ADVERTISEMENT

ಕಟಾವು ಆಗದ ಕಬ್ಬು: ಬೆಳೆಗಾರ ಆತಂಕ

ಸಾಲಿಗ್ರಾಮ ಯಶವಂತ್
Published 21 ಸೆಪ್ಟೆಂಬರ್ 2011, 5:30 IST
Last Updated 21 ಸೆಪ್ಟೆಂಬರ್ 2011, 5:30 IST
ಕಟಾವು ಆಗದ ಕಬ್ಬು: ಬೆಳೆಗಾರ ಆತಂಕ
ಕಟಾವು ಆಗದ ಕಬ್ಬು: ಬೆಳೆಗಾರ ಆತಂಕ   

ವಿಶೇಷ ವರದಿ
ಸಾಲಿಗ್ರಾಮ:
  ಕಾರ್ಖಾನೆ ಗುತ್ತಿಗೆ  ಪಡೆದು 5 ವರ್ಷ ಕಳೆದರೂ ಕರಾರು ಪತ್ರಕ್ಕೆ ಮಾತ್ರ ಸಹಿ ಹಾಕಿಲ್ಲ. ಗುತ್ತಿಗೆ ಹಣ ಮುಂಗಡ ಪಾವತಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದರೂ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಳ್ಳಲಾಗಿದೆ. ಕಬ್ಬು ಅರೆಯುವಂತೆ ಶಾಸಕರೇ ಧರಣಿ  ಕುಳಿತುಕೊಳ್ಳುವ ದಯನೀಯ ಸ್ಥಿತಿ.

-ಇದು ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆಯ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸ್ತುತ ಸ್ಥಿತಿ.

ಶ್ರೀರಾಮ ಸಕ್ಕರೆ ಕಾರ್ಖಾನೆ ಸಹಕಾರಿ ಕ್ಷೇತ್ರದಲ್ಲಿ ಇದ್ದಾಗ ಆರ್ಥಿಕ ತೊಂದರೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ತಪ್ಪಿಸಲು ಅಂದಿನ  ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಾ.ರಾ. ಮಹೇಶ್ ಈ ಕಾರ್ಖಾನೆ ಯನ್ನು ಅಂಬಿಕಾ ಷುಗರ್ಸ್‌ಗೆ ಗುತ್ತಿಗೆ ನೀಡುವಂತೆ ಮನವಿ ಮಾಡಿದರು. 

ಅಂಬಿಕಾ ಷುಗರ್ಸ್‌ ಕಾರ್ಖಾನೆ ಆಡಳಿತ ಮಂಡಳಿ ಗುತ್ತಿಗೆ ಪಡೆದ ಪ್ರಾರಂಭದಲ್ಲೇ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕಾಲದಲ್ಲಿ ಹಣ ಪಾವತಿಸಿ ಉಪಕಾರ ಮಾಡಿತು. ಇದರಿಂದ ಬೆಳೆಗಾರರು ಸಂತಸ ಪಟ್ಟಿದ್ದರು. ಆದರೆ, ದಿನಗಳು ಉರುಳಿದಂತೆ ಅಂಬಿಕಾ ಷುಗರ್ಸ್‌ ಸರ್ಕಾರದೊಂದಿಗೆ ಮಾಡಿಕೊಂಡ  ಒಪ್ಪಂದಕ್ಕೆ ಬೆಲೆ ಕೊಡದೆ ಹಣ ಬಾಕಿ ಉಳಿಸಿಕೊಳ್ಳುವ ಪ್ರವೃತ್ತಿ ತೋರಿಸಿತು. ಆಗ ಇದನ್ನು ಯಾರೂ ಪ್ರಶ್ನೆ ಮಾಡಲಿಲ್ಲ. ಕಾರ್ಖಾನೆಯ ಆವರಣದಲ್ಲಿದ್ದ ಸಾವಿರಾರು ತೇಗದ ಮರಗಳನ್ನು ಕಡಿದು ಕಾರ್ಖಾನೆಗೆ ಮತ್ತಷ್ಟು ನಷ್ಟ ಉಂಟು ಮಾಡಲಾಯಿತು.

ನಂತರದ ದಿನಗಳಲ್ಲಿ ಅಂಬಿಕಾ ಷುಗರ್ಸ್‌ ಪ್ರತಿ ವರ್ಷದಂತೆ ಆಗಸ್ಟ್‌ನಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ  ಸಿಲುಕಿದ್ದಾರೆ. ಈಗ ಶಾಸಕ ಸಾ.ರಾ. ಮಹೇಶ್ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಆಹೋ ರಾತ್ರಿ ಧರಣಿ ಕುಳಿತು ಕಬ್ಬು ಅರೆಯಲು ಚಾಲನೆ ನೀಡುವಂತೆ ಒತ್ತಾಯಿಸಿದ್ದಾರೆ. ಸದ್ಯಕ್ಕೆ ಧರಣಿ ನಿಂತಿದೆ. ರೈತರ ಸಂಕಷ್ಟ ಮುಂದುವರಿದಿದೆ.

ಶ್ರೀರಾಮ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಸುಮಾರು 6200 ಎಕರೆ ಭೂಮಿಯಲ್ಲಿ ಕಬ್ಬು ಬೆಳೆ ಬೆಳೆಯಲಾಗಿದೆ. ಇದರಲ್ಲಿ 2 ಸಾವಿರ ಎಕರೆ ಜಮೀನಿನಲ್ಲಿ ಇರುವ ಕಬ್ಬು ಬೆಳೆಗೆ 15 ತಿಂಗಳು ತುಂಬಿದೆ. ಈ ಬೆಳೆಯನ್ನು ಕಟಾವು ಮಾಡಲು ಮುಂದಾಗದೇ ಇರುವುದರಿಂದ ರೈತರಿಗೆ ಸಾಲದ ಹೊರೆ ಜಾಸ್ತಿಯಾಗುವ ಭೀತಿ ಆವರಿಸಿದೆ ಎಂದು ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳೇ ಮಿರ್ಲೆ ಸುನೈಗೌಡ ದೂರುತ್ತಾರೆ.

ಕಾರ್ಖಾನೆ ಗುತ್ತಿಗೆ ಪಡೆಯುವಾಗ ಕಬ್ಬು ಅರೆಯುವ ಸಾಮರ್ಥ್ಯವನ್ನು 2500 ಟನ್‌ಗೆ ಹೆಚ್ಚಿಸಿ ಕೊಳ್ಳುವ ಜೊತೆಗೆ ವಿದ್ಯುತ್ ಉತ್ಪಾದನಾ ಘಟಕ ತೆರೆಯುವ ಭರವಸೆ ನೀಡಿದ್ದ ಅಂಬಿಕಾ ಷುಗರ್ಸ್‌, ಐದು ವರ್ಷ ಕಳೆದರೂ ಸುಮ್ಮನಿದೆ. ಇದೇ ಈಗ ರೈತರ ಪಾಲಿಗೆ ಶಾಪವಾಗಿದೆ ಎಂದು ಹೇಳುತ್ತಾರೆ.

ಸಚಿವರ ಭರವಸೆ: ಶಾಸಕರ ಧರಣಿ ಅಂತ್ಯ
ಮೈಸೂರು:
ಕೆ.ಆರ್.ನಗರ ತಾಲ್ಲೂಕಿನ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕೆಲಸವನ್ನು ಶೀಘ್ರವೇ ಆರಂಭಿಸುವಂತೆ ಒತ್ತಾಯಿಸಿ ಶಾಸಕ ಸಾ.ರಾ.ಮಹೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭಿಸಿದ ಧರಣಿಯನ್ನು ಸಚಿವ ಎಸ್.ಎ.ರಾಮದಾಸ್ ಅವರ ಭರವಸೆ ಮೇರೆಗೆ ಮಂಗಳವಾರ ಅಂತ್ಯಗೊಳಿಸಲಾಯಿತು.

ಜಿಲ್ಲಾಡಳಿತದಿಂದ ಯಾವುದೇ ಭರವಸೆ ಬಾರದ ಹಿನ್ನೆಲೆಯಲ್ಲಿ ಧರಣಿಯನ್ನು ಆಹೋರಾತ್ರಿ ಮುಂದುವರೆಸಲಾಯಿತು. ಸಾ.ರಾ.ಮಹೇಶ್ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದರಿಂದ ಕೆ.ಆರ್.ಆಸ್ಪತ್ರೆ ವೈದ್ಯರು ಬೆಳಿಗ್ಗೆ ವೈದ್ಯಕೀಯ ತಪಾಸಣೆ ಮಾಡಿದರು.

ರಾಮದಾಸ್ ಅವರು ಧರಣಿನಿರತರ ಸ್ಥಳಕ್ಕೆ ಮಧ್ಯಾಹ್ನ ಆಗಮಿಸಿ `ಸೆ.29 ರಿಂದ ಕಾರ್ಖಾನೆಯಲ್ಲಿ ಕಬ್ಬು ಅರೆಯಲು ಆದೇಶಿಸಲಾಗುವುದು~ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನು ಕೈಬಿಡಲಾಯಿತು. ಜೆಡಿಎಸ್ ನಗರ ಕಾರ್ಯಾಧ್ಯಕ್ಷ ಎಸ್‌ಬಿಎಂ ಮಂಜು, ಕೆ.ಆರ್.ಕ್ಷೇತ್ರದ ಅಧ್ಯಕ್ಷ ಎಸ್.ಪ್ರಕಾಶ್, ಚಂದ್ರಶೇಖರ್, ಲಾರಿ ಸ್ವಾಮಿಗೌಡ, ಮೈಮುಲ್ ನಿರ್ದೇಶಕ ಶೇಖರ್ ಇತರರು ಧರಣಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.