ಮೈಸೂರು: ‘ಹುತ್ತದಲ್ಲಿ ಹೂತಿದ್ದ ಶಿಶುವಿನ ಶವವನ್ನು ಹೊರ ತೆಗೆದಾಗ ಮಡುಗಟ್ಟಿದ್ದ ದುಃಖ ಕಟ್ಟೆಯೊಡೆಯಿತು. ಮಧ್ಯರಾತ್ರಿಯ ಕತ್ತಲಲ್ಲೂ ಕಣ್ಣೀರು ಧಾರೆಯಾಗಿ ಹರಿಯಿತು’ ಎನ್ನುವಾಗ ಮೂರ್ತಿ ಸಹೋದರ ಶಿವಪ್ರಸಾದ್ ಅವರ ಕಣ್ಣಾಲಿಗಳು ತೇವಗೊಂಡಿದ್ದವು.
ನಂಜನಗೂಡು ತಾಲ್ಲೂಕಿನ ಕೃಷ್ಣಾ ಪುರದ ಮೂರ್ತಿ ಮತ್ತು ರೂಪಾ ದಂಪತಿಯ ಮೃತ ಶಿಶುವಿನೊಂದಿಗೆ ದೇವರಾಜ ಠಾಣೆಯ ಎದುರು ಬುಧ ವಾರ ಪ್ರತಿಭಟನೆ ನಡೆಸಿದ ಶಿವಪ್ರಸಾದ್, ಘಟನೆಯ ಕುರಿತು ಮಮ್ಮಲ ಮರುಗಿದರು. ಆಸ್ಪತ್ರೆಯ ವೈದ್ಯರ ವಿರುದ್ಧ ಅವರು ಆಕ್ರೋಶ ಹೊರಹಾಕಿದರು.
ಜ. 17ರಂದು ರಾತ್ರಿ ರೂಪಾ ಅವರಿಗೆ ಹೊಟ್ಟೆ ನೋವು ಕಾಣಿಸಿ ಕೊಂಡಿತು. ತಕ್ಷಣ ಅವರನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿದೆವು. ಮಿದುಳು ಬೆಳವಣಿಗೆ ಹೊಂದದ ಪರಿ ಣಾಮ ಶಿಶು ಗರ್ಭದಲ್ಲಿಯೇ ಮೃತ ಪಟ್ಟಿದೆ ಎಂಬುದನ್ನು ವೈದ್ಯರು ಖಚಿತಪಡಿಸಿದರು.
ಶಸ್ತ್ರಚಿಕಿತ್ಸೆಯ ಮೂಲಕ ಜ. 18ರ ಬೆಳಿಗ್ಗೆ 5 ಗಂಟೆಗೆ ಶಿಶುವನ್ನು ತಾಯಿ ಗರ್ಭದಿಂದ ಹೊರತೆಗೆಯಲಾಯಿತು. ಮೃತ ಶಿಶುವನ್ನು ಅಂದು ಬೆಳಿಗ್ಗೆ 10 ಗಂಟೆಗೆ ಹಸ್ತಾಂತರಿಸಿದರು. ಮೃತಪಟ್ಟಿದ್ದ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಸ್ಪತ್ರೆ ಸಿಬ್ಬಂದಿ ನೀಡಿದರು ಎಂದು ಮಾತಿಗೆ ಇಳಿದರು.
‘ರೂಪಾಗೆ ಶುಶ್ರೂಷೆಯ ಅಗತ್ಯವಿದ್ದ ಪರಿಣಾಮ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲಾ ಯಿತು. ಹೀಗಾಗಿ, ಮೂರ್ತಿ ಕೂಡ ಪತ್ನಿಯ ಜೊತೆ ಉಳಿದರು. ಮೂರ್ತಿ ತಾಯಿ ತಾಯಮ್ಮ ಹಾಗೂ ಕುಟುಂಬ ಸ್ಥರು ಶಿಶುವಿನ ಶವದೊಂದಿಗೆ ಗ್ರಾಮಕ್ಕೆ ಮರಳಿದೆವು. ಸಂಜೆ 4 ಗಂಟೆಯ ಹೊತ್ತಿಗೆ ಹುತ್ತವೊಂದರಲ್ಲಿ ಹೂತು ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದೆವು ಎಂದರು.
‘ಮಂಗಳವಾರ ರಾತ್ರಿ ದೂರವಾಣಿ ಕರೆ ಮಾಡಿದ ಪೊಲೀಸರು ಮೂರ್ತಿಯನ್ನು ವಶಕ್ಕೆ ಪಡೆದಿದ್ದಾಗಿ ತಿಳಿಸಿದಾಗ ಭಯವಾಯಿತು. ಶಿಶುವಿನ ಶವವನ್ನು ಕೂಡಲೇ ಠಾಣೆಗೆ ತರುವಂತೆ ಸೂಚಿಸಿದರು. ಇಲ್ಲವಾದರೆ ಮೂರ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಬೆದರಿಸಿದರು. ಹೀಗಾಗಿ, ರಾತ್ರಿ 11ರ ಸುಮಾರಿಗೆ ಹೂತಿದ್ದ ಶಿಶುವಿನ ಶವವನ್ನು ಹೊರತೆಗೆದೆವು. ಆಟೊ ಹಿಡಿದು ಬುಧವಾರ ರಾತ್ರಿ 1 ಗಂಟೆಯ ಸುಮಾರಿಗೆ ಠಾಣೆಗೆ ಧಾವಿಸಿದೆವು’ ಎಂದು ಮಾಹಿತಿ ನೀಡಿದರು.
ವೈದ್ಯರ ನಿರ್ಲಕ್ಷ್ಯ: ದೂರು ದಾಖಲು
ಮೈಸೂರು: ಚೆಲುವಾಂಬ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಶಿಶು ಮೃತ ಪಟ್ಟಿದೆ ಎಂದು ಆರೋಪಿಸಿ ಕೆ.ಆರ್. ಪೇಟೆ ತಾಲ್ಲೂಕಿನ ಮುದುಗೆರೆ ಗ್ರಾಮದ ಚಂದ್ರೇಗೌಡ ಮತ್ತು ಶೋಭಾ ದಂಪತಿ ಇಲ್ಲಿನ ದೇವರಾಜ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಶೋಭಾ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಮಂಗಳವಾರ ಬೆಳಿಗ್ಗೆ ಶೋಭಾ ಗಂಡುಮಗುವಿಗೆ ಜನ್ಮ ನೀಡಿದರು. ಕೆಲ ಹೊತ್ತಿನ ಬಳಿಕ ಶಿಶು ಮೃತಪಟ್ಟಿದ್ದಾಗಿ ಹೇಳಿದ ಆಸ್ಪತ್ರೆ ಸಿಬ್ಬಂದಿ ಶವವನ್ನು ಕೈಗಿಟ್ಟರು. ಜನಿಸಿದಾಗ ಆರೋಗ್ಯವಾಗಿದ್ದ ಶಿಶು ಅರ್ಧ ಗಂಟೆಯ ಬಳಿಕ ಮೃತಪಟ್ಟಿದ್ದೇಕೆ ಎಂಬುದಕ್ಕೆ ವೈದ್ಯರು ಸರಿಯಾಗಿ ಉತ್ತರಿಸಲಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಪತ್ನಿಯ ಮೇಲೆ ಆಸ್ಪತ್ರೆಯ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಹೆರಿಗೆ ಕೊಠಡಿಯಿಂದ ಹೊರಬರುತ್ತಿದ್ದ ಪತ್ನಿಯನ್ನು ಎಳೆದಾಡಿದ್ದಾರೆ. ಮಗು ಸಾವಿಗೆ ವೈದ್ಯರು ನೀಡಿದ ಹೇಳಿಕೆಗಳು ಭಿನ್ನವಾಗಿವೆ. ಅಲ್ಲದೇ, ಶಿಶು ಮೃತದೇಹವನ್ನು ಪರಿಶೀಲಿಸಿದಾಗ ತಲೆಯಲ್ಲಿ ಗಾಯ ಪತ್ತೆಯಾಗಿದೆ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿದ್ದಾರೆ.
***
ಶಿಶು ಅಗಲಿಕೆಯ ನೋವು ಮಾಸುವ ಮುನ್ನವೇ ವೈದ್ಯರು ಆರೋಪ ಮಾಡಿದ್ದು ಮತ್ತಷ್ಟು ಘಾಸಿ ಉಂಟು ಮಾಡಿತು.
-ಶಿವಪ್ರಸಾದ್, ಮೂರ್ತಿ ಅವರ ಸಹೋದರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.