ADVERTISEMENT

ಉದ್ಬೂರು ಆಶ್ರಮ ಶಾಲೆ ಅವ್ಯವಸ್ಥೆ ಆಗರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 10:22 IST
Last Updated 20 ಸೆಪ್ಟೆಂಬರ್ 2013, 10:22 IST

ಎಚ್.ಡಿ. ಕೋಟೆ: ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲೊಂದಾದ, ಮೈಸೂರು ಮಾನಂದವಾಡಿ ಹೆದ್ದಾರಿಯಲ್ಲಿ ಇರುವ ಉದ್ಬೂರು ಆಶ್ರಮ ಶಾಲೆ ಮೂಲಸೌಕರ್ಯಗಳಿಂದ ಬಳಲುತ್ತಿದ್ದು, ಶಾಲೆಯ ಸ್ಥಿತಿಗತಿಯನ್ನು ಕೇಳುವರೇ ಇಲ್ಲವಂತಾಗಿದೆ.

ಶಾಲೆಯ ಶೈಕ್ಷಣಿಕ ಅಭಿವೃದ್ಧಿ ಕುಂಠಿತವಾಗಿದ್ದು, ಬೋಧಕರಿಲ್ಲದೆ ವಿದ್ಯಾರ್ಥಿಗಳು ಪಾಠ ಕಲಿಕೆಯಲ್ಲಿ ತೀರಾ ಹಿಂದುಳಿದಿದ್ದಾರೆ. 
ತಾಲ್ಲೂಕಿನಲ್ಲಿ ಸುಮಾರು 10 ಆಶ್ರಮ ಶಾಲೆಗಳಿದ್ದು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಗ್ರಾಮದ ಆಶ್ರಮ ಶಾಲೆಯ ಕಟ್ಟಡ ದುಸ್ಥಿತಿಯಲ್ಲಿದ್ದು, ಇಲ್ಲಿನ ಶೌಚಾಲಯ ಕೊಠಡಿ ಬಾಗಿಲುಗಳು ಮುರಿದಿದ್ದು, ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದೆ, ದುರ್ವಾಸನೆ ಬೀರಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಇಲ್ಲಿರುವ ಸೋಲಾರ್‌ ವ್ಯವಸ್ಥೆ ಸರಿಯಾದ ನಿರ್ವಾಹಣೆ ಇಲ್ಲದೆ, ಕೆಟ್ಟುಹೋಗಿದೆ. ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ ಕೆಟ್ಟಿದ್ದು, ಮಕ್ಕಳು ಕುಡಿಯುವ ನೀರಿಗಾಗಿ ಕೈ ಪಂಪ್‌ ಅನ್ನು ಅವಲಂಭಿಸಿದ್ದಾರೆ.

ಶಾಲೆಯ ಕೊಠಡಿಗಳಲ್ಲಿ ವಿದ್ಯುತ್ ತಂತಿ ಹರಡಿಕೊಂಡಿದೆ. ಕೆಲ ಭಾಗಗಳಲ್ಲಿ ಕಿತ್ತು ನೇತಾಡುತ್ತಿದ್ದು, ಅಪಾಯ ಸೂಚನೆ ನೀಡುತ್ತಿದ್ದರು, ಇದನ್ನು ಸರಿಪಡಿಸುವ ಕಾರ್ಯಕ್ಕೆ ಯಾರು ಮುಂದಾಗದೆ ಇರುವುದು ವಿಪರ್ಯಾಸ. 2005-–06ರಲ್ಲಿ ದತ್ತು ಗ್ರಾಮ ಗಿರಿಜನ ಯೋಜನೆಯಡಿ ಆದಿವಾಸಿಗಳಿಗೆ ವಿತರಿಸಲೆಂದು ತರಲಾಗಿದ್ದ ಟ್ರೈಲರ್, ಪೈಪು ಮತ್ತು ಇತರೆ ವ್ಯವಸಾಯದ ಸಲಕರಣೆಗಳು ಶಾಲಾ ಆವರಣದಲ್ಲಿ ತುಕ್ಕು ಹಿಡಿಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.