ADVERTISEMENT

ಚಾಲಕರಿಗೆ ಅಂಧರಿಂದ ಮಾರ್ಗದರ್ಶನ!

​ಪ್ರಜಾವಾಣಿ ವಾರ್ತೆ
Published 18 ಜನವರಿ 2016, 8:31 IST
Last Updated 18 ಜನವರಿ 2016, 8:31 IST
ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಕಾಲೇಜು ಮೈದಾನದಲ್ಲಿ ಭಾನುವಾರ ಕಾರ್ ರ್‌್ಯಾಲಿಗೆ ನಟಿ ಹರಿಪ್ರಿಯಾ ಚಾಲನೆ ನೀಡಿದರು
ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಕಾಲೇಜು ಮೈದಾನದಲ್ಲಿ ಭಾನುವಾರ ಕಾರ್ ರ್‌್ಯಾಲಿಗೆ ನಟಿ ಹರಿಪ್ರಿಯಾ ಚಾಲನೆ ನೀಡಿದರು   

ಮೈಸೂರು: ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾರು ರ್‌್ಯಾಲಿಯಲ್ಲಿ ಚಾಲಕರಿಗೆ ಅಂಧರು ಮಾರ್ಗದರ್ಶನ ನೀಡುವ ಮೂಲಕ ಗಮನ ಸೆಳೆದರು. ಅಂಧರು ಹೇಳಿದ ಮಾರ್ಗದಲ್ಲಿ ಮತ್ತು ವೇಗದಲ್ಲಿ ಚಾಲಕರು ಕಾರು ಚಲಾಯಿಸಿದರು.

ಟಿಡಿಎಸ್‌ ಮಾದರಿಯ 60 ಕಿ.ಮೀ ದೂರದ ರ್‌್ಯಾಲಿಯಲ್ಲಿ ಸುಮಾರು 60 ಕಾರುಗಳು ಸ್ಪರ್ಧೆಯಲ್ಲಿದ್ದವು. ಈ ಕಾರುಗಳ ಚಾಲಕರಿಗೆ ಅಂಧರು ‘ನೇವಿ ಗೇಟರ್‌’ ಆಗಿ ಕಾರ್ಯನಿರ್ವಹಿಸಿದರು. ಬ್ರೈಲ್‌ ಲಿಪಿಯಲ್ಲಿ ನೀಡಿದ್ದ ಮಾರ್ಗದ ನಕ್ಷೆಯ ನೆರವಿನೊಂದಿಗೆ ಯಶಸ್ವಿಯಾಗಿ ತಮ್ಮ ಕೆಲಸ ನಿಭಾಯಿಸಿದರು.

ಅಂಧರಲ್ಲಿ ಸ್ಫೂರ್ತಿ ತುಂಬಲು ರೌಂಡ್‌ ಟೇಬಲ್‌ ಇಂಡಿಯಾದ ಮೈಸೂರು ಅಮಿಟಿ ರೌಂಡ್‌ ಟೇಬಲ್‌ 156 ಈ ರ್‌್ಯಾಲಿ ಆಯೋಜಿಸಿತ್ತು. ‘ಬಿ ಮೈ ಸೈಟ್‌’ ಎಂಬ ಹೆಸರಿನ ರ್‌್ಯಾಲಿಯು ರಿಂಗ್ ರಸ್ತೆ, ಎಚ್.ಡಿ. ಕೋಟೆ ರಸ್ತೆ, ನಂಜನಗೂಡು ರಸ್ತೆಗಳಲ್ಲಿ ಸುತ್ತಾಡಿ ಮಾಲ್ ಆಫ್ ಮೈಸೂರು ಬಳಿ ಅಂತ್ಯಗೊಂಡಿತು.

‘ಗುರಿ ಮುಟ್ಟಲು ಅಂಧತ್ವ ಅಡ್ಡಿ ಯಾಗದು’ ಎಂಬುದನ್ನು ಸಾಬೀತುಪಡಿ ಸಲು ಈ ರ್‌್ಯಾಲಿ ಆಯೋಜಿಸಲಾಗಿತ್ತು. ಯಾವ ರಸ್ತೆಯ ಮೂಲಕ ಹೋಗಬೇಕು, ಯಾವ ಸ್ಥಳದಲ್ಲಿ ಎಡಕ್ಕೆ ತೆಗೆದುಕೊಳ್ಳ ಬೇಕು, ಎಲ್ಲಿ ನಿಧಾನವಾಗಿ ಚಲಿಸಬೇಕು ಎಂಬುದರ ಬಗ್ಗೆ ಅಂಧರು ಮಾರ್ಗ ದರ್ಶನ ಮಾಡಿದರು. 

ಹಕ್ಕು ವಂಚಿತ ಮಕ್ಕಳಲ್ಲಿ ಶಿಕ್ಷಣ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ರ್‌್ಯಾಲಿಯಲ್ಲಿ ಬೆಂಗ ಳೂರು, ಮೈಸೂರು, ಮಂಗಳೂರು ಸೇರಿ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸ್ಪರ್ಧಿಗಳು ಭಾಗವಹಿಸಿದ್ದರು.

ನಗರದ ದಿವ್ಯಜ್ಯೋತಿ ಚಾರಿಟಬಲ್ ಟ್ರಸ್ಟ್, ಹೆಲೆನ್ ಕೆಲರ್ ಸಂಸ್ಥೆ, ರಂಗರಾವ್ ಸ್ಮಾರಕ ಅಂಧರ ಶಾಲೆ, ಜೆಎಸ್‍ಎಸ್ ಪಾಲಿಟೆಕ್ನಿಕ್ ಸೇರಿದಂತೆ ಇತರೆ ಶಿಕ್ಷಣ ಸಂಸ್ಥೆಗಳ ಸುಮಾರು 60 ಅಂಧರು ಪಾಲ್ಗೊಂಡಿದ್ದರು.

ಚಾಲಕರಾದ ಶಿಲ್ಪಾ ಗೌಡ ಹಾಗೂ ಉಷಾ ಅವರು ಪ್ರಥಮ ಸ್ಥಾನ ಪಡೆದರು. ಇವರಿಗೆ ನೇವಿಗೇಟರ್ ಆಗಿ ಮಾರ್ಗ ದರ್ಶನ ನೀಡಿದ್ದು ಕೇಶವಮೂರ್ತಿ. ಇವರಿಗೆ ₹ 30 ಸಾವಿರ ಬಹುಮಾನ ಲಭಿಸಿತು.

ಎರಡನೇ ಸ್ಥಾನ ಸಂಜನಾ ಹಾಗೂ ಸುಜಿತ್‌ ಪಾಲಾಯಿತು. ಇವರಿಗೆ ಕವಿತಾ ಅವರು ನೇವಿಗೇಟರ್‌ ಆಗಿ ಕಾರ್ಯನಿ ರ್ವಹಿಸಿದರು. ಮೂರನೇ ಸ್ಥಾನ ರಾಮ್‌ ಹಾಗೂ ಗೌತಮ್‌ ಅವರಿಗೆ ಒಲಿಯಿತು. ಇವರಿಗೆ ಚಂದ್ರೇಶ್‌ ಅವರು ನೇವಿ ಗೇಟರ್‌ ಆಗಿದ್ದರು. ಇವರು ಕ್ರಮವಾಗಿ
₹ 20, ₹ 10 ಸಾವಿರ ಬಹುಮಾನ ಲಭಿಸಿತು.

‘ನಾನು ಶಿಕ್ಷಕಿಯಾಗಿ ಕಾರ್ಯನಿರ್ವ ಹಿಸುತ್ತಿದ್ದೇನೆ. ಈ ರ್‌್ಯಾಲಿ ನನಗೆ ಹೊಸ ಅನುಭವ ನೀಡಿತು. ದಿನನಿತ್ಯದ ಜಂಜಾ ಟದಿಂದ ಹೊರಬಂದು ಖುಷಿಪಟ್ಟೆ. ನಾನಿದ್ದ ಕಾರಿನ ಚಾಲಕರಿಗೆ ಸರಿಯಾದ ಮಾರ್ಗದರ್ಶನ ನೀಡಿದೆ’ ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಕವಿತಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ರ್‌್ಯಾಲಿಯ ಆರಂಭ ತಡವಾಯಿತು. ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಕಾಲೇಜು ಮೈದಾನದಲ್ಲಿ ಶುರುವಾದ ರ್‌್ಯಾಲಿಗೆ ನಟಿ ಹರಿಪ್ರಿಯಾ ಚಾಲನೆ ನೀಡಿದರು. ಕಾರ್ಯಕ್ರಮದ ಸಂಚಾಲಕ ರಾದ ಪವನ್ ರಂಗಾ, ಕಿರಣ್ ರಂಗಾ, ಲೋಹಿತ್ ಅರಸು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.