ADVERTISEMENT

ಚಾಮುಂಡೇಶ್ವರಿಗೆ ಭಕ್ತಿ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 8:32 IST
Last Updated 1 ಜುಲೈ 2017, 8:32 IST
ಚಾಮುಂಡೇಶ್ವರಿ ದೇವಿ ದರ್ಶನಕ್ಕಾಗಿ ಭಕ್ತರು ಸಾಲುಗಟ್ಟಿ ನಿಂತಿದ್ದರು
ಚಾಮುಂಡೇಶ್ವರಿ ದೇವಿ ದರ್ಶನಕ್ಕಾಗಿ ಭಕ್ತರು ಸಾಲುಗಟ್ಟಿ ನಿಂತಿದ್ದರು   

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿಗೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭಕ್ತರು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಭಾವ ಮೆರೆದರು. ನಸುಕಿನ 5ರಿಂದಲೇ ಸಾಲುಗಟ್ಟಿ ನಿಂತ ಭಕ್ತರು ಕೊರೆಯುವ ಚಳಿಯನ್ನೂ ಲೆಕ್ಕಿಸದೆ ದೇವಿಯ ದರ್ಶನ ಪಡೆದರು.

ಬೆಳಗಿನ ಜಾವ 3ರಿಂದಲೇ ಚಾಮುಂಡೇಶ್ವರಿಗೆ ಪೂಜಾ ಕಾರ್ಯ ಆರಂಭವಾಯಿತು. ದೇವಾಲಯದ ಪ್ರಧಾನ ಅರ್ಚಕ ಡಾ.ಶಶಿಶೇಖರ್‌ ದೀಕ್ಷಿತ್‌ ನೇತೃತ್ವದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಏಕವಾರ, ಸಹಸ್ರನಾಮಾರ್ಚನೆ, ತ್ರಿಷತಿ ಅರ್ಚನೆ ನಡೆಯಿತು.

ಸೂರ್ಯೋದಯಕ್ಕೂ ಮುನ್ನವೇ ಅಮ್ಮನವರಿಗೆ ವಿವಿಧ ಹೂವುಗಳು ಹಾಗೂ ಚಿನ್ನಾಭರಣ-ರೇಷ್ಮೆ ಸೀರೆ ಸಮೇತ ಮಹಾಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ಪೂಜಾ ವಿಧಿ-ವಿಧಾನಗಳು ಮುಗಿದ ಬಳಿಕ ನಸುಕಿನ 5ರಿಂದ ಸರದಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು. ದೇವಸ್ಥಾನದ ಆವರಣದಲ್ಲಿ ಹೂವಿನ ಮಂಟಪ ನಿರ್ಮಿಸಲಾಗಿತ್ತು. ದೇವಸ್ಥಾನದ ಹೊರಗೆ ತಳಿರು-ತೋರಣ, ಬಣ್ಣ ಬಣ್ಣದ ಹೂವಿನ ಮಾಲೆಗಳಿಂದ ಸಿಂಗರಿಸಲಾಗಿತ್ತು.

ADVERTISEMENT

ಜನಸಾಗರ: ಹರಕೆ ಹೊತ್ತ ಭಕ್ತರು ಸಾವಿರ ಮೆಟ್ಟಿಲುಗಳಿಗೆ ಕುಂಕುಮ ಹಚ್ಚುವ ಮೂಲಕ ಭಕ್ತಿ ಮೆರೆದರು. ಶುಕ್ರವಾರ ನಸುಕಿನ ವೇಳೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯದ ಬಳಿ ಸೇರಿದ್ದರು. ಗೊಂದಲಕ್ಕೆ ಆಸ್ಪದ ಇಲ್ಲದಂತೆ ದೇವಿ ದರ್ಶನಕ್ಕಾಗಿ ವ್ಯವಸ್ಥಿತವಾಗಿ ಸಾಲಿನಲ್ಲಿ ಸಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಚಿತ ದರ್ಶನದ ಜತೆಗೆ ₹ 50, ₹ 300ರ ಟಿಕೆಟ್ ದರ್ಶನಕ್ಕೂ ಅವಕಾಶ ಕಲ್ಪಿಸಿಕೊಡಲಾಯಿತು.

ಪ್ರಸಾದ ವಿತರಣೆ: ಮುಜರಾಯಿ ಇಲಾಖೆ ಹಾಗೂ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಅನ್ನದಾನ ನಡೆಯಿತು. ಆದರೆ, ಸಂಘ–ಸಂಸ್ಥೆಗಳಿಂದ ಅನ್ನದಾನ ನಡೆಯಲಿಲ್ಲ. ಹೆಲಿಪ್ಯಾಡ್‌ ಬಳಿ ಕೆಲವು ಸಂಘಟನೆಗಳು ಪ್ರಸಾದ ವಿತರಿಸಿದವು.

ಭಕ್ತರ ಅನುಕೂಲಕ್ಕಾಗಿ ದಾಸೋಹ ಭವನದ ಪಕ್ಕದಲ್ಲಿ ಟೆಂಟ್‌ ನಿರ್ಮಿಸಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯ, ಬ್ಯಾರಿಕೇಡ್‌, ವಿದ್ಯುತ್‌ ದೀಪದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆ.ಆರ್.ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

16ರಂದು ವರ್ಧಂತಿ: ಜುಲೈ 16ರಂದು ವರ್ಧಂತ್ಯುತ್ಸವ ನಡೆಯಲಿದೆ. 3ನೇ ಶುಕ್ರವಾರದಂದು ನಡೆಯುವ ಉತ್ಸವಕ್ಕೆ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ.ಹೆಲಿಪ್ಯಾಡ್‌ನಿಂದ ಬಸ್‌ ವ್ಯವಸ್ಥೆ: ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳನ್ನು ನಿರ್ಬಂಧಿಸಲಾಗಿದ್ದು, ಲಲಿತ ಮಹಲ್‌ ಹೆಲಿಪ್ಯಾಡ್‌ನಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗಿನ ಜಾವ 2ರಿಂದಲೇ ಕೆಎಸ್‌ಆರ್‌ಟಿಸಿಯ 25 ವಿಶೇಷ ಬಸ್‌ಗಳಲ್ಲಿ ಭಕ್ತರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶವಿತ್ತು. ಅಲ್ಲದೆ, ನಗರ ಬಸ್‌ ನಿಲ್ದಾಣದಿಂದ ಬೆಟ್ಟಕ್ಕೆ ₹ 17 ಟಿಕೆಟ್‌ ದರ ನಿಗದಿಗೊಳಿಸಲಾಗಿತ್ತು.

ಶಾಸಕ ಸುರೇಶಕುಮಾರ್‌ ಭೇಟಿ: ಶಾಸಕ ಎಸ್‌.ಸುರೇಶಕುಮಾರ್ ಅವರು ಶುಕ್ರವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದರು. ಕೆಎಸ್‌ಆರ್‌ಟಿಸಿಯ ಉಚಿತ ಬಸ್‌ನಲ್ಲಿ ಸಾರ್ವಜನಿಕರ ಜತೆಯೇ ಬೆಟ್ಟಕ್ಕೆ ಬಂದರು. ಚಾಮುಂಡೇಶ್ವರಿ ದರ್ಶನ ಪಡೆದರು. ‘ನಾಡಿನಲ್ಲಿ ಬರಗಾಲ ಇರುವ ಕಾರಣ, ಮಳೆ ಆಗುವಂತೆ ಬೇಡಿಕೊಂಡೆ’ ಎಂದು ಅವರು ಪ್ರತಿಕ್ರಿಯಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಎನ್‌.ಆರ್.ಮಹಿಳಾ ಮೋರ್ಚಾ ವತಿಯಿಂದ ಭಕ್ತರಿಗೆ ಅರಿಸಿನ–ಕುಂಕುಮ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.