ADVERTISEMENT

ಕೆಲಸ ಗಿಟ್ಟಿಸಿಕೊಂಡ 1,110 ಮಂದಿ

ಮೈಸೂರು ವಿಭಾಗಮಟ್ಟದ ಉದ್ಯೋಗ ಮೇಳ: 126 ಕಂಪನಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 7:39 IST
Last Updated 5 ಮಾರ್ಚ್ 2018, 7:39 IST

ಮೈಸೂರು: ಕಾರ್ಮಿಕ ಇಲಾಖೆ ಮತ್ತು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ನಗರದಲ್ಲಿ ಆಯೋಜಿಸಿರುವ ಮೈಸೂರು ವಿಭಾಗಮಟ್ಟದ ಉದ್ಯೋಗ ಮೇಳದಲ್ಲಿ ಭಾನುವಾರ 1,110 ಮಂದಿ ವಿವಿಧ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು.

ಮಹಾರಾಜ ಕಾಲೇಜು ಮೈದಾನದಲ್ಲಿ ಮೂರು ದಿನ ಆಯೋಜಿಸಿರುವ ಮೇಳದ ಎರಡನೇ ದಿನ ವಿವಿಧ ಕಂಪನಿಗಳ ಪ್ರತಿನಿಧಿಗಳು ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸಿದರು. ಕೆಲವು ಕಂಪನಿಗಳು ಸ್ಥಳದಲ್ಲೇ ಸಂದರ್ಶನ ನಡೆಸಿ ನೇಮಕಾತಿ ಪತ್ರ ನೀಡಿದವು.

ಮೈಸೂರು ವಿಭಾಗಮಟ್ಟದ ಉದ್ಯೋಗ ಮೇಳದಲ್ಲಿ ಒಟ್ಟು 126 ಕಂಪನಿಗಳು ಪಾಲ್ಗೊಂಡಿವೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದಾರೆ. ಸೋಮವಾರವೂ ಅಭ್ಯರ್ಥಿಗಳ ಸಂದರ್ಶನ ಮತ್ತು ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ADVERTISEMENT

ಉದ್ಯೋಗ ಮೇಳದಲ್ಲಿ 23 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ. 14,800 ಸಾವಿರ ಮಂದಿ ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದರೆ, 8,550 ಮಂದಿ ಸ್ಥಳದಲ್ಲೇ ಹೆಸರು ನೋಂದಾಯಿಸಿದ್ದಾರೆ ಎಂದು ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.

‘ಉದ್ಯೋಗ ಲಭಿಸಲೇಬೇಕು ಎಂಬ ಏಕೈಕ ಉದ್ದೇಶದಿಂದ ಮೇಳದಲ್ಲಿ ಪಾಲ್ಗೊಳ್ಳಬೇಡಿ ಎಂದು ನಾವು ಉದ್ಯೋಗಾಕಾಂಕ್ಷಿಗಳಲ್ಲಿ ಹೇಳುತ್ತೇವೆ. ನೈಪುಣ್ಯತೆ ಮತ್ತು ಕೌಶಲ ಹೆಚ್ಚಿಸಲು ತರಬೇತಿ ಪಡೆಯಿರಿ ಎಂದು ಅವರಿಗೆ ಸಲಹೆ ನೀಡುತ್ತೇವೆ’ ಎಂದರು.

95,800 ಮಂದಿ ನೋಂದಣಿ: ಕೌಶಲ ಕರ್ನಾಟಕ ಯೋಜನೆಯಡಿ ಸ್ವಯಂ ಉದ್ಯೋಗ, ಕೌಶಲ ತರಬೇತಿ, ವಿದೇಶಗಳಲ್ಲಿ ತರಬೇತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯಲು ಮೈಸೂರು ಭಾಗದ ಐದು ಜಿಲ್ಲೆಗಳಿಂದ ಒಟ್ಟು 95,800 ಮಂದಿ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಮೈಸೂರು ಜಿಲ್ಲೆಯಿಂದ 41,280 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಹಾಸನ ಜಿಲ್ಲೆಯಿಂದ 21,345, ಮಂಡ್ಯದಿಂದ 18,664, ಚಾಮರಾಜನಗರದಿಂದ 9,324 ಮತ್ತು ಕೊಡಗು ಜಿಲ್ಲೆ ಯಿಂದ 5,187 ಮಂದಿ ಹೆಸರು ನೋಂದಾ ಯಿಸಿದ್ದಾರೆ ಎಂದು ತಿಳಿಸಿದರು.

**

3.20 ಲಕ್ಷ ಉದ್ಯೋಗ ಗುರಿ

ಸರ್ಕಾರವು 3.20 ಲಕ್ಷ ಮಂದಿಗೆ ಉದ್ಯೋಗ ದೊರಕಿಸಿಕೊಡುವ ಗುರಿ ಇಟ್ಟುಕೊಂಡಿತ್ತು. ಇದುವರೆಗೆ 1.77 ಲಕ್ಷ ಮಂದಿಗೆ ಉದ್ಯೋಗ ದೊರಕಿಸಿಕೊಟ್ಟಿದೆ ಎಂದು ಮುರಳೀಧರ ಹಾಲಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.