ADVERTISEMENT

ಇನ್ಫಿ ನಾರಾಯಣಮೂರ್ತಿ ವಿರುದ್ಧ ವಾಟಾಳ್ ಕಿಡಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 6:40 IST
Last Updated 4 ಮಾರ್ಚ್ 2011, 6:40 IST

ಮೈಸೂರು: ‘ರಾಷ್ಟ್ರಗೀತೆಗೆ ಅವಮಾನ ಮಾಡಿದ ಇನ್ಫೋಸಿಸ್ ನಾರಾಯಣಮೂರ್ತಿ ಅವರನ್ನು ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಮಾಡಲು ಆಯ್ಕೆ ಮಾಡಿರುವುದು ಸರಿಯಲ್ಲ’ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಲ್ಲಿ ಕಿಡಿಕಾರಿದರು.ಕನ್ನಡ ಚಳವಳಿ ಕೇಂದ್ರ ಸಮಿತಿ ‘ವಿಶ್ವ ಕನ್ನಡ ಸಮ್ಮೇಳನ, ಕರ್ನಾಟಕ ಏಕೀಕರಣ, ಕನ್ನಡ ಭಾಷೆ ಬೆಳವಣಿಗೆ ಹಾಗೂ ಕನ್ನಡಿಗರ ಪರಿಸ್ಥಿತಿ’ ವಿಷಯ ಕುರಿತು ಗುರುವಾರ ಏರ್ಪಡಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ನಾರಾಯಣಮೂರ್ತಿ 8-10 ವರ್ಷದಿಂದ ಪ್ರಚಾರಕ್ಕೆ ಬಂದಿದ್ದಾರೆ. ಪ್ರಚಾರಕ್ಕೆ ಹಾತೊರೆಯುವ ಗುಂಪನ್ನು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಲಾಗುತ್ತಿದೆ. ರಾಷ್ಟ್ರಗೀತೆ ಅವಮಾನ ಮಾಡಿದ ವರಿಂದ ಸಮ್ಮೇಳನ ಉದ್ಘಾಟನೆ ಮಾಡಿಸುವುದು ಔಚಿತ್ಯವಲ್ಲ. ವಿಶ್ವ ಬಂಡವಾಳ ಹೂಡಿಕೆದಾರರ ಸಮಾ ವೇಶಕ್ಕೆ ಇವರನ್ನು ಉದ್ಘಾಟಕರಾಗಿ ಕರೆದಿದ್ದರೆ ಚೆನ್ನಾಗಿತ್ತು. ಕನ್ನಡ ನಾಡು, ನುಡಿಗೆ ಶ್ರಮಿಸುತ್ತಿರುವ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವ ರಿಂದ ಸಮ್ಮೇಳನ ಉದ್ಘಾಟನೆ ಮಾಡಿ ಸಬೇೀಕು’ ಎಂದು ಒತ್ತಾಯಿಸಿದರು.

‘ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನ ವಿರೋಧ ಇಲ್ಲ. ಆದರೆ ವಿಶ್ವದ ಗಮನ ಸೆಳೆಯಬೇಕಾದ ಸಮ್ಮೇಳನ ಬೆಳಗಾವಿಗೆ ಮಾತ್ರ ಸೀಮಿತ ವಾಗುವಂತೆ ಮಾಡಲಾಗುತ್ತಿದೆ.
ವಿದೇಶದಲ್ಲಿ ನೆಲೆಸಿರುವ ತಾಯಿ ನೆಲದ ಎಂಜಿನಿಯರುಗಳು, ವೈದ್ಯರನ್ನು ಕರೆಸಿ ಮೂರು ದಿನ ಊಟ ಹಾಕಿಸಿ ಸುಮ್ಮನಾಗುವುದರಲ್ಲಿ ಅರ್ಥವಿಲ್ಲ’ ಎಂದು ತಿಳಿಸಿದರು.

ಐಶ್ವರ್ಯಳಿಗೂ ಕನ್ನಡಕ್ಕೂ ನಂಟೇನು?: ‘ರಾಜ್ಯದಲ್ಲಿ ನಾನು ಬೇವರ್ಸಿ ಆಗಿದ್ದೇನೆ. ಕನ್ನಡ ಉಳಿವಿಗಾಗಿ ಲಾಠಿ, ಬೂಟು ಏಟನ್ನು ತಿಂದಿದ್ದೇನೆ. ಆದರೆ ನನ್ನನ್ನು ಸೇರಿದಂತೆ ಬಹುತೇಕ ಮಂದಿಯನ್ನು ಸಮ್ಮೇಳನಕ್ಕೆ ಆಹ್ವಾನಿಸದೆ ದೂರ ಇಡಲಾಗಿದೆ. ನಾನು ಸಮ್ಮೇಳನದಿಂದ ದೂರ ಉಳಿಯುತ್ತೇನೆ. ಐಶ್ವರ್ಯ ರೈ ಮಂಗಳೂರಿನವರಾಗಿರಬಹುದು. ಆದರೆ ಐಶ್ವರ್ಯಳಿಗೂ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಏನು ಸಂಬಂಧ?’ ಎಂದು ಪ್ರಶ್ನಿಸಿದ ಅವರು ‘ಕನ್ನಡರಿಗರೇ ಆದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತ ಮತ್ತು ಐಶ್ವರ್ಯ ರೈಗೆ ಕನ್ನಡ ಬಂದರೂ ಅವರು ಮಾತನಾಡುವು ದಿಲ್ಲ’ ಎಂದು ತಿಳಿಸಿದರು.

‘ಎಂಎಲ್‌ಎ, ಎಂಎಲ್‌ಸಿ, ರಾಜ್ಯಸಭಾ ಸದಸ್ಯ ಸ್ಥಾನಗಳನ್ನು ಹಣಕ್ಕಾಗಿ ಮಾರಾಟ ಮಾಡಿಕೊಳ್ಳ ಲಾಗುತ್ತಿದೆ. ಸ್ವಾಭಿಮಾನ ಇದ್ದಿದ್ದರೆ ಕನಸಿನ ರಾಣಿ ಹೇಮಮಾಲಿನಿಯನ್ನು ರಾಜ್ಯಸಭೆಗೆ ಕರೆತರುತ್ತಿರಲಿಲ್ಲ. ಸ್ವಾಭಿಮಾನ ಇದ್ದರೆ ಹೇಮಮಾಲಿನಿ ಯನ್ನು ಸೋಲಿಸಬೇಕು. ಒಂದು ಕಡೆ ವಿಶ್ವ ಕನ್ನಡ ಸಮ್ಮೇಳನ ಮತ್ತೊಂದು ಕಡೆ ಹೇಮಮಾಲಿನಿ ಉತ್ಸವ’ ಎಂದು ಮೂದಲಿಸಿದರು. ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಸಾಹಿತಿ ಪ್ರೊ.ಕೆ.ಎಸ್. ಭಗವಾನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಲೇಖಕಿ ಮಂಗಳಾ ಸತ್ಯನ್, ಕನ್ನಡ ಹೋರಾಟಗಾರ ಶ್ರೀನಿವಾಸಗೌಡ ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.