ADVERTISEMENT

`ಕಾವ್ಯದಲ್ಲಿ ಹೊಸ ಅಭಿವ್ಯಕ್ತಿ ಬೆಳೆಯಲಿ'

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 10:02 IST
Last Updated 12 ಡಿಸೆಂಬರ್ 2012, 10:02 IST

ಮೈಸೂರು: ಕಾವ್ಯದಲ್ಲಿ ಆಧುನಿಕ ಯುಗದ ತಂತ್ರಜ್ಞಾನದ ಪರಿಭಾಷೆಯ ಹೊಸ ಶಬ್ದಗಳು ಸೇರ್ಪಡೆಯಾಗಿ, ಹೊಸ ಅಭಿವ್ಯಕ್ತಿ ಬೆಳೆಯಬೇಕು ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಹಾರೋಹಳ್ಳಿ ರವೀಂದ್ರ ರಚಿಸಿದ `ಮನದ ಚೆಲುವು ಮುದುಡಿದಾಗ' ಕವನ ಸಂಕಲನ ಬಿಡುಗಡೆ ಮಾಡಿದ ಮಾತನಾಡಿದರು.

`ಇವತ್ತಿನ ಆಧುನಿಕ ಯುಗದ ಕಾವ್ಯಗಳು ಗುಣಮಟ್ಟ ಕಳೆದುಕೊಂಡು ತೀರಾ ಹಗುರವಾಗಿವೆ. ಒಂದು ಸಮಯದಲ್ಲಿ ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಅಂತಹ ಚಿತ್ರಗೀತೆ ಕೇಳಿದ ಎಂತಹ ನರಹೀನನ ಮೈಮನದಲ್ಲಿ ಉತ್ಸಾಹ ಚಿಮ್ಮಿ ಏನಾದರೂ ಸಾಧಿಸಬೇಕು ಎಂದು ಹೊರಡುತ್ತಿದ್ದರು. ಆದರೆ ಇವತ್ತು ನಕಾರಾತ್ಮಕ ಶೈಲಿಯ ಲೈಫು ಇಷ್ಟೇನಾ, ಅಪ್ಪ ಲೂಸಾ, ಅಮ್ಮ ಲೂಸಾ, ಫೇಲಾಗುವ ಕುರಿತ ಗೀತೆಗಳು ಸಾಲು ಸಾಲಾಗಿ ಬರುತ್ತಿವೆ. ಇವು ನಮ್ಮ ಯುವಪೀಳಿಯನ್ನು ಹೇಗೆ ಮಾರ್ಗದರ್ಶಿಸಬಹುದು' ಎಂದು ವಿಷಾದಿಸಿದರು.

`ಪ್ರೀತಿಗೆ ಕಾವ್ಯವೇ ಮದ್ದು. ಕಾವ್ಯ ಮತ್ತು ಪ್ರೀತಿ ಎರಡೂ ಇದ್ದರೆ ಬದುಕು ಸಹನೀಯ. ಕೇವಲ ಹೆಣ್ಣಿನ ದಾಸನಾದರೆ ಕಾವ್ಯಪ್ರೇಮ ಒಲಿಯುವುದಿಲ್ಲ. ಕಾವ್ಯದಾಸನಾಗುವ ಜೊತೆಗೆ ಪ್ರೇಮ ದಾಸರಾದಾಗ ಎರಡೂ ಒಲಿಯುತ್ತದೆ' ಎಂದು ಹೇಳಿದರು.

`ಕಾವ್ಯದಲ್ಲಿ ಭಾವ, ಅನುಭವ, ಬುದ್ಧಿ ಸಂಯೋಜಿತವಾದಾಗ ಮಾತ್ರ ಅದು ಸಾರ್ವಕಾಲಿಕ ವಾಗುತ್ತದೆ. ಇಂದು ಹಲವಾರು ಬದಲಾವಣೆ ಗಳಾಗಿವೆ. ಆಧುನಿಕ ತಂತ್ರಜ್ಞಾನದ ಹಲವು ಶಬ್ದಗಳು ರೂಢಿಯಾಗಿವೆ. ಅಂತಹ ಶಬ್ದಗಳು ಕಾವ್ಯದಲ್ಲಿಯೂ ಸೇರ್ಪಡೆಯಾಗಬೇಕು. ಹಳೆಯ ದಾರಿಗಳು ಬಲಿಷ್ಠ ಮತ್ತು ಸುರಕ್ಷಿತ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೊಂದಿಗೆ ಆಧುನಿಕತೆ ಪರಿಭಾಷೆಯೂ ಬೆರೆತಾಗ ಕವಿ ವರ್ತಮಾನದ ಲೇಖಕನಾಗುತ್ತಾನೆ' ಎಂದು ಸಲಹೆ ನೀಡಿದರು.

`ಇಂದು ವಿದ್ಯುನ್ಮಾನಗಳ ಪ್ರಭಾವ ಹೆಚ್ಚಾಗಿದೆ. ಬದುಕು ಮತ್ತು ಆಲೋಚನೆಯಲ್ಲಿಯೂ ಬದಲಾವ ಣೆಯಾಗಿದೆ. ಅದಕ್ಕೆ ತಕ್ಕಂತೆ ಕಾವ್ಯ ಹೊರಹೊಮ್ಮ ಬೇಕು. ಕವಿ ಕಣ್ಣು ಕಟ್ಟಿದ ಕುದುರೆಯಾಗದೇ ಸುತ್ತಲಿನ ಪರಿಸರದ ಪ್ರಭಾವ ಅನುಭವಿಸಬೇಕು' ಎಂದರು.

ಅಧ್ಯಕ್ಷತೆಯನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ನೀಲಗಿರಿ ಎಂ. ತಳವಾರ್ ವಹಿಸಿದ್ದರು. ಪ್ರಸಾರಾಂಗದ ನಿರ್ದೇಶಕ ಡಾ. ಸಿ. ನಾಗಣ್ಣ, ಭೈರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.