ADVERTISEMENT

ಕೆಆರ್‌ಎಸ್ ಬೃಂದಾವನದಲ್ಲಿ ಪ್ಲಾಸ್ಟಿಕ್ ವೈಭವ!

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 9:45 IST
Last Updated 7 ಸೆಪ್ಟೆಂಬರ್ 2011, 9:45 IST

ಮೈಸೂರು: ಕಾವೇರಿಯ ಸೊಬಗು ಸವಿಯಲು ವಿಶ್ವಪ್ರಸಿದ್ಧ ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಬರುತ್ತಿರುವ ಪ್ರವಾಸಿಗರನ್ನು ಅವ್ಯವಸ್ಥೆ ಆಗರವೇ ಸ್ವಾಗತಿಸುತ್ತಿದೆ!

ಸೌಂದರ‌್ಯವೇ ಮೈವೆತ್ತಂತಿರುವ ಬೃಂದಾವನ ಉದ್ಯಾನ ಮತ್ತು ಆರ್ಭಟಿಸುತ್ತ ಸುರಿಯುವ ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಬರುವ ಜನರು ಇಲ್ಲಿ ಹರಡಿರುವ ಪ್ಲಾಸ್ಟಿಕ್ ತ್ಯಾಜ್ಯದ ನರಕವನ್ನೂ ನೋಡಲೇಬೇಕಾದಂತಹ ಅನಿವಾರ‌್ಯ ಪರಿಸ್ಥಿತಿ ಇದೆ. ಇದರೊಂದಿಗೆ ಅಲಲ್ಲಿ ಬಿದ್ದಿರುವ ತಗ್ಗು, ಗುಂಡಿಗಳಲ್ಲಿ ನಿಂತಿರುವ ನೀರಿನ ಕೊಳಕನ್ನೂ ಸಹಿಸಬೇಕು.

ಮಂಡ್ಯ ಜಿಲ್ಲೆಯಲ್ಲಿರುವ ಕೆಎಆರ್‌ಎಸ್ ಮೈಸೂರಿಗೆ ವಿಶ್ವಪ್ರಸಿದ್ಧಿ ತಂದುಕೊಟ್ಟಿರುವ ಮಹತ್ವದ ತಾಣ. ಕೊಡಗು ಮತ್ತು ಹಾಸನದ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಸಗಳಲ್ಲಿ ಮೈದುಂಬಿಕೊಳ್ಳುವ ಜಲಾಶಯದ ಸೌಂದರ್ಯ ಸವಿಯಲು ದೂರದ ಊರುಗಳಿಂದ ಜನರು ತಂಡೋಪತಂಡವಾಗಿ ಆಗಮಿಸುತ್ತಾರೆ.
ಅದರಲ್ಲೂ ವಾರಾಂತ್ಯದ ರಜೆಗಳಲ್ಲಿ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.

ಬೃಂದಾವನ ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ಪ್ಲಾಸ್ಟಿಕ್ ಮುಕ್ತ ವಾತಾವರಣ ಕಾಪಾಡುವಂತೆ ಸಂದೇಶ ನೀಡುವ ಹಲವು ಫಲಕಗಳಿವೆ. ಜಿಲ್ಲಾಡಳಿತವೂ ಸಾಕಷ್ಟು ಕ್ರಮ ಕೈಗೊಂಡಿದೆ. ಉದ್ಯಾನದಲ್ಲಿರುವ ಸಂಗೀತ ಕಾರಂಜಿಯನ್ನು ನೋಡಲು ಸೇತುವೆಯ ಇನ್ನೊಂದು ಭಾಗಕ್ಕೆ ಬರುವ ಪ್ರವಾಸಿಗರು ಆಘಾತಕಾರಿ ದೃಶ್ಯ ನೋಡುವುದು ಖಚಿತ. ನೂರಾರು ಪ್ಲಾಸ್ಟಿಕ್ ಬಾಟಲಿಗಳು ನೀರಿನಲ್ಲಿ ತೇಲುವ ಮತ್ತು ಪಾಚಿ ಗಟ್ಟಿರುವ ನಿಂತ ನೀರು ಬೇಸರವುಂಟು ಮಾಡುತ್ತವೆ.

`153 ಗೇಟುಗಳ ಪೈಕಿ 11 ಗೇಟುಗಳನ್ನು ತೆರೆಯಲಾಗಿದೆ. ಒಳಹರಿವು ಹೆಚ್ಚಾದಂತೆ ಗೇಟುಗಳನ್ನು ತೆಗೆಯಲಾಗುತ್ತದೆ. ದಸರಾ ಉತ್ಸವ ಹತ್ತಿರವಾಗುತ್ತಿದ್ದು, ಉದ್ಯಾನವನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭವಾಗಿದೆ. ಅಯಕಟ್ಟಿನ ಜಾಗೆಗಳಲ್ಲಿ ಕಸದ ಡಬ್ಬಿಗಳನ್ನು ಇಡಲಾಗಿದೆ. ಸೂಚನಾ ಫಲಕಗಳನ್ನು ಹಾಕಲಾಗುತ್ತಿದೆ~ ಎಂದು ಮುಖ್ಯ ಎಂಜಿನಿಯರ್ ವಿಜಯಕುಮಾರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.