ADVERTISEMENT

ಉನ್ನತ ಶಿಕ್ಷಣದಿಂದ ದೇಶ ಅಭಿವೃದ್ಧಿ: ಪ್ರೊ. ರಂಗಪ್ಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 6:35 IST
Last Updated 27 ಸೆಪ್ಟೆಂಬರ್ 2011, 6:35 IST

ಮೈಸೂರು: ಉನ್ನತ ಶಿಕ್ಷಣ ಎಲ್ಲರಿಗೂ ಸಿಗುವಂತಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಭಿಪ್ರಾಯಪಟ್ಟರು.

ವಿಜಯನಗರದ ಸರ್ಕಾರಿ ಮಹಿಳಾ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಗುಣಮಟ್ಟದ ಶಿಕ್ಷಣವಿದೆ. ಆದರೆ ಅದು ಎಲ್ಲರಿಗೂ ದೊರಕುವಂತಾಗಬೇಕು. ವಿದೇಶ ದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಶಿಕ್ಷಣವನ್ನು ಅಲ್ಲಿ ಎಲ್ಲರಿಗೂ ಉಚಿತವಾಗಿ ನೀಡಲಾಗುತ್ತದೆ. ಹೀಗಾಗಿ ಆ ದೇಶಗಳು ಶೇ 90ರಷ್ಟು ಸಾಕ್ಷರತೆ ಹೊಂದಿವೆ. ಹೆಚ್ಚು ಹೆಚ್ಚು ಶಾಲಾ- ಕಾಲೇಜುಗಳು ಸ್ಥಾಪನೆ ಯಾದರೆ ಸಾಕ್ಷರತೆ ಪ್ರಮಾಣ ಕೂಡ ಬೆಳೆಯುತ್ತದೆ.
 
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಹುಪಾಲು ಜನ ಗ್ರಾಮೀಣ ಪ್ರತಿಭೆಗಳು. ಗ್ರಾಮೀಣ ವಿದ್ಯಾರ್ಥಿಗಳಲ್ಲಿರುವ ಬುದ್ಧಿಶಕ್ತಿ, ವಿದ್ವತ್ತು ಬೇರೆಯವರಲಿಲ್ಲ. ಆದರೆ ಅವರಿಗೆ ಸರಿಯಾದ ಮಾರ್ಗ ದರ್ಶನ, ಸೌಲಭ್ಯ ದೊರಕುತ್ತಿಲ್ಲ ಎಂದು ವಿಷಾದಿಸಿದರು.

ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಎಲ್ಲವನ್ನೂ ಅನುಕರಣೆ ಮಾಡ ಬಾರದು. ನಮ್ಮ ದೇಶದಲ್ಲಿರುವ ಸಂಸ್ಕೃತಿ, ವಿದ್ಯೆ ಬೇರೆ ದೇಶಗಳಲ್ಲಿಲ್ಲ. ಆದರೆ ಒಳ್ಳೆಯ ಅಂಶಗಳನ್ನು ವಿದೇಶಿ ಗರಿಂದ ಕಲಿಯಬೇಕಾಗದ ಅಗತ್ಯ ವಿದೆ. ದೇಶಭಕ್ತಿ, ಪ್ರಾಮಾಣಿಕತೆ, ಸಾರ್ವಜನಿಕ ಸ್ಥಳಗಳನ್ನು ಶುಚಿಯಾಗಿಡುವ ವಿಚಾರ ದಲ್ಲಿ ವಿದೇಶಿಗರು ಮಾದರಿ ಎಂದರು.

ವಿಜ್ಞಾನ ಅತಿ ವೇಗವಾಗಿ ಬೆಳೆಯುತ್ತಿ ರುವ ಈ ಸಂದರ್ಭದಲ್ಲಿ ಪರಸ್ಪರ ಹೊಂದಾಣಿಕೆ ಇದ್ದರೆ ದೇಶ ಅಭಿವೃದ್ಧಿ ಯತ್ತ ಸಾಗುತ್ತದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಚೀನ ವಿಶ್ವ ಬೆರ ಗಾಗುವ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ವಿದ್ಯಾರ್ಥಿಗಳು, ವಿಜ್ಞಾನಿಗಳಿಂದ ದೇಶ ಕಟ್ಟಲು ಸಾಧ್ಯವೇ ಹೊರತು ರಾಜಕಾರಿಣಿ, ಅಧಿಕಾರಿಗಳಿಂದ ಅಲ್ಲ ಎಂದು ಹೇಳಿದರು.

ಶಾಸಕ ಎಚ್.ಎಸ್.ಶಂಕರಲಿಂಗೇಗೌಡ ಮಾತನಾಡಿ, ರಾಜಕಾರಣ ಚದುರಂಗವಿದ್ದಂತೆ. ಇಲ್ಲಿ ದುಷ್ಟರೇ ತುಂಬಿ ತುಳುಕುತ್ತಿದ್ದಾರೆ. ಅದರಲ್ಲಿ ನಾನೂ ಇದ್ದೇನೆ ಎನ್ನುವುದೇ ವಿಷಾದದ ಸಂಗತಿ. ಆದರೆ ಎಂದೂ ಭ್ರಷ್ಟಾಚಾರ ಮಾಡಲಿಲ್ಲ. ಭ್ರಷ್ಟನಾಗಿದ್ದರೆ ನೂರಾರು ಕೋಟಿ ಆಸ್ತಿ ಮಾಡುತ್ತಿದ್ದೆ. ಹಾಗೆ ಮಾಡುವ ಆಸೆ ನನಗಿಲ್ಲ. ಊರಿಗೆ ಉಪಕಾರ ಮಾಡಬಾರದು ಹೆಣಕ್ಕೆ ಶೃಂಗಾರ ಮಾಡಬಾರದು ಎನ್ನುತ್ತಾರೆ.

ಆದರೆ ಸಾಲ ಮಾಡಿ ಸಾಮಾಜಿಕ ಸೇವೆ ಮಾಡುತ್ತಿದ್ದೇನೆ. ಹಣ ಗಳಿಸುವುದಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದೇನೆ ಎಂದರು.ಪ್ರಾಂಶುಪಾಲ ಪ್ರೊ.ಕೆ.ಎಸ್. ಲಕ್ಷ್ಮಣಗೌಡ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.