು ಜಾರಿಗೊಳಿಸಿ ಮೂರು ವರ್ಷದ ನಂತರ ರಾಜ್ಯದಲ್ಲಿ ಅಳವಡಿಸಲಾಗಿದೆ. ಇದಕ್ಕೆ ಕಳೆದ ನಾಲ್ಕು ವರ್ಷಗಳಿಂದ ಹೋರಾಟ ಮಾಡಬೇಕಾಯಿತು. ದೇಶದ ರೈತರೆಲ್ಲ ಒಂದೇ ಎಂದು ನಂಬಿದ್ದೇವೆ.
ಆದರೆ ಆಂಧ್ರದ ರೈತರು ಮತ್ತು ಕರ್ನಾಟಕದ ರೈತರ ನಡುವೆ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಆಂಧ್ರಪ್ರದೇಶದಲ್ಲಿ ಎರಡು ಪರವಾನಗಿಗೆ 4,300 ಕೆ.ಜಿ ತಂಬಾಕು ಬೆಳೆಯುವ ಅವಕಾಶ ನೀಡಲಾಗಿದೆ. ಆದರೆ ರಾಜ್ಯದ ಬೆಳೆಗಾರರಿಗೆ 3,380 ಕೆ.ಜಿಗೆ ಮಿತಿಗೊಳಿಸಲಾಗಿದೆ. ಇದರಿಂದ ಹೆಚ್ಚುವರಿ ಬೆಳೆಗೆ ಬೆಳೆಗಾರರು ದಂಡ ಪಾವತಿ ಮಾಡುವಂತಾಗಿದೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.
`ಹಲವು ವರ್ಷಗಳ ಹಿಂದೆ ಪಿರಿಯಾಪಟ್ಟಣದಲ್ಲಿ 60 ಮಿಲಿಯನ್ ಕೆ.ಜಿ ಹೊಗೆಸೊಪ್ಪು ಬೆಳೆಯಲಾಗು ತ್ತಿತ್ತು. ಅದಕ್ಕೆ ಅನುಗುಣವಾಗಿಮಾರುಕಟ್ಟೆಯನ್ನು ನಿರ್ಮಿಸಲಾಯಿತು. ಈಗ ತಂಬಾಕು ಉತ್ಪಾದನೆ 120 ಮಿಲಿಯನ್ ಕೆ.ಜಿಗೆ ದಾಟಿದೆ. ಆದರೆ ಮಾರುಕಟ್ಟೆ ಮಾತ್ರ ವಿಸ್ತರಣೆಯಾಗಿಲ್ಲ. ಇದರಿಂದ ಆರು ತಿಂಗಳ ಕಾಲ ಮಾರಾಟ ಪ್ರಕ್ರಿಯೆ ನಡೆಯುತ್ತಿದೆ.
ಅಲ್ಲಿಯ ವರೆಗೆ ಬೆಳೆಯನ್ನು ಸಂಗ್ರಹಿಸಿಡಲು ಬೆಳೆಗಾರರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಮಾಡಿದ ಸಾಲವನ್ನು ತೀರಿಸಲು ಕಷ್ಟಪಡುತ್ತಿದ್ದಾರೆ. ಹೀಗಾಗಿ ಪಿರಿಯಾಪಟ್ಟಣದಲ್ಲಿ ಕನಿಷ್ಠ ಇನ್ನೂ ಎರಡು ತಂಬಾಕು ಹರಾಜು ಕೇಂದ್ರಗಳನ್ನು ತೆರೆಯಬೇಕು~ ಎಂದು ಒತ್ತಾಯಿಸಿದರು. ಇದಕ್ಕೆ ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಕೂಡ ಧ್ವನಿಗೂಡಿಸಿದರು.
ಅರಕಲಗೂಡು ಶಾಸಕ ಎ.ಮಂಜು ಮಾತನಾಡಿ, `ಪರವಾನಗಿಗಿಂತ ಹೆಚ್ಚಿನ ಪ್ರಮಾಣದ ತಂಬಾಕು ಬೆಳೆದರೆ ಕರ್ನಾಟಕದ ರೈತರಿಗೆ ಶೇ 15ರಷ್ಟು, ಆಂಧ್ರದ ರೈತರಿಗೆ ಶೇ 7.5ರಷ್ಟು ದಂಡ ವಿಧಿಸಲಾಗುತ್ತದೆ. ರಾಜ್ಯದ ಶೇ 80ರಷ್ಟು ತಂಬಾಕು ರಫ್ತುಗೆ ಯೋಗ್ಯವಾಗಿದೆ. ಆದರೂ ಈ ತಾರತಮ್ಯ ವೇಕೆ ಎಂದು ಅರ್ಥವಾಗುತ್ತಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸದ ಎಚ್.ವಿಶ್ವನಾಥ್ ಮಾತನಾಡಿ, `ಸೌದೆ, ಕಾರ್ಮಿಕರ ವೆಚ್ಚಕ್ಕೆ ಅನುಗುಣವಾಗಿ ತಂಬಾಕು ಬೆಲೆ ನಿಗದಿಯಾಗಿಲ್ಲ. ಇದರಿಂದ ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ ತಂಬಾಕು ಬೆಳೆಯುವ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ತಲೆದೂರಿದೆ. ಹೀಗಾಗಿ ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಚಿವರು ಗಮನ ಹರಿಸಬೇಕು~ ಎಂದು ಮನವಿ ಮಾಡಿದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ರಾಜ್ಯ ಸಚಿವೆ ಡಾ.ಡಿ. ಪುರಂದೇಶ್ವರಿ ಮಾತನಾಡಿದರು. ಭಾರತೀಯ ತಂಬಾಕು ಮಂಡಳಿಯ ಅಧ್ಯಕ್ಷ ಜಿ.ಕಮಲವರ್ಧನರಾವ್, ಹರಾಜು ನಿರ್ದೇಶಕಿ ಮಂಜು ಪಿಳ್ಳೈ, ಗುಂಟೂರು ಐಟಿಎ ಅಧ್ಯಕ್ಷ ಬೆಲ್ಲಂ ಕೊಟ್ಟಾಯಾ, ಎನ್‌ಐಐಟಿ ಸಂಸ್ಥೆಯು ಅಧ್ಯಕ್ಷ ಅರವಿಂದ ಮಲ್ಹೋತ್ರಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.