ADVERTISEMENT

ಚಿಕ್ಕ ಕೆರೆಗೆ ಅಂಟಿಕೊಂಡ ದೊಡ್ಡ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 7:25 IST
Last Updated 22 ಜುಲೈ 2012, 7:25 IST

ತಿ.ನರಸೀಪುರ: ತಾಲ್ಲೂಕಿನ ಡಣಾಯಕನಪುರ ಹೊರವಲಯದಲ್ಲಿರುವ ಈ ಚಿಕ್ಕ ಕೆರೆಯ ಉಪಯೋಗ ದೊಡ್ಡದಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಇಲ್ಲದ್ದರಿಂದ ಗ್ರಾಮಕ್ಕೆ ವರವಾಗಿದ್ದ ಕೆರೆ ಇಂದು ನಿಷ್ಪ್ರಯೋಜಕವಾಗಿದೆ.

ಹಿಂದೆ ಗ್ರಾಮದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರನ್ನು ಇಲ್ಲಿಂದಲೇ ಪೂರೈಸಲಾಗುತ್ತಿತ್ತು. ಆದರೆ ಬರ ಬರುತ್ತ ಈ ಚಿಕ್ಕ ಕೆರೆಯನ್ನೂ ಆಸುಪಾಸಿನ ಜನ ಅತಿಕ್ರಮಣ ಮಾಡಿಕೊಂಡಿದ್ದರೆ. ಇದರಿಂದಾಗಿ ಚಿಕ್ಕ ಕೆರೆ ಮತ್ತಷ್ಟು ಚಿಕ್ಕದಾಗುತ್ತ ಸಾಗಿದೆ. ಈಗ ಇದರ ನೀರು ಸಂಗ್ರಹಣಾ ಸಾಮರ್ಥ್ಯ ಕೂಡ ಕಡಿಮೆಯಾಗಿದೆ. ಹೀಗಾಗಿ ಗ್ರಾಮ ದನಕರುಗಳು ಮಲಗಿ ಹೊರಳಾಡಲು ಮಾತ್ರ ಬಳಕೆಯಾಗುತ್ತಿದೆ.

ಕಳೆದ ಕೆಲ ವರ್ಷಗಳಿಂದ ಗ್ರಾಮ ಪಂಚಾಯಿತಿಯವರು ಕೆರೆಯ ನಿರ್ವಹಣೆ ಕೈಬಿಟ್ಟಿದ್ದಾರೆ. ಸುತ್ತಮಮುತ್ತ ಅಪಾರ ಪ್ರಮಾಣದ ಜೊಂಡು ಬೆಳೆದಿದೆ. ಇರುವ ಅಸ್ಪ ಸ್ವಲ್ಪ ನೀರು ಕೂಡ ಮಲಿನವಾಗಿದೆ. ಮಳೆ ನೀರನ್ನೇ ಆಶ್ರಯಿಸಿರುವ ಈ ಕೆರೆ ಈ ಬಾರಿ ಮಳೆಯ ಕೊರತೆಯಿಂದಾಗಿ ಮತ್ತಷ್ಟು ಸೊರಗಿದೆ. ಸದ್ಯ ಬೆಳೆದಿರುವ ಜೊಂಡು ಹಾಗೂ ಸಂಗ್ರಹಗೊಂಡ ಹೂಳು ತೆಗೆದರೆ ಚಿಕ್ಕ ಕೆರೆ ಮತ್ತೆ ಚೊಕ್ಕಟವಾಗಲಿದೆ. ಈಗಲೂ ಈ ಕೆರೆಯಿಂದ ಆಸು ಪಾಸಿನ ಗದ್ದೆಗಳಿಗೆ ನೀರು ಪೂರೈಕೆಯಾಗುತ್ತದೆ.

ಕೆರೆಯನ್ನು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸಿದರೆ ಗ್ರಾಮಕ್ಕೆ ವರದಾನವಾಗುತ್ತದೆ. ಆದರೆ, ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಸಕ್ತಿ ವಹಿಸಬೇಕಾಗಿದೆ ಎಂಬುದು ಗ್ರಾಮಸ್ಥರು ಅಂಬೋಣ.

ಕೆರೆಯ ಸುತ್ತ ಕಲ್ಲಿನ ಸೋಪಾನ ಮಾಡಿದರೆ ಗ್ರಾಮದ ಜನ ಬಟ್ಟೆ ತೊಳೆಯಲು ತುಂಬ ಅನುಕೂಲವಾಗುತ್ತದೆ. ಕೆರೆ ಏರಿಯ ಆಸು ಪಾಸಿನಲ್ಲಿ ಬಹಿರ್ದೆಸೆಯನ್ನು ನಿಲ್ಲಿಸಬೇಕಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.