ADVERTISEMENT

ಆಯುರ್ವೇದ ಆಸ್ಪತ್ರೆ: ಕಾಮಗಾರಿ ಶುರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 8:20 IST
Last Updated 3 ಜನವರಿ 2012, 8:20 IST
ಆಯುರ್ವೇದ ಆಸ್ಪತ್ರೆ: ಕಾಮಗಾರಿ ಶುರು
ಆಯುರ್ವೇದ ಆಸ್ಪತ್ರೆ: ಕಾಮಗಾರಿ ಶುರು   

ಹುಣಸೂರು: ಸಾರ್ವಜನಿಕರಲ್ಲಿ ಆಯುರ್ವೇದ ಪದ್ಧತಿಯ ಚಿಕಿತ್ಸೆ ಬಗ್ಗೆ ವಿಶ್ವಾಸ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತವಾದ ಆಯುರ್ವೇದ ಆಸ್ಪತ್ರೆ ಅವಶ್ಯಕತೆ ಇದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.

ಪಟ್ಟಣದ ಹಳೇ ಸೇತುವೆಯ ಮುಸಾಫಿರ್ ಕಾಲೋನಿಯಲ್ಲಿ ಸೋಮವಾರ 1.20 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡ 10 ಹಾಸಿಗೆಗಳ ಆಯುರ್ವೇದ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

`ಆಯುಷ್ ಆಯುರ್ವೇದ ಯೋಜನೆ~ಯಲ್ಲಿ ಈ ಆಸ್ಪತ್ರೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಟ್ಟಡ ಎರಡು ಅಂತಸ್ತು ಹೊಂದಿದ್ದು, ನೆಲ ಅಂತಸ್ತಿನಲ್ಲಿ ರೋಗಿಗಳ ಕೊಠಡಿ ಮತ್ತು ಮೊದಲ ಅಂತಸ್ತಿನಲ್ಲಿ ವಿವಿಧ ಚಿಕಿತ್ಸಾ ಕೊಠಡಿಗಳನ್ನು ಹೊಂದಲಿದೆ ಎಂದರು.

ಮೊದಲ ಹಂತದಲ್ಲಿ ರೂ. 37.50 ಲಕ್ಷ ಅನುದಾನ ಬಿಡುಗಡೆಯಾಗಿದೆ. ಎರಡನೇ ಹಂತದ ಕಾಮಗಾರಿಗೆ ಉಳಿದ ಹಣ ಬಿಡುಗಡೆ ಮಾಡಲಾಗುವುದು. ಯೋಜನೆಯಲ್ಲಿ ಶೇ. 50ರಷ್ಟು ಅನುದಾನವನ್ನು ಕಟ್ಟಡ ನಿರ್ಮಿಸಲು, ಉಳಿದ ಹಣವನ್ನು ಆಸ್ಪತ್ರೆಗೆ ಬೇಕಾಗುವ ಎಲ್ಲಾ ಸವಲತ್ತು ಖರೀದಿಸಲು ಬಳಸಿಕೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.

ನೆಲ ಹಂತದ ಕಟ್ಟಡ ಕಾಮಗಾರಿಗೆ ಕೇಂದ್ರ ಪುರಸ್ಕೃತ ಯೋಜನೆಯಿಂದ ಅನುದಾನ ಬಂದಿದ್ದು, ಮೊದಲ ಹಂತದ ಕಟ್ಟಡ ಕಾಮಗಾರಿಗೆ ಟಿ.ಎಸ್.ಪಿ. ಯೋಜನೆಯಲ್ಲಿ ಅನುದಾನ ಬರಲಿದೆ. ಆಸ್ಪತ್ರೆಗೆ ಹಾಲಿ 6 ಸಿಬ್ಬಂದಿ  ನಿಯೋಜಿಸಲಾಗಿದೆ. ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುತ್ತದೆ ಎಂದರು.

ಡಾ.ಸುಕೇಶ್ ಎಂ.ಕೆ. ಮಾತನಾಡಿ, ಆಸ್ಪತ್ರೆ ನಿರ್ಮಾಣದ ನಂತರ ಐದು ವರ್ಷಗಳ ಕಾಲ ನಿರ್ವಹಣೆ ಜವಾಬ್ದಾರಿಯನ್ನೂ ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಈ 5 ವರ್ಷಗಳ ಕಾಲ ವಾರ್ಷಿಕ 10 ಲಕ್ಷ ರೂ. ಅನುದಾನವನ್ನು ಆಸ್ಪತ್ರೆಗೆ ನೀಡಲಿದೆ. ಈ ಅನುದಾನದಲ್ಲಿ ಆಸ್ಪತ್ರೆ ಸಿಬ್ಬಂದಿ ಸಂಬಳ ಸೇರಿದಂತೆ ಪ್ರತಿಯೊಂದು ಔಷಧಿ ಖರೀದಿಸಬೇಕಾಗಿದೆ.  ಕರ್ನಾಟಕ ಆರೋಗ್ಯ ಪದ್ಧತಿ ಮತ್ತು ಸುಧಾರಣೆ ಎಂಜನಿಯರಿಂಗ್ ವಿಭಾಗದಿಂದ ಕಟ್ಟಡ ಕಾಮಗಾರಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಪುರಸಭೆ ಅಧ್ಯಕ್ಷೆ ಮಂಜುಳ ಚೆನ್ನಬಸಪ್ಪ, ಸದಸ್ಯರಾದ ಜಾಕೀರ್, ಶಿವರಾಜ್, ಜಿಲ್ಲಾ ಕಾಂಗ್ರೆಸ್ ಸದಸ್ಯ ಚಂದ್ರಶೇಖರ್ ಎನ್.ಕೆ., ಮುಖಂಡರಾದ ಶ್ರೀಧರ್, ಚೆನ್ನಬಸಪ್ಪ, ಶೇಖ್ ಅಹಮ್ಮದ್, ಮುನಾವರ್,ಜಮೀರ್, ಎಂಜಿನಿಯರ್ ಸದಾಶಿವಪ್ಪ ಮತ್ತು ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.