ADVERTISEMENT

ಕನ್ನಡ ಧೈರ್ಯದ ಸಂಕೇತ: ಬಸವರಾಜ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 6:10 IST
Last Updated 7 ಜನವರಿ 2012, 6:10 IST

ಮೈಸೂರು: ಗೋಕಾಕ್ ಚಳವಳಿಯ ಬಳಿಕ ಕನ್ನಡದ ಶಕ್ತಿ ಹೆಚ್ಚಾಗಿದ್ದು, ಕನ್ನಡ ಧೈರ್ಯದ ಸಂಕೇತವಾಗಿ ಬೆಳೆದಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಕೆ.ಸಿ.ಬಸವರಾಜ್ ಅಭಿಪ್ರಾಯಪಟ್ಟರು.

ರಾಮಕೃಷ್ಣ ನಗರದಲ್ಲಿರುವ ನೃಪತುಂಗ ಕನ್ನಡ ಶಾಲೆ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋ ತ್ಸವದಲ್ಲಿ ಅವರು ಮಾತನಾಡಿದರು.

80ರ ದಶಕಕ್ಕೂ ಮೊದಲು ಕನ್ನಡದ ಕುರಿತು ಕೀಳರಿಮೆ ಇತ್ತು. ಮಾನಸ ಗಂಗೋತ್ರಿಯಲ್ಲೂ ಅನ್ಯ ಭಾಷೆಗಳನ್ನೇ ಹೆಚ್ಚು ಮಾತನಾಡುತ್ತಿದ್ದರು. ಆದರೆ ಗೋಕಾಕ ಚಳವಳಿ ರಾಜ್ಯದಲ್ಲಿ ದೊಡ್ಡ ಸಂಚಲನ ಉಂಟು ಮಾಡಿತು. ಆದರೆ ಕನ್ನಡಿಗರ ಬದುಕು ಕಟ್ಟುವಲ್ಲಿ ನಮ್ಮ ನಾಯಕರು ವಿಫಲರಾದರು ಎಂದು ಬೇಸರಿಸಿದರು.

ಬದುಕು ಕಟ್ಟಿಕೊಡುವ ಭಾಷೆ ಜನರಿಗೆ ಬೇಕಾಗಿದೆ. ಕನ್ನಡ ಕಲಿತವರಿಗೆ ಉದ್ಯೋಗವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಅನ್ನಕ್ಕಾಗಿ ಯುವ ಸಮೂಹ ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಗೆ ಮಾರುಹೋಗಿದ್ದಾರೆ.

ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಶಿಕ್ಷಣದ ಮಾಧ್ಯಮ ಯಾವುದು ಎಂಬ ಚರ್ಚೆ ನಡೆಯುತ್ತಲೇ ಇದೆ. ಕನ್ನಡವನ್ನು ದುರ್ಬಲಗೊಳಿಸುವ ಕೆಲಸವನ್ನು ನಮ್ಮವರೇ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸುಮಾರು ನಾಲ್ಕುವರೆ ಸಾವಿರ ಟಿಎಂಸಿ ನೀರಿದೆ. ಅದನ್ನು ಸರಿಯಾಗಿ ಬಳಕೆ ಮಾಡಿಕೊಂಡಿದ್ದರೆ ಕರುನಾಡಿನ ರೈತರ ಬದುಕು ಹಸನವಾಗುತಿತ್ತು. ಆಂಧ್ರಪ್ರದೇಶ ಭತ್ತದ ಕಣಜವಾಗಲು ನಮ್ಮ ಕೃಷ್ಣಾ ನದಿ ಕಾರಣ. ಆದರೆ ಕೃಷ್ಣಾ ನದಿಯ ನೂರಾರು ಟಿಎಂಸಿ ನೀರನ್ನು ಉಪಯೋಗ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ ಎಂದರು.

ಕೆಆರ್‌ಎಸ್ ನಿರ್ಮಾಣ ವಾಗುವುದಕ್ಕೂ ಮುನ್ನ ಮಂಡ್ಯದ ಜನ ಊಟಿಗೆ ಗುಳೆ ಹೋಗುತ್ತಿದ್ದರು. ಆದರೆ ಒಂದು ಜಲಾಶಯ ಅವರ ಬದುಕು ಕಟ್ಟಿಕೊಟ್ಟಿತು. ಉತ್ತರ ಕರ್ನಾಟಕದಲ್ಲಿ ಈಗಲೂ ಮುಂಬೈ, ಮಂಗಳೂರಿಗೆ ಗುಳೆ ಹೋಗುತ್ತಿದ್ದಾರೆ. ಅದು ಜೀವನದ ದಯನೀಯ ಸ್ಥಿತಿ. ಅಡುಗೆ ಮನೆ ಬಿಟ್ಟು ತೆರಳುವ ಸ್ಥಿತಿ ಯಾರಿಗೂ ಬರಬಾರದು ಎಂದರು.

ಕನ್ನಡ ವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸ.ರ.ಸುದರ್ಶನ್, ಅಧ್ಯಕ್ಷ ಪ.ಮಲ್ಲೇಶ್, ಸದಸ್ಯ ನಾಗಚಂದ್ರ, ಪತ್ರಕರ್ತ ರಾಜೇಶ್, ಮುಖ್ಯಶಿಕ್ಷಕಿ ಸೀತಾ ಕುಮಾರಿ, ಪ್ರೊ.ಸೋಮಶೇಖರ್ ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.