ADVERTISEMENT

ಜಿಲ್ಲಾ ಸಾಲ ಯೋಜನೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 10:05 IST
Last Updated 17 ಮಾರ್ಚ್ 2012, 10:05 IST

ಮೈಸೂರು: 2012-13 ರ ಜಿಲ್ಲಾ ಸಾಲ ಯೋಜನೆಯು ರೂ.3856.82 ಕೋಟಿಗಳ ಬ್ಯಾಂಕ್ ಸಾಲವನ್ನು ಪ್ರಸ್ತಾಪಿದ್ದು, ಇದರಲ್ಲಿ ರೂ.3123.62 ಕೋಟಿ (ಶೇಕಡಾ 80.98) ರಷ್ಟು ಸಿಂಹಪಾಲನ್ನು ಆದ್ಯತಾವಲಯವು ಪಡೆದುಕೊಂಡಿದೆ.

ಜಿಲ್ಲೆಯ ಅಗ್ರ ಬ್ಯಾಂಕ್ ಜವಾಬ್ದಾರಿಯನ್ನು ಹೊತ್ತಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 2011-12 ರ ಡಿಸೆಂಬರ್ ತನಕ ರೂ.2909.71 ಕೋಟಿ ಸಾಲವನ್ನು ಪ್ರಸ್ತಾಪಿಸಿದೆ. ಇದರಲ್ಲಿ ರೂ.2020.95 ಕೋಟಿಯ ಸಾಧನೆಯಾಗಿದ್ದು, ಉದ್ದೇಶಿತ ಗುರಿಯ ಶೇಕಡಾ 71.50 ತಲುಪಲಾಗಿದೆ ಎಂದು ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಮತ್ತು ಸಮೂಹ ಕಾರ್ಯನಿರ್ವಾಹಕ (ಕೃಷಿ ಮತ್ತು ಎಂಎಸ್‌ಎಂಇ) ಡಾ.ಕೆ.ಲಕ್ಷ್ಮೀಶ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

2011-12 ರ ಸಾಲ ಯೋಜನೆಯಲ್ಲಿ ಕೃಷಿ ಸಾಲಗಳಿಗಾಗಿ ರೂ.759.22 ಕೋಟಿಗಳನ್ನು ಪ್ರಸ್ತಾಪಿಸಲಾಗಿದ್ದು, ರೂ.795.36 ಕೋಟಿಗಳ ಸಾಧನೆಯನ್ನು ಮಾಡಲಾಗಿದೆ. ಉದ್ದೇಶಿತ ಗುರಿಯ ಶೇಕಡಾ 104.76 ತಲುಪಲಾಗಿದೆ. ಈ ವರ್ಷವೂ ಕೃಷಿ ಸಾಲ ಮತ್ತು ಆರ್ಥಿಕ ಸೇರ್ಪಡೆಯ ವರ್ಷವಾಗಿದ್ದು, ಬ್ಯಾಂಕರುಗಳು ತಮ್ಮ ಗುರಿಯನ್ನು ಸಾಧಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ನಬಾರ್ಡ್ ತಯಾರಿಸಿದ ಪಿಎಲ್‌ಪಿ ಯ ರೀತಿ ಆದ್ಯತಾ ವಲಯಗಳಿಗೆ ಸೂಚಿಸಿದ ಸಾಲವನ್ನು ಗಮನದಲ್ಲಿಟ್ಟುಕೊಂಡು ಆದ್ಯತಾವಲಯದಲ್ಲಿ 2011-12 ರ ಬೆಳವಣಿಗೆಗಿಂತ ಶೇಕಡಾ 35.88 ಹೆಚ್ಚಿನ ಬೆಳವಣಿಗೆಯನ್ನು ನಾವು ಪ್ರಸ್ತಾಪಿಸಿದ್ದೇವೆ. ಬ್ಯಾಂಕ್ ಸಾಲಗಳ ವಸೂಲಿಯು ಹಿಂಜರಿಕೆಯನ್ನು ತೋರುತ್ತಿರುವುದು ಕಳವಳ ಉಂಟುಮಾಡುತ್ತಿದೆ. ಹೆಚ್ಚುತ್ತಿರುವ ಎನ್‌ಪಿಎ ಗಳು, ತ್ವರಿತ ಸಾಲ ನೀಡುವಿಕೆಯ ಮೇಲೆ ಪರಿಣಾಮ ಬೀರುತ್ತಿವೆ. ಸಾಲಗಾರರು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದಾಗ ಮಾತ್ರ ಬ್ಯಾಂಕ್ ಸಾಲವು ಹೆಚ್ಚಿನ ಮಹತ್ವ ಪಡೆಯುತ್ತದೆ ಎಂದು ತಿಳಿಸಿದರು.

100 ರಷ್ಟು ಮರುಪಾವತಿ: ಸ್ವಸಹಾಯ ಸಂಘಗಳಿಗೆ ಬ್ಯಾಂಕ್‌ಗಳು ನೀಡಿರುವ ಸಾಲಗಳನ್ನು ಹೆಚ್ಚಿನ ಎಲ್ಲ ಸಂಘಗಳು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿ ಶೇ. 100 ರ ಮರುಪಾವತಿ ಯನ್ನು ಸಾಧಿಸಿವೆ. ಜಿಲ್ಲೆಯಲ್ಲಿ 33640 ಕ್ಕೂ ಹೆಚ್ಚಿನ ಸ್ವಸಹಾಯ ಸಂಘಗಳಿವೆ. ಇವುಗಳಲ್ಲಿ 29450 ಕ್ಕಿಂತ ಹೆಚ್ಚಿನ ಸಂಘಗಳಿಗೆ ರೂ.715.34 ಕೋಟಿಗಳ ಸಾಲವನ್ನು ನೀಡಲಾಗಿದೆ ಎಂದು ಹೇಳಿದರು.

ಆರ್ಥಿಕ ಸೇರ್ಪಡೆ: ಹಳ್ಳಿಯನ್ನೂ ತಲುಪಲು ಆರ್‌ಬಿಐ ಯೋಜನೆಯೊಂದನ್ನು ತಯಾರಿಸಿದೆ. ಈ ಯೋಜನೆಯಂತೆ 2 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಎಲ್ಲ ಹಳ್ಳಿಗಳಲ್ಲೂ ಒಂದು ಶಾಖೆಯನ್ನು ತೆರೆಯುವುದರ ಮೂಲಕ ಅಥವಾ ವ್ಯವಹಾರ ಪ್ರತಿನಿಧಿಗಳನ್ನು ನೇಮಕ ಮಾಡುವ ಮುಖಾಂತರ ಮಾರ್ಚ್ 2012 ರ ಮುಂಚೆ ಬ್ಯಾಂಕಿಂಗ್ ಸೌಕರ್ಯ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವು 179 ವ್ಯವಹಾರ ಪ್ರತಿನಿಧಿಗಳನ್ನು ನೇಮಕ ಮಾಡಿದ್ದೇವೆ ಎಂದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹ ಣಾಧಿಕಾರಿ ಜಿ.ಸತ್ಯವತಿ ಜಿಲ್ಲಾ ಸಾಲ ಯೋಜನೆಯನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಡಿಜಿಎಂ ಎನ್.ವಿ.ಎಲ್.ರತನ್, ರಿಸರ್ವ್ ಬ್ಯಾಂಕ್ ಎಜಿಎಂ ಕೆ.ಬಾಲಕೃಷ್ಣನ್, ಮೈಸೂರಿನ ಲೀಡ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಎಂ.ಬಿ. ಚಿನ್ನಪ್ಪ, ನಬಾರ್ಡ್‌ನ ಎಜಿಎಂ ಎನ್. ಅರವಮುದ್ದಾನ್, ಸಿಕೆಜಿಬಿ ಪ್ರಧಾನ ವ್ಯವಸ್ಥಾಪಕ ಪ್ರಸನ್ನ ಸಿಂಹರಾವ್ ಇದ್ದರು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಡಿಜಿಎಂ ಜೆ.ರಾಮಕೃಷ್ಣನ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT