ಪಿರಿಯಾಪಟ್ಟಣ: ತಾಲ್ಲೂಕಿನ ಕಂಪಲಾಪುರದ ಬಳಿ ತಂಬಾಕು ಮಂಡಳಿ ನಿರ್ಮಿಸುತ್ತಿರುವ ತಂಬಾಕು ಹರಾಜು ಮಾರುಕಟ್ಟೆಯು ದೇಶದಲ್ಲೇ ಅತ್ಯುತ್ತಮ ಹೈಟೆಕ್ ತಂಬಾಕು ಹರಾಜು ಮಾರುಕಟ್ಟೆಯಾಗಿ ರೂಪುಗೊಳ್ಳಲಿದೆ ಎಂದು ಸಂಸದ ಎಚ್. ವಿಶ್ವನಾಥ್ ತಿಳಿಸಿದರು.
ಹೈಟೆಕ್ ತಂಬಾಕು ಹರಾಜು ಮಾರುಕಟ್ಟೆಯ ಕಾಮಗಾರಿಯನ್ನು ಈಚೆಗೆ ಪರಿಶೀಲಿಸಿ ಅವರು ಮಾತನಾಡಿದರು. ಹತ್ತು ಎಕರೆ ಪ್ರದೇಶದಲ್ಲಿ ₨ 13 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಿಸಲಾಗುತ್ತಿದ್ದು, ಈ ಭಾಗದ ತಂಬಾಕು ಬೆಳೆಗಾರರಿಗೆ ಅನುಕೂಲವಾಗಿದೆ. ಪಿರಿಯಾಪಟ್ಟಣ, ಹುಣಸೂರು, ಕೆ.ಆರ್. ನಗರ, ಎಚ್.ಡಿ. ಕೋಟೆ, ರಾಮನಾಥಪುರ ಇತರೆ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ನಿಕೋಟಿನ್ ಅಂಶ ಇರುವ ತಂಬಾಕು ಬೆಳೆಯಲಾಗುತ್ತಿದೆ. ಇದು ಆರೋಗ್ಯಕ್ಕೆ ಹಾನಿಕಾರವಲ್ಲ. ಆದ್ದರಿಂದಲೇ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ತುಂಬಾ ಬೇಡಿಕೆ ಇದ್ದು, ಶೇ 80 ಭಾಗವನ್ನು ರಫ್ತು ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ ಎಂದು ಹೇಳಿದರು.
ದಲಿತರಿಗಾಗಿ ಮೀಸಲಿಟ್ಟಿರುವ ಸ್ಮಶಾನವನ್ನು ಬಿಟ್ಟು ತಂಬಾಕು ಮಾರುಕಟ್ಟೆ ನಿರ್ಮಿಸಬೇಕು ಎಂದು ಸಂಸದರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ವಿಶ್ವನಾಥ್, ನೂರಾರು ವರ್ಷಗಳ ಇತಿಹಾಸ ಇರುವ ದಲಿತರ ಸ್ಮಶಾನ ಜಾಗವನ್ನು ಬಿಡಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ತಂಬಾಕು ಮಂಡಳಿ ಸದಸ್ಯ ಭೀಮನಹಳ್ಳಿ ಮಹದೇವ್, ತಾ.ಪಂ. ಸದಸ್ಯ ಮಹದೇವ, ಯುವ ಕಾಂಗ್ರೆಸ್ ಜಿಲ್ಲಾ ಘಟಕ ಮಾಜಿ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾನ್ಸೂನ್ ಚಂದ್ರು, ತಾಲ್ಲೂಕು ಎಸ್ಸಿ ಘಟಕದ ಅಧ್ಯಕ್ಷ ಪಿ. ಮಹದೇವ್, ಮುಖಂಡರಾದ ಪಿ.ಎಸ್. ವಿಷಕಂಠಯ್ಯ, ಮುತ್ತುರಾಜ್, ಡಿ.ಎ. ಜವರಪ್ಪ, ನಾಗೇಂದ್ರ, ಕೆ.ಎಂ. ರಮೇಶ್, ಕೆ.ಆರ್. ಜಯಲಕ್ಷ್ಮೀ, ಚರಪುರ ಶಿವರಾಜ್, ಮೆಡಿಕಲ್ ಮಹದೇವ್, ಎಂ.ಬಿ. ಪ್ರಭು, ವರದರಾಜು ಮತ್ತು ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಕೆ. ನರಸಿಂಹಯ್ಯ, ಹರಾಜು ಅಧೀಕ್ಷಕ ಬಿ. ಮಂಜುರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.