ADVERTISEMENT

ಎಸ್ಸೆಸ್ಸೆಲ್ಸಿ, ಪಿಯುಸಿ: ಅತಿ ಹೆಚ್ಚು ಅಂಕ ಪಡೆದ ಕಾರ್ಮಿಕರ ಮಕ್ಕಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 2 ಮೇ 2011, 11:10 IST
Last Updated 2 ಮೇ 2011, 11:10 IST

ಮೈಸೂರು: ‘ಪ್ರಸಕ್ತ ವರ್ಷದಿಂದಲೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಜಿಲ್ಲೆಯ ಕಾರ್ಮಿಕರ ಮಕ್ಕಳನ್ನು ಸರ್ಕಾರದ ವತಿಯಿಂದ ಸನ್ಮಾನಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.

ನಗರದ ಕಲಾಮಂದಿರದಲ್ಲಿ ಭಾನುವಾರ ಫಾಲ್ಕನ್ ಟೈರ್ಸ್ ಕಾರ್ಮಿಕ ಸಂಘದ ವತಿಯಿಂದ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಜಿಲ್ಲೆಯ ಕಾರ್ಮಿಕರ ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ ಪರೀಕ್ಷೆಗಳಲ್ಲಿ ಹೆಚ್ಚು  ಅಂಕ ಹಾಗೂ ಉನ್ನತ ಶ್ರೇಣಿಯನ್ನು ಪಡೆದ ಮಕ್ಕಳನ್ನು ಸನ್ಮಾನಿಸಲಾಗುವುದು. ಈ ಸಂಬಂಧ ಮುಂದಿನ ವರ್ಷದಿಂದ ನಿಧಿ ಸ್ಥಾಪನೆ ಮಾಡಲಾಗುವುದು, ನಂತರ ಇದನ್ನು ಜಿಲ್ಲಾಡಳಿತ ಮುಂದುವರೆಸಿಕೊಂಡು ಹೋಗಲಿದೆ’ ಎಂದರು.

‘ಕಾರ್ಮಿಕರು ಮತ್ತು ರೈತರು ದೇಶದ ಬೆನ್ನೆಲುಬು. ದೇಶದ ಕೈಗಾರಿಕೆ ಉಳಿಯಬೇಕಾದರೆ ಉತ್ಪಾದನೆ ಹೆಚ್ಚು ಮಾಡಬೇಕು. ಸ್ಪರ್ಧಾತ್ಮಕ  ಯುಗದಲ್ಲಿ ಇರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಬೇಕಾದರೆ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಮತ್ತು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಹೇಗೆ ಎಂಬುದರ ಬಗ್ಗೆಯೂ ಗಮನಹರಿಸಬೇಕು. ರಾಜಕಾರಣಿಗಳು ಮತ್ತು ಆಡಳಿತ ಮಂಡಳಿಗಳಿಂದ ಕಾರ್ಮಿಕರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ’ ಎಂದು ಅವರು ವಿಷಾದಿಸಿದರು.

‘ಕಾರ್ಮಿಕರು ಮತ್ತು ಮಾಲೀಕರ ನಡುವಿನ ಕೊಂಡಿ ಸರಿಯಾಗಿರಬೇಕು. ಕಾರ್ಮಿಕ ಸಂಘಗಳಿಂದ ಕಾರ್ಖಾನೆ ಬೆಳವಣಿಗೆ ಆಗಿದೆ. ವ್ಯಕ್ತಿ ಎಷ್ಟೇ ಎತ್ತರದ ಸ್ಥಾನಕ್ಕೇರಿದರೂ ತಾನು ನಡೆದ ಬಂದು ದಾರಿಯನ್ನು ನೋಡಬೇಕು. ನಾನು ಸಹ ಕಾರ್ಮಿಕನಾಗಿದ್ದೆ. ಜೈ ಎಲೆಟ್ರಿಕಲ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಯಾವುದೇ ಕಾರ್ಖಾನೆಯಲ್ಲಿ ಎರಡು ಸಂಘಗಳು ಇರಬಾರದು. ಕುಟುಂಬದ ಸಮಸ್ಯೆಗಳನ್ನು ಒಳಗೆ ಇತ್ಯರ್ಥ ಪಡಿಸಿಕೊಳ್ಳಬೇಕು. ಪಶ್ಚಿಮ ಬಂಗಾಳದಲ್ಲಿ ಬಹುತೇಕ ಕಾರ್ಖಾನೆಗೆ ಬೀಗ ಹಾಕಲು ಕಾರ್ಮಿಕ ಸಂಘಗಳೇ ಕಾರಣ. ನಿಷ್ಠೆಯಿಂದ ಕೆಲಸ ನಿರ್ವಹಿಸಿದರೆ ಜೀವನದಲ್ಲಿ ಗುರಿ ಮುಟ್ಟಬಹುದು’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ನಡೆದ ಜಾಗತಿಕ ಸಮಾವೇಶದಲ್ಲಿ ಲಕ್ಷ್ಮೀ ಮಿಲ್‌ನವರು ಮೈಸೂರಿಗೆ ಬರಲು ಹಿಂದೇಟು ಹಾಕಿದರು. ಕಾರಣ ಕೇಳಿದಾಗ ಕಾರ್ಮಿಕರ ಒಳಜಗಳ ಎಂದು ಉತ್ತರಿಸಿದರು. ಕಾರ್ಮಿಕರ ಒಳಜಗಳದಿಂದ ಜಾವಾ, ಕೆ.ಆರ್.ಮಿಲ್, ಸುಜಾತ ಮಿಲ್, ಮಹೇಂದ್ರ, ಜೈ  ಬೇರಿಂಗ್ ಕಾರ್ಖಾನೆಗಳನ್ನು ಕಳೆದುಕೊಳ್ಳಬೇಕಾಯಿತು. ಆದರೆ ಈಗ ಕಾಲ ಬದಲಾಗಿದೆ. ಎರಡು ದಶಕಗಳ ಹಿಂದೆ ಇದ್ದ ಪರಿಸ್ಥಿತಿ ಇಲ್ಲ.

ಈಗ ವಿದ್ಯಾವಂತರು, ಪದವೀಧರರು, ಸ್ನಾತಕೋತ್ತರ ಪದವೀಧರರು ಇದ್ದಾರೆ.  ಈಗ ಒಳಜಗಳ ಇಲ್ಲ ಎಂದು ಹೇಳಿದೆ. ಈಗಾಗಲೇ 16 ಕೈಗಾರಿಕೆಗಳು ಒಡಂಬಡಿಕೆಗೆ ಸಹಿ ಹಾಕಿವೆ. ಎರಡು ಕೈಗಾರಿಕೆಗಳು ಆರಂಭಿಸಿವೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಫಾಲ್ಕನ್ ಟೈರ್ಸ್ ಕಾರ್ಯಪಾಲಕ ನಿರ್ದೇಶಕ ಸುನಿಲ್ ಬನ್ಸಾಲಿ, ಸಂಘದ ಅಧ್ಯಕ್ಷ ಎಸ್.ಜೆ.ಶಿವಕುಮಾರ್, ನಿರ್ದೇಶಕ ಜೆ.ಪುರುಷೋತ್ತಮ್, ಉಪಾಧ್ಯಕ್ಷ ಎಂ.ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ನಂಜುಂಡಸ್ವಾಮಿ, ಕಾರ್ಯದರ್ಶಿ ಅಬ್ದುಲ್ ಕಯಾಂ, ಖಜಾಂಚಿ ಸಿದ್ದೇಗೌಡ, ಮಹೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.