ADVERTISEMENT

ಆದರ್ಶಗಳ ಬೆನ್ನೇರಿ ಸೈಕಲ್ ಸವಾರಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 8:35 IST
Last Updated 5 ಫೆಬ್ರುವರಿ 2011, 8:35 IST

ಮೈಸೂರು: ಏಡ್ಸ್, ಮದ್ಯಪಾನದಂತಹ ಸಾಮಾಜಿಕ ಪಿಡುಗುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ದೆಹಲಿಯಿಂದ ಮೈಸೂರಿಗೆ 90 ದಿನಗಳ ಸೈಕಲ್ ಜಾಥಾವನ್ನು ಮಾ.10ರಿಂದ ಉಮಾಪತಿ ಮೊದಲಿಯಾರ್ ಹಮ್ಮಿಕೊಂಡಿದ್ದಾರೆ.

ಉಮಾಪತಿ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮಾಲೇಕಲ್ ತಿರುಪತಿ ಗ್ರಾಮದವರು. ಇವರು ವೃತ್ತಿಯಿಂದ ಎಲೆಕ್ಟ್ರಿಷಿಯನ್ ಆದರೂ ಪ್ರವೃತ್ತಿಯಿಂದ ಸಮಾಜ ಸೇವಕ. ಇದುವರೆಗೂ 16,380 ಕಿ.ಮೀ.  ಸೈಕಲ್ ಜಾಥಾ ನಡೆಸಿರುವ ಇವರು ಕರಪತ್ರ, ಧ್ವನಿವರ್ಧಕ ಮೂಲಕ ಜನರಿಗೆ ಮಾಹಿತಿ ನೀಡುತ್ತಾರೆ. ಪ್ರಯಾಣದಲ್ಲಿ ಸಿಗುವ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಾರೆ.

ತಂದೆ ಸ್ವಾತಂತ್ರ್ಯ ಹೋರಾಟಗಾರ ದಿ.ಅಪ್ಪಾಸ್ವಾಮಿ ಮೊದಲಿಯಾರ್. ಉಮಾಪತಿ ಬಹುಮುಖಿ ಹೋರಾಟಗಾರ. ರಾಜೇಶ್ವರಿ ಎಂಬ ಬುದ್ಧಿಮಾಂದ್ಯ ಯುವತಿಗೆ ಬಾಳು ನೀಡಿದ್ದಾರೆ. ಕಲಾವತಿ ಎಂಬ ಹುಡುಗಿಯನ್ನು ದತ್ತು ತೆಗೆದುಕೊಂಡು ಸಾಕಿ ಸಲಹುತ್ತಿದ್ದಾರೆ.

ಸೈಕಲ್ ಸವಾರಿಗೆ ಪ್ರೇರಣೆ: 1995ರಲ್ಲಿ ಅರಸೀಕೆರೆ ತಾಲ್ಲೂಕಿನಲ್ಲಿ ಏಡ್ಸ್‌ಗೆ ಹಲವರು ಬಲಿಯಾದದ್ದನ್ನು ಕಂಡ ಇವರು ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸುವ ಸಂಕಲ್ಪ ಮಾಡಿದರು. ಆಗ ತಾಲ್ಲೂಕಿನಾದ್ಯಂತ ಸಂಚರಿಸಿ ಜನತೆಗೆ ಸುರಕ್ಷತಾ ಕ್ರಮಗಳ ಅರಿವು ನೀಡಿದರು. ಇವರ ಪ್ರಯತ್ನವನ್ನು ಮನಗಂಡ ತಾಲ್ಲೂಕು ವೈದ್ಯೆ ಡಾ.ಶೈಲಜಾ ಮತ್ತು ಮಹದೇವ್ ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸಿದರು.

ನನಸಾಗದ ಕನಸು: 2001ರಲ್ಲಿ ಗುಜರಾತ್ ಭೂಕಂಪ ಸಂತ್ರಸ್ತರಿಗೆ ರೋಟರಿಗಳಿಂದ ಹಣ ಸಂಗ್ರಹಿಸಿ (ಡಿಡಿ/ಚೆಕ್) ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕೊಡಲು ಮೈಸೂರಿನಿಂದ ದೆಹಲಿಗೆ ಕೈಗೊಂಡ ಸೈಕಲ್ ಯಾತ್ರೆ ಕಾರಣಾಂತರದಿಂದ ಅರ್ಧಕ್ಕೆ ನಿಂತಿತ್ತು. ಆಗ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಧನ ಸಹಾಯದ ಚೆಕ್ ಅನ್ನು ನೀಡಿದರು. 2004ರಲ್ಲಿ ಏಡ್ಸ್, ಮದ್ಯಪಾನದ ಬಗ್ಗೆ ಜಾಗೃತಿ ಮೂಡಿಸಲು ಕರ್ನಾಟಕ, ಕೇರಳ, ಆಂಧ್ರಪ್ರದೇಶಗಳಲ್ಲಿ ಸಂಚರಿಸಿದರು. ಆದರೆ ಹರ್ನಿಯಾಗೆ ತುತ್ತಾದ ಕಾರಣ ದೆಹಲಿ ತಲುಪುವ ಕನಸು ನನಸಾಗಲಿಲ್ಲ.

ವೈದ್ಯರು ಇನ್ನು ಮುಂದೆ ಸೈಕಲ್ ತುಳಿಯಬೇಡಿ ಎಂದು ಹೇಳಿದ್ದರೂ ಮತ್ತೆ ಸೈಕಲ್ ಜಾಥಾವನ್ನು 2010ರಲ್ಲಿ ಕೈಗೊಂಡು ಯಶಸ್ವಿಯಾಗಿ ದೆಹಲಿ ತಲುಪಿದರು. ಮತ್ತೆ ಮಾ.10ರಂದು ದೆಹಲಿಯಿಂದ ಮೈಸೂರಿಗೆ ಕೈಗೊಂಡಿರುವ ಇವರ ಜೀವನೋತ್ಸಾಹ, ಸಾಮಾಜಿಕ ಬದ್ಧತೆ ಯುವಕರನ್ನು ನಾಚಿಸುವಂತಿದೆ.

ಸೈಕಲ್ ನನ್ನ ತಾಯಿ: ಸೈಕಲ್ ಅನ್ನು ಅಪಾರವಾಗಿ ಪ್ರೀತಿಸುವ ಉಮಾಪತಿಯವರು ಅರಸೀಕೆರೆಯಿಂದ ದೆಹಲಿಗೆ ಸಾಗುವಾಗ ಸೈಕಲ್‌ಗಾಗಿ ಖರ್ಚು ಮಾಡಿದ್ದು ಕೇವಲ 7 ರೂಪಾಯಿ. ಸಮಾಜ ಸೇವೆ ಮಾಡಲು ಬೆನ್ನೆಲುಬಾಗಿರುವ ಸೈಕಲ್ ನನ್ನ ತಾಯಿಯಿದ್ದಂತೆ ಎಂದು ವಿನಮ್ರತೆಯಿಂದ ನುಡಿದರು. ಸಮಾಜದ ಅಭಿವೃದ್ಧಿಗೆ ದುಡಿಯುವ ಮಿಡಿಯುವ ಇವರ ಬದ್ಧತೆ ಇಂದಿನ ಯುವಜನಾಂಗಕ್ಕೆ ಮಾದರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.