ADVERTISEMENT

ಕಮರುತ್ತಿರುವ ಮಕ್ಕಳ ಸೃಜನಶೀಲತೆ: ಬೇಸರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 9:40 IST
Last Updated 9 ಜುಲೈ 2013, 9:40 IST

ಮೈಸೂರು: ಪೋಷಕರ ಒತ್ತಡದಿಂದಾಗಿ ಮಕ್ಕಳ ಸೃಜನಶೀಲತೆ ಕಮರುತ್ತಿದೆ ಎಂದು ಶ್ರೀಕೃಷ್ಣ ಸಮಾಜ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಚ್.ವಿ.ಎನ್. ಆಚಾರ್ ಬೇಸರ ವ್ಯಕ್ತಪಡಿಸಿದರು.

ನಗರದ ಶ್ರೀರಾಂಪುರದ ಕ್ಷೇಮಧಾಮ ಸಭಾಭವನದಲ್ಲಿ ಶ್ರೀಕೃಷ್ಣ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಪಠ್ಯ ಪುಸ್ತಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆ ಮಕ್ಕಳ ಸೃಜನಶೀಲತೆಯನ್ನು ಹಾಳು ಮಾಡುತ್ತಿದೆ. ಪೋಷಕರು ಹೇರುವ ಒತ್ತಡದಿಂದ ಮಕ್ಕಳು ಸಂಕುಚಿತ ರಾಗುತ್ತಿದ್ದಾರೆ. ವಿಶಾಲ ದೃಷ್ಟಿಯಿಂದ ಸಮಾಜವನ್ನು ನೋಡುವ ರೀತಿ ಕಣ್ಮರೆಯಾಗುತ್ತಿದೆ. ಮಕ್ಕಳಿಗೆ ಆಸ್ತಿ ಮಾಡುವುದನ್ನು ಬಿಟ್ಟು, ಮಕ್ಕಳೇ ಅಸ್ತಿ ಎಂದು ಭಾವಿಸಿ ಸ್ವತಂತ್ರವಾಗಿ ಬೆಳೆಯಲು ಬಿಡಬೇಕು ಎಂದರು.

ಶಿಕ್ಷಣ ಈಗ ಯಾರ ಸ್ವತ್ತಲ್ಲ. ಶ್ರದ್ಧೆ ಇರುವವರಿಗೆ ಜ್ಞಾನ ಒಲಿಯುತ್ತದೆ. ಸಿನಿಮಾ ನಟರು, ಕ್ರಿಕೆಟ್ ಆಟಗಾರರನ್ನು ಆದರ್ಶ ವ್ಯಕ್ತಿಗಳನ್ನಾಗಿ ಸ್ವೀಕರಿಸ ಬಾರದು. ಸ್ವಾಮಿ ವಿವೇಕಾನಂದ, ಸರ್ ಎಂ. ವಿಶ್ವೇಶ್ವರಯ್ಯ ಅವರ ದಾರಿಯಲ್ಲಿ ನಡೆಯಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ವಿವಿಧ ಶಾಲೆ, ಕಾಲೇಜುಗಳಿಂದ ಆಗಮಿಸಿದ್ದ 75 ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು. ಪ್ರತಿಭಾವಂತರಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಶ್ರೀಕೃಷ್ಣ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಶಿವರಾಮು, ಮೈಸೂರು ಗುಜರಾತಿ ಸಮಾಜದ ಟ್ರಸ್ಟಿ ವಿಜಯ್‌ಕುಮಾರ್ ಮೆಹ್ತಾ, ಜಂಟಿ ನಿರ್ದೇಶಕ ಅಮಿತೇಶ್, ಅಧ್ಯಕ್ಷ ಉಮೇಶ್ ಪಟೇಲ್, ಟ್ರಸ್ಟಿ ಹೃತ್ವಿಕ್‌ಲಾಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.