ADVERTISEMENT

ಚಾಮರಾಜ ಎಡದಂಡೆ: ಅಪಾಯಕ್ಕೆ ಆಹ್ವಾನ

ಪ್ರಜಾವಾಣಿ ವಿಶೇಷ
Published 23 ಜುಲೈ 2012, 5:35 IST
Last Updated 23 ಜುಲೈ 2012, 5:35 IST

ಸಾಲಿಗ್ರಾಮ: ಇಲ್ಲಿನ ಕೆ.ಆರ್.ನಗರ ಮುಖ್ಯ ರಸ್ತೆಯ ಅಂಕನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ  ಚಾಮರಾಜ ಎಡದಂಡೆ ನಾಲೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ದಶಕಗಳಿಂದಲೂ ವಾಹನ ಅಪಘಾತಗಳು ಸಂಭವಿಸುತ್ತಿವೆ. ಆದರೂ ಸಂಬಂಧಿಸಿದ ಇಲಾಖೆ ಇಲ್ಲಿ ತಡೆಗೋಡೆ ನಿರ್ಮಿಸುವ ಗೋಜಿಗೆ ಹೋಗಿಲ್ಲ.

ಹಲವು ವಾಹನಗಳು ನಾಲೆಗೆ ಬಿದ್ದು ಹಲವು ಪ್ರಯಾಣಿಕರು ಕೈಕಾಲು ಮುರಿದುಕೊಂಡಿದ್ದಾರೆ. ಈ ಸ್ಥಳದಲ್ಲಿ ಸೂಚನಾ ಫಲಕ ಮತ್ತು ತಡೆಗೋಡೆ ಇಲ್ಲದ್ದರಿಂದ ವಾಹನ ಸವಾರರು ಅಪಘಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಇವೆ.

ಕೆ.ಆರ್.ನಗರಕ್ಕೆ ಪ್ರಯಾಣ ಮಾಡುವಾಗ ಅಂಕನಹಳ್ಳಿ ಗ್ರಾಮವನ್ನು ಬಿಟ್ಟು ವಾಹನ ಮುಂದೆ ಹೋಗುತ್ತಿದ್ದಂತೆ ದಿಢೀರನೆ ದೊಡ್ಡ ತಿರುವು ಎದುರಾಗುತ್ತದೆ. ಇಲ್ಲಿ ಯಾವುದೇ  ಸೂಚನಾ ಫಲಕ ಕೂಡ ಹಾಕಿಲ್ಲ. ಇದನ್ನು ನೋಡುತ್ತಿದ್ದಂತೆ ವಾಹನ ಚಾಲಕರು ಗಾಬರಿಗೊಂಡು ಪಕ್ಕಕ್ಕೆ ತೆಗೆದುಕೊಂಡರಂತೂ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ವಾಹನ ಚಾಮರಾಜ ಎಡದಂಡೆಗೆ ಬಿದ್ದಿರುತ್ತದೆ. ಹಾಗೊಂದು ವೇಳೆ ಇದರಿಂದ ತಪ್ಪಿಸಿಕೊಂಡು ಬಲಕ್ಕೆ ತಿರುಗಿಸಿದರೂ ಸರಿಯೇ, ಸುಮಾರು 40 ಅಡಿ ಎತ್ತರದಿಂದ ಕೆಳಗಡೆಗೆ ಬಿದ್ದು ಅಪಘಾತವಾಗುವ ಸಾಧ್ಯತೆ ಹೆಚ್ಚಿದೆ.
 
ಈಚೆಗಷ್ಟೇ ಇದೇ ತಿರುವಿನಲ್ಲಿ ವಾಹನ ಅಪಘಾತವಾಗಿ ರಾಮಚಂದ್ರ ಎಂಬವರು ಕಾಲು ಕೆಳೆದುಕೊಂಡಿದ್ದಾರೆ.
ಎರಡು ದಿನಕ್ಕೆ ಒಮ್ಮೆಯಾದರೂ ಈ ಸ್ಥಳದಲ್ಲಿ ಒಂದಲ್ಲ ಒಂದು ವಾಹನ ಅಪಘಾತಕ್ಕೀಡಾಗುತ್ತದೆ. ಇದನ್ನು ತಪ್ಪಿಸಲು ಎಂಜಿನಿಯರುಗಳು ಮುಂದಾಗದೆ ಕೈಕಟ್ಟಿ ಕುಳಿತಿದ್ದಾರೆ. ಇಂಥ ಹಲವು ಘಟನೆಗಳನ್ನು ಕಂಡಿರುವ ಅಂಕನಹಳ್ಳಿ ಗ್ರಾಮದ ಜನ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಿಡಿ ಕಾರುತ್ತಿದ್ದಾರೆ.

ಬಸ್, ಲಾರಿ, ಟೆಂಪೊದಂಥ ದೊಡ್ಡ ವಾಹನಗಳನ್ನು ಈ ತಿರುವಿನಲ್ಲಿ ತುಂಬ ಜಾಗರೂಕತೆಯಿಂದ ಓಡಿಸಬೇಕು. ಇಲ್ಲದಿದ್ದರೆ ಅಪಘಾತ ತಪ್ಪಿದ್ದಲ್ಲ. ರಸ್ತೆಯ ತಿರುವು ತಿಳಿಯದವರಂತೂ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಪ್ರತಿ ದಿನ ನೂರಾರು ವಾಹನಗಳು ಈ ಮಾರ್ಗದಲ್ಲಿ ಹಗಲು, ರಾತ್ರಿ ಓಡಾಡುತ್ತವೆ. ಈ ಪ್ರಯಾಣಿಕರ ಜೀವದ ಬಗ್ಗೆ ಕಾಳಜಿವಹಿಸುವವರು ಇಲ್ಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.