ADVERTISEMENT

ಚುಟುಕು ಸಾಹಿತ್ಯದ ಮೂಲ ಜನಪದ: ದೇಜಗೌ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 8:45 IST
Last Updated 21 ಮಾರ್ಚ್ 2011, 8:45 IST
ಚುಟುಕು ಸಾಹಿತ್ಯದ ಮೂಲ ಜನಪದ: ದೇಜಗೌ
ಚುಟುಕು ಸಾಹಿತ್ಯದ ಮೂಲ ಜನಪದ: ದೇಜಗೌ   

ಮೈಸೂರು: ‘ಜನಪದರು ದುಡಿದು ದಣಿವಾರಿಸಿಕೊಳ್ಳುವಾಗ ಅವರ ನೋವು ನಲಿವಿನ ಸೃಜನಶೀಲ ಅಭಿವ್ಯಕ್ತಿಯಿಂದ ಚುಟುಕುಗಳು ಹುಟ್ಟಿ ಕೊಂಡವು’ ಎಂದು ನಾಡೋಜ ಡಾ.ದೇಜಗೌ ಅಭಿಪ್ರಾಯಪಟ್ಟರು.ನಗರದ ಕೃಷ್ಣಮೂರ್ತಿಪುರಂನಲ್ಲಿರುವ ವ್ಯಾಸರಾಜ ಮಠದ ಸಭಾಂಗಣದಲ್ಲಿ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಿದ್ದ ಮೈಸೂರು ಜಿಲ್ಲಾ ಚುಟುಕು ಸಾಹಿತಿಗಳ ಸಮ್ಮಿಲನ-2011 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 

‘ನಮ್ಮ ಜನಪದರ ಶ್ರಮದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಚುಟುಕು ಸಾಹಿತ್ಯವನ್ನು ಕಾಯಕ ಸಾಹಿತ್ಯ ಎಂದರೆ ತಪ್ಪಾಗಲಾರದು.  ವಚನಕಾರರ ವಚನಗಳೂ ಒಂದು ರೀತಿಯ ಚುಟುಕುಗಳಾಗಿವೆ. ಚುಟುಕುಗಳ ಬ್ರಹ್ಮ ದಿನಕರ ದೇಸಾಯಿ ಅವರು ಹೇಳುವಂತೆ, ‘ಚುಟುಕು  ಎಂಬುದು ಬೆಳಕಿನ ಬಿಂಬ ದೊಡ್ಡದಾದರೆ ಚಂದ್ರ, ಚಿಕ್ಕದಾದರೆ ಚುಕ್ಕಿ’ ಎಂದು ತಿಳಿಸಿದರು. 

 ‘ಚುಟುಕುಗಳು ಚಿಕ್ಕದಾಗಿವೆಂದು ಕೆಲವರು ತಿರಸ್ಕರಿಸುವುದು ಸರಿಯಲ್ಲ. ಈ ಜೀವ ಜಗತ್ತಿನಲ್ಲಿ ಚಿಕ್ಕ ಹಾಗೂ ದೊಡ್ಡದಾದ ಎರಡೂ ಚೇತನಗಳಿಗೂ ಸಮಾನ ಬೆಲೆ ಇದೆ.ಆನೆಗೂ ಬೆಲೆ ಇದೆ; ಇರುವೆಗೂ ಬೆಲೆ ಇದೆ. ಹಾಗಾಗಿ ಚುಟುಕುಗಳಿಗೆ ಬಹುದೊಡ್ಡ ಬೆಲೆ ಉಂಟು. ಎಷ್ಟೋ ಪ್ರಸಿದ್ಧ ಕವಿಗಳು ಚುಟುಕುಗಳನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ಚುಟುಕು ಸಾಹಿತ್ಯಕ್ಕೆ ನಿರ್ದಿಷ್ಟವಾದ ಸಮಯ, ಸ್ಥಳ, ಘಟನೆ, ಭಾವ ಮುಂತಾದವುಗಳು ಬೇಕಾಗಿಲ್ಲ. ಯಾರಾದರೂ ಯಾವಾಗಲಾದರೂ ಚುಟುಕುಗಳನ್ನು ರಚಿಸಬಹುದು. ಜಗತ್ತು ಇಂದು ಭಾವಹೀನವಾಗಿದ್ದು ಚುಟುಕು ಸಾಹಿತ್ಯದ ಅವಶ್ಯಕತೆ ಇದೆ’ ಎಂದರು.

ಮಂಗಳೂರು ಚುಟುಕು ಸಾಹಿತ್ಯ ಪರಿಷತ್‌ನ ಜಂಟಿ ಕಾರ್ಯದರ್ಶಿ ರಂಜಿತ ಅವರ ‘ಭಾವರಂಜಿತ’ ಕೃತಿಯನ್ನು ಬಿಡುಗಡೆ ಮಾಡಿ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ ‘ಸರಳ ಪಂಕ್ತಿಯ ವಿರಳ ರಾಜ ಚುಟುಕು. ಇದನ್ನು ರಚಿಸಲು ಬೌದ್ಧಿಕ ಶ್ರಮ ಹಾಗೂ ದೈಹಿಕ ಶ್ರಮ ಬೇಕಾಗುತ್ತದೆ. ಚುಟುಕುಗಳು ಮೊದಲು ಪತ್ರಿಕೆಗಳಲ್ಲಿ ಖಾಲಿ ಜಾಗ ತುಂಬಲು ಬಳಕೆಯಾಗುತ್ತಿದ್ದವು. ಆದರೆ ಇಂದು ಪತ್ರಿಕೆಗಳಲ್ಲಿ ಬಹುದೊಡ್ಡ ಜಾಗವನ್ನು ಆಕ್ರಮಿಸಿಕೊಂಡಿವೆ. ಇದು ಚುಟುಕುಗಳ ಸಂಭ್ರಮದ ಬೆಳವಣಿಗೆ. ಆದರೆ ಚುಟುಕು ಸಾಹಿತ್ಯದ ಕುರಿತಾಗಿ ನಿಷ್ಟೂರವಾದ ವಿಮರ್ಶೆಗಳು ಇನ್ನೂ ಬಂದಿಲ್ಲ. ಆದ್ದರಿಂದ ಚುಟುಕುಗಳಲ್ಲಿ ಪ್ರಯೋಗಶೀಲತೆ ಕಡಿಮೆಯಾಗುತ್ತಿದೆ’ ಎಂದರು.

ವ್ಯಾಸರಾಜ ಮಠದ ಆಡಳಿತಾಧಿಕಾರಿ ಬಿ.ಆರ್.ನಟರಾಜ್ ಜೋಯಿಸ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ತೋಂಟದಾರ್ಯ, ಸಾಹಿತಿ ಡಾ.ಬಿ.ನಂ.ಚಂದ್ರಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಚುಟುಕು ಸಾಹಿತ್ಯ ಪರಿಷತ್‌ನ ರಾಜ್ಯ ಸಂಚಾಲಕ ಡಾ.ಎಂ.ಜೆ.ಆರ್.ಅರಸ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷೆರತ್ನ ಹಾಲಪ್ಪಗೌಡ, ಪ್ರಧಾನ ಕಾರ್ಯದರ್ಶಿ ಕೆರೋಡಿ ಎಂ.ಲೋಲಾಕ್ಷಿ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.