ADVERTISEMENT

ಚಾಮುಂಡಿಬೆಟ್ಟ ಮೆಟ್ಟಿಲು ಹತ್ತುವ ಸ್ಪರ್ಧೆ: ತಿಪ್ಪವ್ವ ಸಣ್ಣಕ್ಕಿ, ಕೃಷ್ಣಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 10:00 IST
Last Updated 26 ಜನವರಿ 2012, 10:00 IST

 ಮೈಸೂರು: ಬೆಳಗಿನ ಚಳಿಯನ್ನು ಲೆಕ್ಕಿಸದೇ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಜನತೆ, ವೃದ್ಧರು ನಾ ಮುಂದು, ತಾ ಮುಂದು ಎನ್ನುತ್ತ ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತುವ ಮೂಲಕ ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಿದರು. ಆ ಮೂಲಕ ಬಹುಮಾನ ತಮ್ಮದಾಗಿಸಿಕೊಂಡರು.

ಗಣರಾಜ್ಯೋತ್ಸವ ಹಾಗೂ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯುವಕ/ಯುವತಿಯರು, ಮಕ್ಕಳು ಮತ್ತು ಹಿರಿಯರ ವಿಭಾಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತುವ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. 165ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಸ್ಪರ್ಧೆಗೆ ಹಸಿರು ನಿಶಾನೆ ತೋರುತ್ತಿದ್ದಂತೆ ಯುವಕ, ಯುವತಿಯರು ವೇಗದಿಂದ ಮೆಟ್ಟಿಲು ಹತ್ತಲು ಆರಂಭಿಸಿದರು. ಕೆಲವರು ಅರ್ಧ ದೂರ ಕ್ರಮಿಸಿದ ಬಳಿಕ ನಡಿಗೆಯನ್ನು ನಿಧಾನಗೊಳಿಸಿದರೆ, ಹಲವರು ಆರಂಭದಿಂದಲೇ ಸಮ ವೇಗ ಕಾಯ್ದುಕೊಂಡು ಗುರಿ ತಲುಪಿದರು. ಕಳೆದ ವರ್ಷ ಪ್ರಥಮ ಸ್ಥಾನ ಪಡೆದಿದ್ದ ತಿಪ್ಪವ್ವ ಸಣ್ಣಕ್ಕಿ ಅವರು ಈ ಬಾರಿಯೂ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು.

ಸ್ಪರ್ಧಾ ವಿಜೇತರು: ಯುವತಿಯರ ವಿಭಾಗ: ತಿಪ್ಪವ್ವ ಸಣ್ಣಕ್ಕಿ, ಪ್ರಥಮ (11.9 ನಿಮಿಷ), ಕೆ.ಆರ್.ಮೇಘನಾ, ಮಹಾರಾಣಿ ಕಾಲೇಜು, ದ್ವಿತೀಯ (12.42 ನಿ.), ಶ್ರದ್ಧಾರಾಣಿ.ಎಸ್.ದೇಸಾಯಿ, ಕ್ರೀಡಾ ಹಾಸ್ಟೆಲ್, ತೃತೀಯ (13 .54 ನಿ.), ಕೆ.ಯಶಸ್ವಿನಿ  (14.12 ನಿ.) , ಆರತಿ.ಆರ್. ಕಲ್ಬುರ್ಗಿ, ಸಮಾಧಾನಕರ (15.25 ನಿ.)
ಯುವಕರ ವಿಭಾಗ: ಎಂ.ಕೃಷ್ಣ ವೀರನಗೆರೆ, ಪ್ರಥಮ (10.17 ನಿ.), ಟಿ. ನಾಗೇಂದ್ರ, ದ್ವಿತೀಯ (10.35 ನಿ.), ಸಿ.ಪ್ರೇಮ್, ತೃತೀಯ (10.54 ನಿ) , ಸತ್ಯನಾರಾಯಣ (11.39 ನಿ.), ಚೆನ್ನಪ್ಪ, ಸಮಾಧಾನಕರ (12.47 ನಿ.)
ಬಾಲಕರ ವಿಭಾಗ: ಮಹೇಂದ್ರಕುಮಾರ್, ಪ್ರಥಮ (16.5 ನಿ.), ಧನಂಜಯ್, ದ್ವಿತೀಯ (16.22 ನಿ.), ರಾಜೇಶ್, ತೃತೀಯ (17.24 ನಿ.), ಹೇಮಂತ್‌ರಾಜ್ (18.01) , ಧನುಷ್, ಸಮಾಧಾನಕರ (18.15 ನಿ.)
ಬಾಲಕಿಯರ ವಿಭಾಗ: ಎಚ್.ವಿ.ಪೂಜಾ, ಪ್ರಥಮ (17.17 ನಿ. ), ಜಿ.ಎ.ಅಮೃತಾ, ದ್ವಿತೀಯ (18.01 ನಿ.), ಆರ್.ಎನ್.ನಾಗು, ತೃತೀಯ (19.27 ನಿ.), ಆರ್.ಎಸ್.ಸಿಂಧು (19.50 ನಿ.), ಬಿ.ವರ್ಷಾ, ಸಮಾಧಾನಕರ (19.59 ನಿ.)

ಹಿರಿಯ ನಾಗರಿಕರ ವಿಭಾಗ: ಬಸವರಾಜು, ಪ್ರಥಮ (21 ನಿ.), ವಿಠ್ಠಲರಾಜ್, ದ್ವಿತೀಯ (24 ನಿ.), ಸೋಮಶೇಖರ್, ತೃತೀಯ (25 ನಿ.)

ಚಾಲನೆ: ಸ್ಪರ್ಧೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, `ಜನರಲ್ಲಿ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಲು ಈ ಸ್ಪರ್ಧೆ ಏರ್ಪಡಿಸಲಾಗಿದೆ. ಈಗಿನ ದಿನಗಳಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರಿಗೆ ಮಧುಮೇಹ ರೋಗ ಇರುವುದನ್ನು ಕಾಣಬಹುದು. ಇದಕ್ಕೆ ನಿಯಮಿತ ಆಹಾರ ಮತ್ತು ನಡಿಗೆಯೇ ಚಿಕಿತ್ಸೆಯಾಗಿದ್ದು, ಯೋಗವೂ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಬೆಟ್ಟ ಹತ್ತುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ~ ಎಂದರು.

ನಾಲ್ಕು ವಿಭಾಗಗಳಲ್ಲಿ ವಿಜೇತರಾದ ಸ್ಪರ್ಧಾಳು ಗಳಿಗೆ ಕ್ರಮವಾಗಿ ರೂ. 2 ಸಾವಿರ, ರೂ. 1500 ಸಾವಿರ ಹಾಗೂ ರೂ. 750 ನಗದು ಬಹುಮಾನ ವನ್ನು ಜ. 26ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿತರಣೆ ಮಾಡಲಾಗುತ್ತದೆ.

ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್, ಉಪಮೇಯರ್ ಎಂ.ಜೆ.ರವಿಕುಮಾರ್, ರಾಷ್ಟ್ರೀಯ ಸಾಹಸ ಕ್ರೀಡಾ ಅಕಾಡೆಮಿಯ ರುಕ್ಮಣಿ ಚಂದ್ರನ್ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.