ADVERTISEMENT

ಉತ್ತಮ ಫಲಿತಾಂಶ; ಜವಾಬ್ದಾರಿ ಹೆಚ್ಚಳ

ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದ ಬಿಇಒ ಚಿಕ್ಕಸ್ವಾಮಿ

​ಪ್ರಜಾವಾಣಿ ವಾರ್ತೆ
Published 11 ಮೇ 2018, 6:53 IST
Last Updated 11 ಮೇ 2018, 6:53 IST

ಪಿರಿಯಾಪಟ್ಟಣ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕು ರಾಜ್ಯದಲ್ಲಿ 3 ನೇ ಸ್ಥಾನ ಹಾಗೂ ಜಿಲ್ಲೆಯಲ್ಲಿ ಸತತ 5 ನೇ ಬಾರಿಗೆ ಪ್ರಥಮ ಸ್ಥಾನ ಕಾಯ್ದುಕೊಂಡಿರುವುದು ಶೈಕ್ಷಣಿಕ ಪ್ರಗತಿಯ ದೃಷ್ಠಿಯಿಂದ ಉತ್ತಮ ಬೆಳವಣಿಗೆಯಾಗಿದೆ ಎಂದು ಬಿಇಒ ಚಿಕ್ಕಸ್ವಾಮಿ ಹೇಳಿದರು.

ಪಟ್ಟಣದ ಬಿಇಒ ಕಚೇರಿ ಸಭಾಂಗಣದಲ್ಲಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುವಾರ ಸನ್ಮಾನಿಸಿ ಮಾತನಾಡಿದರು.

ಈ ಸಾಧನೆಗೆ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಈ ಹಿಂದೆ ಇಲ್ಲಿ ಕರ್ತವ್ಯ ನಿರ್ವಹಿಸಿದ ಬಿಇಒಗಳಾದ ರಾಮಲಿಂಗು, ಆರ್.ಕರೀಗೌಡ ಅವರ ಶ್ರಮ ಕಾರಣವಾಗಿದೆ ಎಂದು ಸ್ಮರಿಸಿದರು.

ADVERTISEMENT

ತಾಲ್ಲೂಕಿನಲ್ಲಿರುವ ಸರ್ಕಾರಿ ಪ್ರೌಢಶಾಲೆಗಳಲ್ಲಿಯೂ ಸಹ ಈ ಬಾರಿಯ ಫಲಿತಾಂಶದಲ್ಲಿ ಏರಿಕೆ ಕಂಡಿದ್ದು, ಖಾಸಗಿ ಶಾಲೆಗಳು ಉತ್ತಮ ಫಲಿತಾಂಶ ಪಡೆಯಲು ಅನುಸರಿಸುವ ಮಾರ್ಗಗಳಾದ ರಾತ್ರಿಶಾಲೆ, ವಿಶೇಷ ತರಗತಿಗಳು, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರ ಸೇರಿದಂತೆ ಇನ್ನಿತರ ಕ್ರಮ ಅನುಸರಿಸುವ ಮೂಲಕ ಉತ್ತಮ ಫಲಿತಾಂಶ ಪಡೆಯಲಾಗಿದೆ ಎಂದರು.

ತಾಲ್ಲೂಕಿನಲ್ಲಿ ಒಟ್ಟು 48 ಪ್ರೌಢಶಾಲೆಗಳಿದ್ದು ಶೇ 92.29 ರಷ್ಟು ಫಲಿತಾಂಶ ಲಭಿಸಿದೆ. ಈ ಬಾರಿ 2 ಸರ್ಕಾರಿ ಶಾಲೆಗಳು, 3 ಅನುದಾನಿತ ಶಾಲೆಗಳು, 3 ಅನುದಾನ ರಹಿತ ಶಾಲೆಗಳಲ್ಲಿ ಶೇ 100 ರಷ್ಟು ಫಲಿತಾಂಶ ಪಡೆದಿವೆ. ಮಾತೃಭಾಷೆ ಕನ್ನಡದಲ್ಲಿ 80 ವಿದ್ಯಾರ್ಥಿಗಳು 125ಕ್ಕೆ 125 ಅಂಕ ಪಡೆದಿರುವುದು ಸಾಧನೆಯಾಗಿದೆ ಎಂದರು. ಬೆಟ್ಟದಪುರದ ಡಿಟಿಎಂಎನ್ ಶಾಲೆಯು ಸತತ 14ನೇ ಬಾರಿ ಶೇ 100 ಫಲಿತಾಂಶ ನೀಡುವ ಮೂಲಕ ಇತರ ಶಾಲೆಗಳಿಗೆ ಮಾದರಿಯಾಗಿದೆ ಎಂದರು.

 ಕೊಪ್ಪದ ಭಾರತ್ ಮಾತಾ ಪ್ರೌಢಶಾಲೆಯ ಅಂಕಿತಪಾತ್ರ, ಪಟ್ಟಣದ ಪುಷ್ಪ ಶಾಲೆಯ ಅನುಷೆ ಫಾತೀಮಾ ಮತ್ತು ವಿ.ಪಿ.ಭಾವನಾ ಹಾಗೂ  ದೊಡ್ಡ ಬೇಲಾಳು ಸರ್ಕಾರಿ ಫ್ರೌಢಶಾಲೆಯ ರಾಘವೇಂದ್ರ, ಮಾಕೋಡು ಸರ್ಕಾರಿ ಪ್ರೌಢಶಾಲೆಯ ಎಂ.ಎಸ್.ಸ್ಪರ್ಶಿತಾ, ರಾವಂದೂರು ಸರ್ಕಾರಿ ಫ್ರೌಢಶಾಲೆಯ ತನುಜಾ ಅವರನ್ನು ಸನ್ಮಾನಿಸಲಾಯಿತು.

ಬಿಆರ್‌ಸಿ ಹೇಮಂತ್ ರಾಜ್, ಬಿಆರ್‌ಪಿ ಲೋಕೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಎಸ್.ಮಹದೇವಪ್ಪ, ಇಸಿಒಗಳಾದ ಯೋಗರಾಜ್, ವಸಂತ್ ಶೇಖರ್, ಆರ್.ಸಿ.ಹರೀಶ್, ತಾಲ್ಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನಾಗಶೆಟ್ಟಿ, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಗುರುದತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.