ADVERTISEMENT

ಕೆಂಡಗಣ್ಣೇಶ್ವರ ಜಾತ್ರೆಗೆ ಹರಿದುಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 7:45 IST
Last Updated 5 ಮಾರ್ಚ್ 2012, 7:45 IST

ಹುಣಸೂರು: ಗದ್ದಿಗೆ ಕೆಂಡಗಣ್ಣೇಶ್ವರಸ್ವಾಮಿ ಮತ್ತು ಮಲೈ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಭಾನುವಾರ ಅದ್ದೂರಿಯಾಗಿ ನೆರವೇರಿತು. ಸಾವಿರಾರು ಭಕ್ತರು ರಥೋತ್ಸವ ಹಾಗೂ ಕೊಂಡೋತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಆದಿಜುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮತ್ತು ಮಾದಳ್ಳಿಮಠದ ಸಾಂಬಸದಾಶಿವ ಸ್ವಾಮೀಜಿ ಬೆಳಿಗ್ಗೆ 11.30 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಿದರು. ಕೆಂಡಗಣ್ಣ ಮತ್ತು ಮಲೈ ಮಹದೇಶ್ವರ ಉತ್ಸವ ಮೂರ್ತಿ ಹೊತ್ತ ರಥವನ್ನು ಭಕ್ತಾಧಿಗಳು ಗ್ರಾಮದ ಮುಖ್ಯ ರಸ್ತೆಯಲ್ಲಿ ಎಳೆದು ಸಂಭ್ರಮಿಸಿದರು. ಇದಕ್ಕೂ ಮುನ್ನ ದೇವಸ್ಥಾನದ ಆವರಣದಲ್ಲಿ ಕೊಂಡೋತ್ಸವದಲ್ಲಿ ಭಾಗವಹಿಸಿದ ಭಕ್ತರು ಹರಕೆ ಒಪ್ಪಿಸಿದರು. ಅಂದಾಜು 50 ಟನ್ ಸೌದೆ ಉರಿಸಿ ಮಾಡಿದ್ದ ಕೆಂಡದ ಮೇಲೆ ಸಾವಿರಕ್ಕೂ ಹೆಚ್ಚು ಭಕ್ತರು ಕೆಂಡ ಹಾಯ್ದರು.

ಕೊಂಡೋತ್ಸವ ಕಾರ್ಯಕ್ರಮಕ್ಕೆ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಸೌದೆ ಅರ್ಪಿಸಿದ್ದರು. ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ 20 ಟನ್ ಸೌದೆ ನೀಡಿದ್ದು, ಉಳಿದ ಸೌದೆಯನ್ನು ಭಕ್ತರು ಎತ್ತಿನ ಗಾಡಿಯಲ್ಲಿ ತಂದು ಅರ್ಪಿಸಿದರು.

ಜನರ ಜಾತ್ರೆ: ಪ್ರತಿ ವರ್ಷ ದೇವಸ್ಥಾನದ ಆಡಳಿತ ಮಂಡಳಿ ನೇತೃತ್ವದಲ್ಲಿ ಉತ್ಸವ ನಡೆಸಲಾಗುತ್ತಿತ್ತು. ಈ ಬಾರಿ ಆಡಳಿತ ಮಂಡಳಿಯ ವ್ಯಾಜ್ಯ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಜಾತ್ರೆಯನ್ನು ಸುತ್ತಲಿನ  ನಾಲ್ಕು ಗ್ರಾಮದ ಮುಖಂಡರಾದ ನಾಡತಿಮ್ಮೇಗೌಡ, ಶಿವಲಿಂಗೇಗೌಡ, ಚಂದ್ರಶೇಖರ್,  ಪುಣ್ಯಶೀಲ, ಕೆಂಪೇಗೌಡ, ಪ್ರಕಾಶ್, ಎ.ಮಾಯಿಗೌಡ, ಸೂರ್ಯಕುಮಾರ್. ಡಿ.ಕೆ.ಕುನ್ನೇಗೌಡ ಸೇರಿದಂತೆ ಹಲವರು ಮುಂದಾಳತ್ವ ವಹಿಸಿ ನೆರವೇರಿಸಿದರು.

ಅಚ್ಚರಿ ಎಂದರೆ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯಲ್ಲಿ ಗಿಡ ಮೂಲಿಕೆಗಳ ಪ್ರದರ್ಶನ, ಮಕ್ಕಳಿಗೆ ಆಟಿಕೆ, ಹೆಣ್ಣು ಮಕ್ಕಳಿಗೆ ಒಡವೆ ಮತ್ತಿತರು ಮಳಿಗೆಗಳು ಭಕ್ತರನ್ನು ಆಕರ್ಷಿಸಿದವು. ದಾಹ ತಣಿಸಲು ತಂಪು ಪಾನೀಯ ಮತ್ತು ಐಸ್‌ಕ್ರೀಂ ಅಂಗಡಿಗಳು ಸಾಲುಗಟ್ಟಿದ್ದವು. ಮಧ್ಯಾಹ್ನದ ಊಟಕ್ಕೆ ಸಾಲಿಗಟ್ಟಿ ನಿಂತ ಭಕ್ತರು, ಕುಟುಂಬ ಸಮೇತರಾಗಿ ಪ್ರಸಾದ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.