ADVERTISEMENT

ಕಾರ್ಖಾನೆ ಸ್ಥಾಪನೆ, ನೀರಾವರಿಗೆ ಒತ್ತು

ಸಚಿವ, ಕೆ.ಆರ್‌.ನಗರ ಶಾಸಕ ಸಾ.ರಾ.ಮಹೇಶ್‌ ಭರವಸೆ

ಕೆ.ಓಂಕಾರ ಮೂರ್ತಿ
Published 11 ಜೂನ್ 2018, 5:10 IST
Last Updated 11 ಜೂನ್ 2018, 5:10 IST

ಮೈಸೂರು: ‘ಸರ್ಕಾರಿ ಅಧಿಕಾರಿಗಳಿಗೆ ಜಾತಿ ಪ್ರೇಮ ಹೆಚ್ಚು. ಪ್ರಾಮಾಣಿಕತೆ ಕಡಿಮೆ. ಅದಕ್ಕೆ ರಾಜಕಾರಣಿಗಳೂ ಕಾರಣ ಇರಬಹುದು. ಆದರೆ, ವರ್ಗಾವಣೆಯಲ್ಲಿ ನಾನು ಇದುವರೆಗೆ 10 ರೂಪಾಯಿ ಕೂಡ ಪಡೆದಿಲ್ಲ. ಮುಂದೆಯೂ ಪಡೆಯುವುದಿಲ್ಲ. ಅಧಿಕಾರಿಗಳು ಕೂಡ ಲಂಚಕೋರರಾಗದೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’‌ ‌ ‘ಪ್ರಜಾವಾಣಿ’ ಸಂದರ್ಶನದಲ್ಲಿ ಪ್ರವಾಸೋದ್ಯಮ ಸಚಿವ, ಕೆ.ಆರ್‌.ನಗರ ಶಾಸಕ ಸಾ.ರಾ.ಮಹೇಶ್‌ ಅವರು ಅಧಿಕಾರಿಗಳಿಗೆ ನೀಡಿದ ಎಚ್ಚರಿಕೆ ಮಾತಿದು.

ಕಾಂಗ್ರೆಸ್‌ನ ಡಿ.ರವಿಶಂಕರ್‌ ವಿರುದ್ಧ ಗೆಲ್ಲುವ ಮೂಲಕ ಅವರು ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಚುನಾವಣೆ ವೇಳೆ ಉದ್ಭವಿಸಿದ ವಿವಾದಗಳನ್ನು ಮೆಟ್ಟಿ ನಿಂತು ಈಗ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಕಾಡುತ್ತಿರುವ ಸಮಸ್ಯೆಗಳು, ಜನರಿಗೆ ಲಭ್ಯವಾಗುವ ಬಗೆ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕ್ಷೇತ್ರದಲ್ಲಿ ಕಾಡುತ್ತಿರುವ ಪ್ರಮುಖ ಸಮಸ್ಯೆಗಳು ಏನು?

ADVERTISEMENT

ಶ್ರೀರಾಮ ಸಕ್ಕರೆ ಕಾರ್ಖಾನೆ ಪುನರ್‌ ಆರಂಭಿಸಬೇಕಿದೆ. ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಖಾನೆ ಸ್ಥಾಪಿಸಬೇಕು. ಬಹುದಿನಗಳ ಬೇಡಿಕೆ ಆಗಿರುವ ಸಾಲಿಗ್ರಾಮವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು. ನೀರಾವರಿ ಒದಗಿಸಬೇಕು. 50 ಸಾವಿರ ಹೆಕ್ಟೇರ್‌ಗಳಿಗೆ ಮಾತ್ರ ನೀರಾವರಿ ಇದೆ. ಇನ್ನು 50 ಸಾವಿರ ಹೆಕ್ಟೇರ್‌ಗಳಿಗೆ ನೀರಾವರಿ ಇಲ್ಲ. ಹಾರಂಗಿ, ಹೇಮಾವತಿ, ಕಟ್ಟೆಪುರದಿಂದ ಬರುವ ನೀರು ನಂಬಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಅಂಥ ರೈತರ ಜಮೀನುಗಳಿಗೆ ಕಾವೇರಿಯಿಂದ ನೀರಾವರಿ ಒದಗಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ನಿರ್ಮಿಸಬೇಕು.

ಮಂತ್ರಿ ಸ್ಥಾನ ಲಭಿಸಿದ್ದರ ಬಗ್ಗೆ ನಿಮ್ಮ ಅನಿಸಿಕೆ?

ಜನರ ಸೇವೆ ಸಲ್ಲಿಸಲು ಪಕ್ಷ ಒಂದು ಅವಕಾಶ ಮಾಡಿಕೊಟ್ಟಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿ ಕ್ಷೇತ್ರದ ಜನ ಹಾಗೂ ಪಕ್ಷದ ಋಣ ತೀರಿಸುತ್ತೇನೆ.

ಶಾಸಕರಾಗಿ ಪುನರ್‌ ಆಯ್ಕೆ ಆಗಲು ಕಾರಣಗಳು ಏನಿರಬಹುದು?

ಕ್ಷೇತ್ರದ ಜನರ ಜೊತೆ, ಕಾರ್ಯ ಕರ್ತರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇನೆ. ಮೂರನೇ ಸಲ ಜೆಡಿಎಸ್‌ನಿಂದ ಮೈಸೂರಿನಲ್ಲಿ ಯಾರೂ ಗೆದ್ದಿಲ್ಲ. ಆದರೆ, ನನಗೆ ಹ್ಯಾಟ್ರಿಕ್‌ ಗೆಲುವಿನ ಸೌಭಾಗ್ಯ ಲಭಿಸಿದೆ. ಒಂದು ವರ್ಗದ ಹೆಚ್ಚಿನವರು ನನಗೆ ಮತ ಹಾಕಲಿಲ್ಲ ಎಂಬುದು ನಿಜ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ಕಾರಣವೂ ಇರ ಬಹುದು. ಜೆಡಿಎಸ್‌ನವರು ಬಿಜೆಪಿ ಜೊತೆ ಹೋಗಬಹುದು ಎಂಬ ಊಹಾ ಪೋಹದಿಂದ ಅಲ್ಪಸಂಖ್ಯಾತರು ಮತ ಹಾಕಿಲ್ಲ. ಹೀಗಾಗಿ, ಈ ಬಾರಿ ಪೈಪೋಟಿ ಏರ್ಪಟ್ಟಿತು. ಆ ವರ್ಗದವರು ಅಭಿವೃದ್ಧಿ ಕೆಲಸ ನೋಡಲ್ಲ. ಆದರೆ, ಅಭಿವೃದ್ಧಿ ಬಯಸುವವರು ನನಗೆ ಮತ ನೀಡಿದ್ದಾರೆ.

ಪ್ರಚಾರದ ವೇಳೆ ನೀವು ಕ್ಷೇತ್ರದ ಜನರಿಗೆ ನೀಡಿದ್ದ ಭರವಸೆಗಳೇನು?

ಹೆಚ್ಚು ಭಾಷಣ ಮಾಡಿಲ್ಲ, ದೊಡ್ಡ ದೊಡ್ಡ ಆಶ್ವಾಸನೆಗಳನ್ನು ನೀಡಿಲ್ಲ. ಬದ ಲಾಗಿ ಶಾಸಕನಾಗಿ ಇಷ್ಟು ದಿನ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕುಮಾರಣ್ಣ ಮುಖ್ಯ ಮಂತ್ರಿ ಆದರೆ ನನಗೆ ಮಂತ್ರಿ ಸ್ಥಾನ ಸಿಗುತ್ತದೆ. ಆಗ ಇನ್ನೂ ಉತ್ತಮ ಕೆಲಸ ಮಾಡಬಹುದು ಎಂಬ ಭರವಸೆ ನೀಡಿದ್ದೆ ಅಷ್ಟೆ.

ಜನರು ನಿಮ್ಮನ್ನು ಸಂಪರ್ಕಿಸಬೇಕೆಂದರೆ...?‌

ಎಷ್ಟೇ ಒತ್ತಡ ಇದ್ದರೂ ಪ್ರತಿ ಶುಕ್ರವಾರ ಬೆಳಿಗ್ಗೆಯಿಂದ ಸಂಜೆ ವರೆಗೆ ಕೆ.ಆರ್‌.ನಗರ ಕ್ಷೇತ್ರದಲ್ಲೇ ಇರುತ್ತೇನೆ. ಆಗ ನನ್ನನ್ನು ಭೇಟಿಯಾಗಬಹುದು. ಕ್ಯಾಬಿನೆಟ್‌, ತುರ್ತು ಪರಿಸ್ಥಿತಿ ಇದ್ದಾಗ ಮಾತ್ರ ಅದು ಸಾಧ್ಯವಾಗುವುದಿಲ್ಲ. ಅಲ್ಲದೆ, ಪ್ರತಿ ತಿಂಗಳ ಮೊದಲ ಶನಿವಾರ ಒಂದು ಪಂಚಾಯಿತಿಗೆ ತಾಲ್ಲೂಕಿನ ಅಧಿ ಕಾರಿಗಳನ್ನು ಕರೆಸಿಕೊಂಡು ಅಲ್ಲೇ ಜನರ ಸಮಸ್ಯೆ ಆಲಿಸುತ್ತೇನೆ. ಇಡೀ ದಿನ ಅಲ್ಲೇ ಇದ್ದು ಊಟ ಮಾಡಿ ಬರುತ್ತೇನೆ. 10 ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬಂದಿದ್ದೇನೆ.

ಸಾ.ರಾ.ಮಹೇಶ್‌ ಕುರಿತು…

ಮೈಸೂರು: ಹ್ಯಾಟ್ರಿಕ್‌ ಜಯಭೇರಿ ಮೊಳಗಿಸಿರುವ ಸಾಲಿಗ್ರಾಮದ ಸಾ.ರಾ.ಮಹೇಶ್‌ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದವರು. ಶಾರದಾ ವಿಲಾಸ ಕಾಲೇಜಿನಲ್ಲಿ ಬಿ.ಎಸ್ಸಿ ಓದುವಾಗ ವಿದ್ಯಾರ್ಥಿ ಸಂಘಕ್ಕೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಕಾಲೇಜು ಬಂದ್ ಮಾಡಿಸಿ ಹೋರಾಟಕ್ಕೆ ಇಳಿದಿದ್ದರು.

ಮಾನ್ಯತೆ ಲಭಿಸಿದ ಮೇಲೆ ಸತತ ಮೂರು ವರ್ಷ ಸಂಘದ ಅಧ್ಯಕ್ಷರಾಗಿದ್ದರು. 42 ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡ ವಿದ್ಯಾರ್ಥಿ ಕ್ರಿಯಾ ಸಮಿತಿ ಸ್ಥಾಪಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

1991ರಲ್ಲಿ ಬಿಜೆಪಿ ಸೇರಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು, 2004ರಲ್ಲಿ ಕೆ.ಆರ್.ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದರು. ಎಸ್‌.ಎ.ರಾಮದಾಸ್‌ ಜತೆಗಿನ ಮನಸ್ತಾಪದಿಂದಾಗಿ ಬಿಜೆಪಿ ತ್ಯಜಿಸಿದರು. ಜೆಡಿಎಸ್‌ ಸೇರಿ 2008, 2013, 2018ರಲ್ಲಿ ಗೆಲುವು ಸಾಧಿಸಿದ್ದಾರೆ. ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಮೊದಲ ಬಾರಿ ಮಂತ್ರಿ ಆಗಿದ್ದಾರೆ. ಪ್ರವಾಸೋದ್ಯಮ, ರೇಷ್ಮೆ ಖಾತೆ ಲಭಿಸಿದೆ.

ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭವಾಗುವುದೇ?

ಮೈಸೂರು: ಸಚಿವರಾಗಿ ನೇಮಕವಾಗುತ್ತಿರುವಂತೆ ಸಾ.ರಾ.ಮಹೇಶ್‌ ಮುಂದೆ ದೊಡ್ಡ ಸವಾಲು ಎದುರಿದೆ. ರೈತರ ಜೀವನಾಡಿ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಿಸುವುದೇ ಆ ಸವಾಲು.

ಐದು ವರ್ಷಗಳ ಹಿಂದೆ ಸ್ಥಗಿತಗೊಂಡ ಈ ಕಾರ್ಖಾನೆ ಪ್ರಾರಂಭವಾದರೆ ಕೆ.ಆರ್‌.ಪೇಟೆ, ಕೆ.ಆರ್‌.ನಗರ, ಹುಣಸೂರು, ಎಚ್‌.ಡಿ.ಕೋಟೆ, ಪಿರಿಯಾಪಟ್ಟಣ ತಾಲ್ಲೂಕುಗಳ 30 ಲಕ್ಷಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಜೀವನ ನಿರ್ವಹಣೆಗೆ ದಾರಿ ಆಗಲಿದೆ.

ಯುವಕರು ಉದ್ಯೋಗಕ್ಕಾಗಿ ನಗರ ಮತ್ತು ಪಟ್ಟಣಗಳನ್ನೇ ಅವಲಂಬಿಸಿದ್ದಾರೆ. ವಲಸೆ ಹೋಗುವುದನ್ನು ತಪ್ಪಿಸಲು ಸ್ಥಳೀಯವಾಗಿ ಕಾರ್ಖಾನೆ ಆರಂಭಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.