ADVERTISEMENT

ಕಾರಂತ ಮೇಷ್ಟ್ರಿಗೆ ಬಾದರದಿನ್ನಿ ನಮನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 6:30 IST
Last Updated 15 ಅಕ್ಟೋಬರ್ 2012, 6:30 IST

ಮೈಸೂರು: `ಮೇಷ್ಟ್ರೇ.. ನಾವು ನಿಮ್ಮಂದಿಗೆ ಇದ್ದೇವೆ. ನೀವು ಹೇಳಿದ್ದನ್ನು ಚಾಚೂತಪ್ಪದೆ ಪಾಲಿಸುತ್ತಿದ್ದೇವೆ..ಮೇಷ್ಟ್ರೇ ನಿಮಗೆ ನಮನ..ಹೀಗೆಂದು ಹೇಳುತ್ತಿದ್ದಂತೆಯೇ ರಂಗಭೂಮಿ ಕಲಾವಿದ ಅಶೋಕ ಬಾದರದಿನ್ನಿ ಗದ್ಗದಿತರಾದರು. ಕ್ಷಣ ಹೊತ್ತು ಆಕಾಶದತ್ತ ಮುಖ ಮಾಡಿದರು.

ರಂಗಾಯಣದ ಭೂಮಿಗೀತದಲ್ಲಿ ಶನಿವಾರ ನಡೆದ `ಕಾಲೇಜು ಯುವ ರಂಗೋತ್ಸವ~ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಾದರದಿನ್ನಿ ಕ್ಷಣ ಕ್ಷಣಕ್ಕೂ ಕಾರಂತರನ್ನು ನೆನಪಿಸಿಕೊಂಡರು. 5.30 ಗಂಟೆಗೆ ಆರಂಭವಾಗಬೇಕಾದ ಕಾರ್ಯಕ್ರಮ 6.05ಕ್ಕೆ ಆರಂಭವಾ ದದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

`ಬಿ.ವಿ.ಕಾರಂತರ ಬದುಕೇ ರಂಗಭೂಮಿಯಂತಿತ್ತು. ಕಾರಂತರು ಎಂದರೆ ನಾಟಕ; ನಾಟಕ ಎಂದರೆ ಕಾರಂತರು. ಆ ಬಳಿಕ ನಾವು-ನೀವು. ನಾಟಕದ ವೇದಿಕೆಗೆ ಮಾತ್ರ ನಾವು ರಂಗಭೂಮಿ ಎಂದು ಹೇಳುತ್ತೇವೆ.

ಆದರೆ, ನೃತ್ಯ, ನಾಟ್ಯಗಳಿಗೆ ನೃತ್ಯಭೂಮಿ, ನಾಟ್ಯಭೂಮಿ ಎಂದು ಹೇಳುವುದಿಲ್ಲ. ಅಷ್ಟರ ಮಟ್ಟಿಗೆ ರಂಗಭೂಮಿ ಮಹತ್ವ ಪಡೆದಿದೆ. ಭೂಮಿ ಎಂದರೆ ತಾಯಿ, ತಾಳ್ಮೆ, ಶಿಸ್ತು, ಸಂಯಮ ಎಂದರ್ಥ. ಕಾರಂತರು ಇವೆಲ್ಲವುಗಳ ಪ್ರತೀಕದಂತಿದ್ದರು. ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸುವುದೇ ನಿಜವಾದ ಧರ್ಮ ಎಂಬಂತೆ ಅವರು ಬದುಕು ಸಾಗಿಸಿದ್ದರು~ ಎಂದು ಕಾರಂತರನ್ನು ಸ್ಮರಿಸಿಕೊಂಡರು.

`ರಂಗಭೂಮಿಯಲ್ಲಿ ಎತ್ತರಕ್ಕೆ ಏರಬೇಕಾದರೆ ಸಮಯ ಪಾಲನೆ, ಶಿಸ್ತು, ಬದ್ಧತೆ, ಸ್ವಾಭಿಮಾನ, ಪ್ರಾಮಾಣಿಕತೆ ಬಹಳ ಮುಖ್ಯ. ಈ ಗುಣಗಳು ಇದ್ದರೆ ಯಾರು ಬೇಕಾದರೂ ರಂಗಭೂಮಿ ಕಲಾವಿದರಾಗಬಹುದು. 1981 ರಿಂದಲೂ ಕಾರಂತರೊಡನೆ ಒಡನಾಟ ಹೊಂದಿದ್ದ ತಾವು, ಅವರಿಂದ ಕಲಿತದ್ದು ಬಹಳಷ್ಟಿದೆ~ ಎಂದರು.

ಕಿರುತೆರೆ ಕಲಾವಿದ ಕೆ.ವಿ.ನಾಗರಾಜಮೂರ್ತಿ ಮಾತನಾಡಿ, `ಕಾಲೇಜು ರಂಗಭೂಮಿ ಬೆಳೆದರೆ ಹವ್ಯಾಸಿ ರಂಗಭೂಮಿಯೂ ಬೆಳೆಯುತ್ತದೆ. ಕಾಲೇಜು ರಂಗಭೂಮಿಯಿಂದ ಸೃಜನಶೀಲತೆ, ಚಿಂತನಶೀಲತೆ ಕಲಿಯಬಹುದು.

ಲಂಕೇಶ್, ನ.ರತ್ನ, ಸಿಂಧುವಳ್ಳಿ ಕೃಷ್ಣಶರ್ಮ ಅವರಂತಹ ಮೇಷ್ಟ್ರುಗಳಿಂದ ಕಾಲೇಜು ರಂಗಭೂಮಿ ಹೆಸರುವಾಸಿ ಆಗಿದೆ. ಕಾಲೇಜು ರಂಗಭೂಮಿಯಿಂದ ಬಂದ ಅನೇಕ ಕಲಾವಿದರು ಇಂದು ದೂರದರ್ಶನ, ಮಾಧ್ಯಮ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ರಂಗಭೂಮಿಗೆ ಕಳುಹಿಸಿಕೊಡಬೇಕು~ ಎಂದು ಮನವಿ ಮಾಡಿದರು.

ರಂಗಾಯಣ ನಿರ್ದೇಶಕ ಡಾ.ಬಿ.ವಿ. ರಾಜಾರಾಂ, ಉಪನಿರ್ದೇಶಕಿ ನಿರ್ಮಲಾ ಮಠಪತಿ, ಕಾಲೇಜು ಯುವ ರಂಗೋತ್ಸವದ ಸಂಚಾಲಕಿ ಗೀತಾ ಮೋಂತಡ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.