ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:55 IST
Last Updated 7 ಫೆಬ್ರುವರಿ 2011, 10:55 IST

ಮೈಸೂರು: ‘ದಸರಾ ಪ್ರಾಧಿಕಾರ, ಪ್ರವಾಸೋದ್ಯಮ ಪ್ರಾಧಿಕಾರ ಹಾಗೂ ಯೋಗ ಶಿಕ್ಷಣ ಒಳಗೊಂಡಿ ರುವ ಆಯುರ್ವೇದ ವೈದ್ಯಕೀಯ ವಿ.ವಿ ಆರಂಭಿಸಲು 2011-12ನೇ ಸಾಲಿನ ರಾಜ್ಯ ಮುಂಗಡ ಪತ್ರದಲ್ಲಿ  ಅನುಮತಿ ಪಡೆಯಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಇಲ್ಲಿ ಹೇಳಿದರು.

ನಗರದ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಬಜೆಟ್ ಪೂರ್ವಭಾವಿ ಸಂವಾದ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಾರಂಪರಿಕ ನಗರ ಘೋಷಣೆ, 2011 ರಿಂದ 2013ರ ಅವ ಧಿಯಲ್ಲಿ ಮೈಸೂರು ನಗರವನ್ನು ಆರೋಗ್ಯ ನಗರವಾಗಿ ಮಾಡುವ ಕುರಿತು ಬಜೆಟ್‌ನಲ್ಲಿ ಅನುಮೋದನೆ ಪಡೆಯಲಾಗುವುದು’ ಎಂದು ಹೇಳಿದರು.

‘ಆರೋಗ್ಯ ನಗರ ಯೋಜನೆಯ ಮೊದಲ ಹಂತದಲ್ಲಿ ಪ್ಲಾಸ್ಟಿಕ್ ಹಾಗೂ ಗುಡಿಸಲು ಮುಕ್ತ ನಗರವನ್ನಾಗಿ ಮಾಡಲಾಗುವುದು. ಕಾರಂಜಿ ಮತ್ತು ಕುಕ್ಕರಹಳ್ಳಿ ಕೆರೆಗೆ ಚರಂಡಿ ನೀರು ಸೇರದಂತೆ ತಡೆಗಟ್ಟಲು  ರೂ. 6.5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು 6 ತಿಂಗಳ ಗಡವು ನೀಡಲಾಗಿದೆ’ ಎಂದರು.

‘ಪ್ರತಿ ಗ್ರಾಮಗಳಲ್ಲೂ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕ್ರಿಯಾ  ಯೋಜನೆಯನ್ನು ರೂಪಿಸುವಂತೆ ಗ್ರಾ.ಪಂ.ಗಳಿಗೆ ಸೂಚಿಸಲಾಗುವುದು. ಆ ಮೂಲಕ ಒಂದು ವರ್ಷದ ಅವಧಿ ಯಲ್ಲಿ ನೀರಿನ ಮಟ್ಟ ಹೆಚ್ಚಿಸಲಾಗುವುದು. ನಗರದ ಅಭಿವೃದ್ಧಿಗೆ ಪಕ್ಷಬೇಧ ಮರೆತು ಎಲ್ಲರೂ ಕೈಜೋಡಿಸ ಬೇಕು’ ಎಂದು ಮನವಿ ಮಾಡಿದರು.

ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯಗಳು:

500 ಕೋಟಿ ಅನುದಾನ ಅಗತ್ಯ
ಮೈಸೂರು ಮಹಾನಗರ ಪಾಲಿಕೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ನಗರದ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ರೂ.500 ಕೋಟಿ ಅನುದಾನ ಬಿಡುಗಡೆ ಮಾಡಬೇಕು.
 -ಸಂದೇಶ್‌ಸ್ವಾಮಿ, ಮೇಯರ್

100 ಕೋಟಿ ಅನುದಾನ ಬೇಕು
ಪ್ರವಾಸೋದ್ಯಮ ಇಲಾಖೆಯಿಂದ ರೂ.100 ಕೋಟಿ ಹಣ ಬಿಡುಗಡೆ ಮಾಡಬೇಕು. ಈ ಹಣದಲ್ಲಿ ಶಾಶ್ವತ ವಸ್ತು ಪ್ರದರ್ಶನ ಮಳಿಗೆ ಸ್ಥಾಪಿಸಬೇಕು. ನಗರ ಪ್ರದೇಶದ ವ್ಯಾಪ್ತಿಯಲ್ಲಿ ಹೋಟೆಲ್ ನಿರ್ಮಾಣಕ್ಕೆ  ಯೋಜನೆಯ ಒಟ್ಟು ವೆಚ್ಚದ ಮೇಲೆ ಶೇ 25ರಷ್ಟು ರಿಯಾಯಿತಿ ನೀಡಬೇಕು.
 -ಎಂ.ರಾಜೇಂದ್ರ, 
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ

ನಾಡಹಬ್ಬ ಪ್ರಾಧಿಕಾರ ರಚಿಸಿ

ದಸರಾ ಪ್ರಾಧಿಕಾರದ ಬದಲು ನಾಡಹಬ್ಬ ಪ್ರಾಧಿಕಾರ ರಚಿಸಬೇಕು. ಇಡಿ ರಾಜ್ಯದಲ್ಲಿ ವರ್ಷವಿಡೀ ನಡೆ ಯುವ ಪ್ರಮುಖ ಉತ್ಸವಗಳನ್ನು ಈ ಪ್ರಾಧಿಕಾರದಡಿ ತರಬೇಕು. ನಗರದ ಪ್ರತಿಯೊಂದು ವಾಣಿಜ್ಯ ಮಳಿಗೆ ಗಳಿಗೆ ಒಂದೇ ಬಣ್ಣದ ಬೋರ್ಡ್‌ಗಳನ್ನು ಅಳವಡಿಸಲು ಸೂಚಿಸಬೇಕು. ಪಾರಂಪರಿಕ ನಗರ ಘೋಷಣೆಯಾಗಬೇಕು.
 -ಆರ್.ಗುರು, ಕೈಗಾರಿಕೋದ್ಯಮಿ

ರಫ್ತು ಕೇಂದ್ರ ಶುರುವಾಗಲಿ
ಕೈಗಾರಿಕಾ ಪ್ರದೇಶದಲ್ಲಿ ರಫ್ತು ಕೇಂದ್ರವನ್ನು ಆರಂಭಿಸಬೇಕು. ಬಹಳಷ್ಟು ನಿವೇಶನಗಳು ಖಾಲಿ ಉಳಿದಿವೆ. ಅವುಗಳನ್ನು ವಶಪಡಿಸಿಕೊಂಡು ಬೇರೆಯವರಿಗೆ ಹಸ್ತಾಂತರಿಸಬೇಕು. ಕೈಗಾರಿಕೆಗಳಿಗೆ ನದಿ ನೀರನ್ನು ಸರಬರಾಜು ಮಾಡಬೇಕು. ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು. ಹೆಲಿಪ್ಯಾಡ್ ನಿರ್ಮಿಸಬೇಕು.
 -ವಿ.ವಿಶ್ವನಾಥ್, ಕೈಗಾರಿಕೆಗಳ ಸಂಘದ ಅಧ್ಯಕ್ಷ

ಜಾಗದ ವಿವಾದ ಬಗೆಹರಿಸಿ
ಸಂಗೀತ ವಿ.ವಿ ಗೆ ವರಕೋಡಿನಲ್ಲಿ ನೀಡಿರುವ 100 ಎಕರೆ ಜಾಗದ ವಿವಾದವನ್ನು ಬಗೆಹರಿಸಬೇಕು. 2011-12ನೇ ಸಾಲಿನಿಂದ ಶೈಕ್ಷಣಿಕ ಕೋರ್ಸ್ ಆರಂಭಿಸಲು ಹಾಗೂ ನೂತನ ಕಟ್ಟಡ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಬೇಕು.
-ಎನ್.ಎಂ.ತಳವಾರ್, ಸಂಗೀತ ವಿ.ವಿ ಕುಲಸಚಿವ

ಹೊಸ ತೆರಿಗೆ ಬೇಡ
ಅಗತ್ಯ ವಸ್ತುಗಳ ತೆರಿಗೆ ಹೆಚ್ಚಿಸಿ ಹೊಸ ಯೋಜನೆ ಅನುಷ್ಠಾನಗೊಳಿಸುವುದು ಬೇಡ. ಅಬಕಾರಿ ನೀತಿ ಯನ್ನು ಪರಿಷ್ಕರಿಸಬೇಕು. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬಾರದು. ಅಸಂಘಟಿತ ಕಾರ್ಮಿಕ ರಿಗೆ ಕನಿಷ್ಠ ವೇತನ ನಿಗದಿ ಮಾಡಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
 -ಪ್ರೊ. ಶಿವರಾಜ್, ಮೈಸೂರು ವಿ.ವಿ

ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ
ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ವಾಹನ ನಿಲುಗಡೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಪಾರ್ಕಿಂಗ್‌ಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು.
-ಕೆ.ವಿ.ಮಾರ್ಕಂಡೇಯ, ಮೃಗಾಲಯ ನಿರ್ದೇಶಕ

ವ್ಯಾಟ್ ಕಡಿಮೆ ಮಾಡಿ
ಶೇ. 1ರಷ್ಟು ವ್ಯಾಟ್ ತೆರಿಗೆಯನ್ನು ಕಡಿಮೆ ಮಾಡಬೇಕು. ಮೈಸೂರು ನಗರವನ್ನು ಅಂತರರಾಷ್ಟ್ರೀಯ  ಪ್ರವಾಸೋದ್ಯಮ ಕೇಂದ್ರ ಎಂದು ಘೋಷಣೆ ಮಾಡಬೇಕು. ಇಎಸ್‌ಐ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು.
 -ಎಚ್.ವಿ.ರಾಘವೇಂದ್ರ, 
ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.