ADVERTISEMENT

ಜೆಸಿಬಿಯಿಂದ ಪೈಪ್‌ಗೆ ಹಾನಿ: ನೀರು ಪೂರೈಕೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 8:20 IST
Last Updated 8 ಮಾರ್ಚ್ 2012, 8:20 IST

ನಂಜನಗೂಡು: ಪಟ್ಟಣದ ಚಿಂತಾಮಣಿ ಗಣಪತಿ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮಂಗಳವಾರ ರಾತ್ರಿ ಜೆಸಿಬಿ  ಯಂತ್ರ ಬಳಸಿ ಚರಂಡಿಯ ಹೂಳು ತೆಗೆಯಲು ಹೋದ ಪರಿಣಾಮ ಕುಡಿಯುವ ನೀರು ಸರಬರಾಜಿನ ಪೈಪ್‌ಗೆ ಹಾನಿಯಾಗಿದೆ.  ಇದರಿಂದ ಹಳೇ ಪಟ್ಟಣದ 9 ವಾರ್ಡ್ ಗಳ ನಿವಾಸಿಗಳಿಗೆ ಬುಧವಾರ ನೀರು ಪೂರೈಕೆ ಸ್ಥಗಿತಗೊಂಡಿದೆ.

ಗುಂಡ್ಲುಪೇಟೆ ರಸ್ತೆಗೆ ಹೊಂದಿ ಕೊಂಡಂತೆ 19ನೇ ವಾರ್ಡ್‌ನಲ್ಲಿ ಈಚೆಗೆ ಹೊಸದಾಗಿ ತೆರೆದ ಚರಂಡಿ ನಿರ್ಮಿಸಲಾಗಿದೆ. ಆದರೆ, ಚರಂಡಿಯ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ಚರಂಡಿ ನೀರು ರಾಷ್ಟ್ರೀಯ ಹೆದ್ದಾರಿ ಬದಿ ಶೇಖರಣೆ ಆಗುತ್ತಿತ್ತು. ಹೂಳನ್ನು ತೆಗೆಯಲು ಮಂಗಳವಾರ ರಾತ್ರಿ ಜೆಸಿಬಿ ಯಂತ್ರ ಬಳಸಿದ್ದಾರೆ. ಕಾರ್ಯಾಚರಣೆ ಮಾಡುವಾಗ ಕುಡಿಯುವ ನೀರು ಸರಬರಾಜಿನ ಪೈಪ್‌ಗೆ ಹಾನಿಯಾಗಿದೆ. ಇದರಿಂದ ಆಪಾರ ಪ್ರಮಾಣದ ನೀರು ವ್ಯರ್ಥವಾಗಿದೆ. ವಿಷಯ ತಿಳಿದು ಪುರಸಭೆ ಸಿಬ್ಬಂದಿ ನೀರು ಶುದ್ಧೀಕರಣ ಘಟಕದಲ್ಲಿ ನೀರು ಹೊರ ಹೋಗುವುದನ್ನು ಬಂದ್ ಮಾಡಿದ್ದಾರೆ.

ಆದರೆ, ಹಳೇ ಪಟ್ಟಣಕ್ಕೆ ನೀರು ಒದಗಿಸುವ ನಾಗಮ್ಮ ಶಾಲೆ ಆವರಣದ ಓವರ್‌ಹೆಡ್ ಟ್ಯಾಂಕ್‌ಗೆ ನೀರು ಪೂರೈಕೆಯಾಗಲಿಲ್ಲ. ಬುಧವಾರ ಬೆಳಿಗ್ಗೆ ನೀರಿಗಾಗಿ ಎದುರು ನೋಡುತ್ತಿದ್ದ ನಿವಾಸಿಗಳು ಅಡಚಣೆ ಆಗಿರುವ ವಿಷಯ ತಿಳಿದು ಕೋಪಗೊಂಡರು. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿ, ಕೊಳವೆಬಾವಿಗಳತ್ತ ನಡೆದರು.

ಮಾನವ ಶಕ್ತಿ ಬಳಸಿ ಮಾಡಬಹುದಾದ ಸಣ್ಣಪುಟ್ಟ ಕೆಲಸಗಳಿಗೂ ಪುರಸಭೆ ಆಡಳಿತ ಜೆಸಿಬಿ ಬಳಸುತ್ತಿದೆ. ಇದೇ ರೀತಿ ಈ ಹಿಂದೆಯೂ ಜೆಸಿಬಿಯಿಂದ ಪೈಪ್‌ಲೈನ್ ಹಾನಿಗೊಳಾಗಿತ್ತು ಎಂದು ಸ್ಥಳೀಯರು ದೂರಿದ್ದಾರೆ.

ಮುಖ್ಯಾಧಿಕಾರಿ ಅಸಹಾಯಕತೆ:
ಪಟ್ಟಣದಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಪದೇ ಪದೇ ಹದಗೆಡುತ್ತಿರುವ ಬಗ್ಗೆ ಮುಖ್ಯಾಧಿಕಾರಿ ಡಿ.ರಮೇಶ್ ಅವರನ್ನು ಕೇಳಿದರೆ, `ಪುರಸಭೆ ಅಧ್ಯಕ್ಷರು ಎಲ್ಲ ಕೆಲಸ ತಾವೇ ಮಾಡಿಸುವುದಾಗಿ ಹೇಳುತ್ತಾರೆ.

ಹಾಗಾಗಿ ನನ್ನ ವಿವೇಚನೆಯಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ~ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.