ADVERTISEMENT

ಉದ್ಯಮಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಸಿದ್ಧ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 9:39 IST
Last Updated 25 ಜೂನ್ 2013, 9:39 IST

ಮೈಸೂರು: `ಜಾಗತಿಕ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶದಿಂದ ರಾಜ್ಯದಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ಸಿದ್ಧ' ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಘೋಷಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಫ್‌ಕೆಸಿಸಿಐ) ಹಮ್ಮಿಕೊಂಡಿರುವ 4ನೇ ರಾಜ್ಯಮಟ್ಟದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಸಮ್ಮೇಳನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. `ಬಂಡವಾಳ ಹೂಡಿಕೆಗೆ ಮೂಲ ಸೌಲಭ್ಯಗಳ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಉದ್ಯಮಿಗಳಿಗೆ ಪೂರಕ ವಾತಾವರಣ ನಿರ್ಮಿಸಲಾಗುವುದು ಎಂಬ ಭರವಸೆಯನ್ನು ಸಿದ್ದರಾಮಯ್ಯ ಅವರು ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲೇ ನೀಡಿದ್ದರು. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಕಾರ್ಯಕ್ರಮಗಳಲ್ಲಿ ತಕ್ಕಂತೆ ಯೋಜನೆಗಳನ್ನು ರೂಪಿಸಲಾಗುವುದು. ರಸ್ತೆ, ವಿದ್ಯುತ್ ಮತ್ತು ನೀರಿನ ಸಮಸ್ಯೆಯನ್ನು ಒದಗಿಸುವ ಮೂಲಕ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಪ್ರಯತ್ನಿಸಲಾಗುವುದು' ಎಂದು ಪ್ರಕಟಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ಎಷ್ಟು ಬಂಡವಾಳ ಹರಿದುಬಂದಿದೆ; ಅಭಿವೃದ್ಧಿಯ ದೃಷ್ಟಿಯಿಂದ ಹೇಗೆ ಪ್ರಯೋಜನವಾಗಿದೆ ಎಂಬುದನ್ನು ಸರ್ಕಾರ ಚರ್ಚಿಸಲಿದೆ. ಹಲವು ವರ್ಷಗಳ ಬಳಿಕ ಜನತೆ ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಹೀಗಾಗಿ, ಜನರು ನಿರೀಕ್ಷಿಸುವ ಕಣ್ಣಿಗೆ ಕಾಣುವ ಬದಲಾವಣೆಗಳನ್ನು ತರಲು ಸರ್ಕಾರ ಮುಂದಾಗಲಿದೆ.

ಹಣಕಾಸು ಹಾಗೂ ಕೈಗಾರಿಕಾ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ತಯಾರಿಯಲ್ಲಿ ತೊಡಗಿದ್ದು, ಎಲ್ಲರ ನಿರೀಕ್ಷೆಗಳನ್ನು ಈಡೇರಿಸಲಿದ್ದಾರೆ. ಅಂಗೈಯಲ್ಲೇ ಸ್ವರ್ಗ ತೋರಿಸುವ ಎರಡು ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸುವುದು ಸುಲಭ. ಆದರೆ, ಅದಕ್ಕೆ ಸಂಪನ್ಮೂಲಗಳನ್ನು ಕ್ರೂಡೀಕರಿಸುವುದು ಕಷ್ಟ. ಹೀಗಾಗಿ, ಅಬಕಾರಿ, ಕಂದಾಯ ಹಾಗೂ ವಾಣಿಜ್ಯ ತೆರಿಗೆಯ ಮೂಲಕ ಸಂಗ್ರಹವಾಗುವ ಆದಾಯವನ್ನು ಆಧರಿಸಿ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.