ADVERTISEMENT

ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅವಶ್ಯ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 7:50 IST
Last Updated 5 ಮಾರ್ಚ್ 2012, 7:50 IST

ತಿ.ನರಸೀಪುರ: ಒತ್ತಡ ಹಾಗೂ ಕಲುಷಿತ ಪರಿಸರ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವು ಆರೋಗ್ಯ ಸ್ಥಿತಿ ಕಾಪಾಡಿಕೊಳ್ಳಲು ಯೋಗ ಅತ್ಯಗತ್ಯ ಎಂದು ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಕೊಳ್ಳೇಗಾಲ ಘಟಕದ ಅಧ್ಯಕ್ಷ ನಟರಾಜು ಹೇಳಿದರು.

 ಪಟ್ಟಣದ ವಿದ್ಯೋದಯ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಸ್ಥಳೀಯ ಶಾಖೆಯ 9 ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

`ಇಂದು ನಾವು ಸೇವಿಸುವ ಆಹಾರ  ಮತ್ತು ದ್ರವ್ಯ ಪದಾರ್ಥಗಳು ಹಿಂದಿನ ಕಾಲದಷ್ಟು ಸುರಕ್ಷಿತವಾಗಿಲ್ಲ. ನಮ್ಮ ಕಾರ್ಯಗಳನ್ನು ಹಿಂದಿಷ್ಟು ತಾಳ್ಮೆಯಿಂದ ಮಾಡಲಾಗುತ್ತಿಲ್ಲ. ಆಧುನೀಕರಣದ ವೇಗದಲ್ಲಿ ಬದುಕುತ್ತಿರುವ ನಮಗೆ ಒತ್ತಡ ಹೆಚ್ಚಾಗಿ ದೈಹಿಕ ಆಲಸ್ಯ ಕಾಣಿಸಿಕೊಳ್ಳುತ್ತಿವೆ ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ವಾಟಾಳು ಸೂರ್ಯ ಸಿಂಹಾಸನಾಧೀಶ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, `ಪತಂಜಲಿ ಶಿಕ್ಷಣ ಸಮಿತಿ ಪ್ರಾರಂಭವಾದಾಗಿನಿಂದ ತಾಲ್ಲೂಕಿನಲ್ಲಿ ಯೋಗ ಶಿಕ್ಷಣಕ್ಕೆ ಆದ್ಯತೆ ನೀಡಿ ಜನರನ್ನು ಆರೋಗ್ಯವಾಗಿರುವಂತೆ ಮಾಡಲು ಯೋಗದ ಬಗ್ಗೆ ಅರಿವು ಮತ್ತು ಉಚಿತ ತರಗತಿಗಳನ್ನು ನಡೆಸುತ್ತಿದೆ. ಇದರ ಸದುಯೋಗವನ್ನು ಪಟ್ಟಣದ ಹಾಗೂ ತಾಲ್ಲೂಕಿನ ಜನ ಪಡೆಯುವಂತಾಗಬೇಕು~ ಎಂದರು.

ಸ್ಥಳೀಯ ಶಾಖೆಯ ಅಧ್ಯಕ್ಷ ಶಿವಣ್ಣ ಮಾತನಾಡಿ, `ನಮ್ಮ ಸಮಿತಿ ಕಳೆದ ಎಂಟು ವರ್ಷಗಳಿಂದ ಯೋಗ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಜನರ ಸಹಕಾರ ಸಿಗುತ್ತಿದ್ದರೂ ಸಹ ಒಂದು ನೆಲೆ ಇಲ್ಲ. ವಿದ್ಯೋದಯ ಸಭಾಂಗಣ, ಮರೀಗೌಡ ಸ್ಮಾರಕ ಭವನ ಹಾಗೂ ವೀರಶೈವ ವಿದ್ಯಾರ್ಥಿ ನಿಲಯಗಳಲ್ಲಿ ಮಾಡುತ್ತಾ ಬಂದಿದ್ದೇವೆ~ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮು.ರು.ನಾಗೇಂದ್ರಕುಮಾರ್, ಯೋಗ ಶಿಕ್ಷಕ ಎಸ್.ನಾಗೇಂದ್ರ ಪ್ರಭು, ಅಕ್ಕಿ ಗಿರಣಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ನಿರಣ್.ಕೆ.ವಸಂತ್ ಮಾತನಾಡಿದರು. ದೇವರಾಜು, ಜ್ಞಾನಾನಂದ್, ಶಿವಶಂಕರ್, ಶಿವಾನಂದ ಶರ್ಮ, ಕಸ್ತೂರಿ, ರವೀಂದ್ರಕುಮಾರ್, ನವೀನ್, ರವಿ, ಲಲಿತಾ, ಲೋಕೇಶ್, ಮಹೇಶ್, ಎಸ್.ಮಹಾದೇವ್, ಕೆ.ಆರ್. ಷಣ್ಮುಖಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.