ADVERTISEMENT

ಜಾತೀಯತೆ, ಭ್ರಷ್ಟಾಚಾರದಲ್ಲಿ ರಾಜ್ಯ ಪ್ರಥಮ: ಪ್ರಸಾದ್

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 8:55 IST
Last Updated 28 ಫೆಬ್ರುವರಿ 2011, 8:55 IST

ನಂಜನಗೂಡು: ಜಾತೀಯತೆ ಮತ್ತು ಭ್ರಷ್ಟಾಚಾರದಲ್ಲಿ ಕರ್ನಾಟಕ ಇಡಿ ದೇಶದಲ್ಲೇ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯದ ಮಾನ ಹರಾಜಾಗಿದೆ ಎಂದು ಶಾಸಕ ವಿ.ಶ್ರೀನಿವಾಸಪ್ರಸಾದ್ ಹೇಳಿದರು. ತಾಲ್ಲೂಕಿನ ಹುರ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ವಸತಿ ಸಮುಚ್ಚಯ ಕಟ್ಟಣ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತೀಯತೆ, ಭ್ರಷ್ಟಾಚಾರ ಅಪಾಯ ಕಾರಿ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ. ದೇಶದಲ್ಲಿ ಹುಟ್ಟಿದ ಪ್ರತಿ ಮಗುವಿಗೂ 6-14 ವರ್ಷದ ತನಕ ಉಚಿತ ಶಿಕ್ಷಣ ನೀಡುವ ಶಿಕ್ಷಣದ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಬಡತನದಿಂದ ತಂದೆ, ತಾಯಿ ದುಡಿಯಲು ಹೊರಗಡೆ ಹೋಗು ತ್ತಾರೆ. ಅಂತಹವರ ಮಕ್ಕಳು ವಿದ್ಯೆ ಕಲಿಯಲು ಹಸಿವು ಅಡ್ಡಿಯಾಗ ಬಾರದು. ಈ ಉದ್ದೇಶದಿಂದ ಬಿಸಿ ಯೂಟ ಯೋಜನೆ ಚಾಲ್ತಿಯಲ್ಲಿದೆ. ಪಾಠ- ಪ್ರವಚನ ಮಾಡುವ ಶಿಕ್ಷಕರಿಗೆ ಅಡುಗೆ ಉಸ್ತುವಾರಿ ಬೇಡ. ಇದರಿಂದ ಶಿಕ್ಷಣದ ಗುಣಮಟ್ಟಕ್ಕೆ ಅಡ್ಡಿಯಾಗ ಬಹುದು.ಅಡುಗೆ ತಯಾರಿಸಿ, ಬಡಿಸಲು ಪ್ರತ್ಯೇಕ ವ್ಯವಸ್ಥೆ ಇರಲಿ ಎಂದು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.

ಪಟ್ಟಣದಲ್ಲಿ ವಾಸ ಇದ್ದು, ದೂರದ ಹಳ್ಳಿಗೆ ನಿತ್ಯ ಪ್ರಯಾಣ ಮಾಡುವುದು ಕಷ್ಟದ ಕೆಲಸ. ಹಾಗಾಗಿ ಸಾಧ್ಯವಾದಷ್ಟು ಪ್ರಮುಖ ಹಳ್ಳಿಗಳಲ್ಲಿ ಶಿಕ್ಷಕರಿಗೆ ವಸತಿ ಗೃಹಗಳ ನಿರ್ಮಾಣ ಮಾಡುವುದರಿಂದ ಶಿಕ್ಷಕರು ಸ್ಥಳದಲ್ಲೇ ವಾಸವಿದ್ದು, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗುತ್ತದೆ. ಇಲ್ಲಿ ರೂ. 33 ಲಕ್ಷ ವೆಚ್ಚದಲ್ಲಿ 8 ವಸತಿ ಗೃಹಗಳು ನಿರ್ಮಾಣ ಆಗಲಿದೆ ಎಂದರು.

ಜಿ.ಪಂ. ಉಪಾಧ್ಯಕ್ಷ ಡಾ.ಶಿವರಾಮ, ಸದಸ್ಯ ಕೆ.ಮಾರುತಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಚಂದ್ರಪಾಟೀಲ್, ತಾಪಂ. ಇಓ ಡಿ.ಕೆ.ಲಿಂಗರಾಜು, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್, ಹುರ ಗ್ರಾ.ಪಂ. ಅಧ್ಯಕ್ಷ ರಂಗನಾಯಕ, ಉಪಾಧ್ಯಕ್ಷೆ ನಾಗರತ್ನ, ಬಿಸಿಸಿ ಅಧ್ಯಕ್ಷರಾದ ಸುಬ್ಬಣ್ಣ, ಕೆಂಡಗಣ್ಣಪ್ಪ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.