ADVERTISEMENT

ಟೆಕ್ಕಿಸಮ್ನಿಂದ ಉಚಿತ ಕಂಪ್ಯೂಟರ್ ಪಾಠ!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:20 IST
Last Updated 7 ಫೆಬ್ರುವರಿ 2011, 10:20 IST

ಮೈಸೂರು: ಮೈಸೂರು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳು ಮತ್ತು ಕಂಪ್ಯೂಟರ್ ಸೌಲಭ್ಯ ವಂಚಿತ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡುವ ನಿಟ್ಟಿನಲ್ಲಿ   ನಗರದ ಅಮೃತ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳು ಮುಂದಾಗಿದ್ದಾರೆ.

ತಮ್ಮ ತಂಡಕ್ಕೆ ‘ಟೆಕ್ಕಿಸಮ್’ ಎಂದು ಹೆಸರು ಇಟ್ಟುಕೊಂಡಿರುವ ಬಿಸಿಎ (ಬ್ಯಾಚುಲರ್ಸ್‌ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್) ಎರಡನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿರುವ 11 ಕ್ರಿಯಾಶೀಲ ಮತ್ತು ಸಮಾಜಮುಖಿಯಾದ ವಿದ್ಯಾರ್ಥಿಗಳು ಉಚಿತ ಕಂಪ್ಯೂಟರ್ ಶಿಕ್ಷಣ ನೀಡಲು ಯೋಜನೆ ಹಮ್ಮಿಕೊಂಡಿದ್ದಾರೆ.

ಈಗಾಗಲೇ ಚಾಮುಂಡಿ ಬೆಟ್ಟದ ಟಿ.ಎಸ್.ಸುಬ್ಬಯ್ಯ ಶಾಲೆ, ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ   ಡಿ.ತಮ್ಮಯ್ಯ ಸ್ಮಾರಕ ನವೋದಯ ಪ್ರೌಢಶಾಲೆ ಸೇರಿ ಆರು ಶಾಲೆಗಳಲ್ಲಿ ತರಬೇತಿ ನೀಡಿದ್ದಾರೆ. ಒಟ್ಟು   25 ಶಾಲೆಗಳ ಮಕ್ಕಳಿಗೆ ತರಬೇತಿ ನೀಡಿದ ಬಳಿಕ ಕಂಪ್ಯೂಟರ್ ಪ್ರತಿಭಾ ಸ್ಪರ್ಧೆಯನ್ನು ಆಯೋಜಿಸಲು ಟೆಕ್ಕಿಸಮ್ ತಂಡ ನಿರ್ಧರಿಸಿದೆ.

ಈ ತರಬೇತಿಯಲ್ಲಿ 5 ರಿಂದ 9ನೇ ತರಗತಿಯ ಮಕ್ಕಳಿಗೆ ಕಂಪ್ಯೂಟರ್ ಬೇಸಿಕ್, ವಿನ್‌ಡೋಸ್ ಬಳಕೆ, ಎಂ.ಎಸ್.ವರ್ಡ್, ಪೇಂಟಿಂಗ್ ಕುರಿತು ಮಾಹಿತಿ ನೀಡಲಾಗುತ್ತಿದೆ.ಟೆಕ್ಕಿಸಮ್ ತಂಡ ಕಾಲೇಜಿನಿಂದ ಅಥವಾ  ಪ್ರಾಯೋಜಕರಿಂದ ಯಾವುದೇ ಹಣಕಾಸು ಸಹಾಯ ಪಡೆಯದೆ ಉಚಿತ ತರಬೇತಿ ನೀಡುತ್ತಿರುವುದು ವಿಶೇಷವಾಗಿದೆ.

ಈ ಕುರಿತು ಮಾತನಾಡಿದ ಯೋಜನೆಯ ರೂವಾರಿ ಎಂ.ವಿ.ರಾಕೇಶ್, ‘ಸರ್ಕಾರಿ ಶಾಲೆಯ ಮಕ್ಕಳಿಗೆ  ಸಾಮಾನ್ಯವಾಗಿ ಕಂಪ್ಯೂಟರ್ ಬಳಕೆ ಗೊತ್ತಿರುವುದಿಲ್ಲ.ಜೊತೆಗೆ ಈ ಕುರಿತು ಕುತೂಹಲವಿರುತ್ತದೆ. ಈ ಹಿನ್ನೆಲೆಯಲ್ಲಿ ಉಚಿತವಾಗಿ ತರಬೇತಿ ನೀಡಲು ಮುಂದಾಗಿದ್ದೇವೆ’ ಎಂದರು.

ಟೆಕ್ಕಿಸಮ್ ತಂಡದಲ್ಲಿ ಎಂ.ವಿ.ರಾಕೇಶ್, ಎ.ಎಸ್.ಶಿವಕುಮಾರ್, ಕೆ.ಎಸ್.ಕೌಶಿಕ್,ಪ್ರಭುಕುಮಾರ್,  ಎಂ. ಸಾಯಿಶರಣ್, ಆರ್.ಸೆಲ್ವ, ಬಿಕ್ರಮ್ ಸಿಂಗ್, ಸಿಬಾನಂದಶರ್ಮಾ, ಎಂ. ಆರ್.ಮನುಭಾರ್ಗವ್, ಆರ್.ಉಮಾ, ಸುಮನ್ ಮಂಡಲ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.