ADVERTISEMENT

ಕೇಂದ್ರ ಮಸೂದೆ ಜಾರಿ:ಬಿಜೆಪಿ ಸರಣಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 6:40 IST
Last Updated 12 ಅಕ್ಟೋಬರ್ 2011, 6:40 IST

ಮೈಸೂರು: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿ ಮಾಡಲು ಹೊರಟಿರುವ ಮತೀಯ ನಿರ್ದೇಶಿತ ಹಿಂಸಾಚಾರ ತಡೆ ಮಸೂದೆಯನ್ನು ವಿರೋಧಿಸಿ ಬಿಜೆಪಿ ಯುವಮೋರ್ಚಾ ನಗರದ ಪ್ರತ್ಯೇಕ ಸ್ಥಳಗಳಲ್ಲಿ ಮಂಗಳವಾರ ಸರಣಿ ಪ್ರತಿಭಟನೆ ಮಾಡಿತು.

ನಗರದ ಚಾಮುಂಡಿಪುರಂ ವೃತ್ತ, ಫೌಂಟೇನ್ ವೃತ್ತ ಮತ್ತು ಮಾತೃಮಂಡಳಿ ವೃತ್ತಗಳಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿತು.

ಮುಸ್ಲಿಮರಿಗೆ ಪ್ರತ್ಯೇಕ ಸ್ಥಾನಮಾನ ನೀಡುವ ಹುನ್ನಾರ ಮಸೂದೆಯಲ್ಲಿ ಅಡಗಿದೆ. ದೇಶ ವಿಭಜನೆ ಆದಾಗ ಭಾರತವನ್ನು ಬಿಟ್ಟು ಹೋದ ಮುಸ್ಲಿಮರಿಗೆ ಮರಳಿ ಆಸ್ತಿ ಕೊಡುವ ಪ್ರಸ್ತಾವನೆಯ ಆಸ್ತಿ ಹಕ್ಕು ಇದಾಗಿದೆ.

ದಲಿತ ಮತ್ತು ಹಿಂದುಳಿದ ವರ್ಗದ ಮೀಸಲಾತಿಯನ್ನು ಕಡಿತಗೊಳಿಸಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಮೀಸಲಾತಿ ನೀಡುವಂತೆ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ವರದಿಯಲ್ಲಿ ಮಂಡಿಸಲಾಗಿದೆ. ಮಸೂದೆಯಲ್ಲಿ ನಾಗರಿಕರನ್ನು `ಗುಂಪು~ ಮತ್ತು `ಅನ್ಯರು~ ಎಂದು ವ್ಯಾಖ್ಯಾನಿಸಲಾಗಿದೆ. ಗುಂಪು ಎನ್ನುವುದರಲ್ಲಿ ಭಾಷಾ ಅಲ್ಪಸಂಖ್ಯಾತರು ಮತ್ತು ಮತೀಯ ಅಲ್ಪಸಂಖ್ಯಾತರು ಸೇರುತ್ತಾರೆ.

ಬಹುಸಂಖ್ಯಾತ ಹಿಂದೂಗಳು ಅನ್ಯರು ಗುಂಪಿನಲ್ಲಿ ಬರಲಿದ್ದಾರೆ. ಅಲ್ಪಸಂಖ್ಯಾತರನ್ನು ಹಿಂದೂಗಳಿಂದ ಪ್ರತ್ಯೇಕಗೊಳಿಸಿ ಸಮಾಜದಲ್ಲಿ ಒಡಕು ಉಂಟು ಮಾಡುವುದು ಹಾಗೂ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸುವುದು ಇದರ ಹಿಂದಿನ ಹುನ್ನಾರವಾಗಿದೆ ಎಂದು ಧರಣಿನಿರತರು ಆರೋಪಿಸಿದರು.

ದೇಶ ವಿರೋಧಿ ಮಸೂದೆಯನ್ನು ಎಲ್ಲರು ವಿರೋಧಿಸಬೇಕು. ಜಾತಿ ಸಂಘರ್ಷದ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಈ ಮಸೂದೆಯನ್ನು ಯಾರೂ ಒಪ್ಪಬಾರದು. ದೇಶ ದಾದ್ಯಂತ ಪ್ರತಿಭಟನೆಯಲ್ಲಿ ಭಾಗವಹಿ ಸಲು ಜನಜಾಗೃತಿ ಮಾಡಬೇಕು. ಮಸೂದೆಯ ದುರುದ್ದೇಶವನ್ನು ಜನತೆಗೆ ತಿಳಿಸುವ ಅಗತ್ಯವಿದೆ ಎಂದು ಧರಣಿ ನಿರತರು ತಿಳಿಸಿದರು.

ಭ್ರಷ್ಟಾಚಾರ ವಿರುದ್ಧ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಕೈಗೊಂಡಿರುವ ರಥಯಾತ್ರೆಯನ್ನು ಬೆಂಬಲಿಸಬೇಕು ಎಂದು ಧರಣಿನಿರತರು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.