ADVERTISEMENT

ತಿ.ನರಸೀಪುರ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 9:20 IST
Last Updated 8 ಜೂನ್ 2011, 9:20 IST
ತಿ.ನರಸೀಪುರ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ
ತಿ.ನರಸೀಪುರ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ   

ತಿ.ನರಸೀಪುರ: ಪಟ್ಟಣದ ಸಾರ್ವಜನಿಕ ಅಸ್ಪತ್ರೆಯಲ್ಲಿ ವೈದ್ಯರು ನಿಗದಿತ ಸಮಯಕ್ಕೆ ಬರುತ್ತಿಲ್ಲ,  ವೈದ್ಯರ ವಸತಿ ನಿಲಯದಲ್ಲಿ ವಾಸಿಸುತ್ತಿಲ್ಲ. ಅಲ್ಲದೇ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ...!

-ಇವು ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೇಳಿ ಬಂದ ದೂರುಗಳು. ಈ ದೂರಿಗೆ  ಉತ್ತರಿಸಿದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಾಲಾವತಿ  `ಪ್ರತಿನಿತ್ಯ 500 ರಿಂದ 1ಸಾವಿರ ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ವೈದ್ಯರ ಕೊರತೆ ಇದೆ. ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸುವಂತೆ ಸಿಬ್ಬಂದಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

ಮಾದಾಪುರ ತಾ.ಪಂ ಸದಸ್ಯ ಬಸವರಾಜು ಮಾತನಾಡಿ `ಮೇ 31ರಂದು ಕರೆದಿದ್ದ ಸ್ಥಾಯಿ ಸಮಿತಿಯ ಚುನಾವಣೆ ಸಭೆ ಸದಸ್ಯರ ಗಮನಕ್ಕೆ ತಾರದೆ ರದ್ದು ಪಡಿಸಿದ್ದಾರೆ. ಸದಸ್ಯರು ಸಭೆಗೆಂದು ಬಂದು ವಾಪಾಸಾಗಿದ್ದಾರೆ. ಸೌಜನ್ಯಕ್ಕಾದರೂ ದೂರವಾಣಿ ಕರೆ ಮಾಡಿಲ್ಲ. ತಾ.ಪಂ.ಸದಸ್ಯರನ್ನು ಇ.ಓ ಹಾಗೂ ತಾ.ಪಂ ಅಧ್ಯಕ್ಷರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸಭೆಯಲ್ಲಿ ಅಧ್ಯಕ್ಷರು ಹಾಗೂ ಇಓ ಅವರನ್ನು ಪ್ರಶ್ನಿಸಿದರೆ ಉಪಾಧ್ಯಕ್ಷರು ಉತ್ತರ ನೀಡುತ್ತಾರೆ. ಸ್ಥಾಯಿ ಸಮಿತಿ ಚುನಾವಣೆ ನಡೆಯದೆ ಸಾಮಾನ್ಯ ಸಭೆ ನಡೆಸುವುದು ಸರಿಯಲ್ಲ ಎಂದರು.

ಸ್ಥಾಯಿ ಸಮಿತಿ ಚುನಾವಣೆಗೆ ಗೊಂದಲ ಉಂಟಾಗಿ ಎರಡು ಸಭೆಗಳು ರದ್ದಾಗಿವೆ. ತಾಲ್ಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಸಭೆ ನಡೆಸಲು ಅವಕಾಶ ನೀಡುವಂತೆ ತಾ.ಪಂ.ಉಪಾಧ್ಯಕ್ಷ ಸಿ.ವೆಂಕಟೇಶ್ ಸದಸ್ಯರಲ್ಲಿ  ಮಾಡಿದ ಮನವಿಗೆ ಸ್ಪಂದಿಸಿದ ಸದಸ್ಯರು ಸಭೆ ನಡೆಸಲು ಅವಕಾಶ ಮಾಡಿದರು.  

 ಕ್ಷೇತ್ರ ಸಂಪನ್ಮೂಲಾಧಿಕಾರಿ ನಾಗೇಂದ್ರ ಸಿಂಗ್ ಮಾತನಾಡಿ ಜಿಲ್ಲೆಯಲ್ಲಿ ತಿ.ನರಸೀಪುರ ತಾಲ್ಲೂಕು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದವರಿಗೆ ವಿಶೇಷ ಬೋಧನಾ ವ್ಯವಸ್ಥೆ ಕಲ್ಪಿಸಲಾಗಿದೆ. ಪೂರಕ ಪರೀಕ್ಷೆಯಲ್ಲಿ ಹೆಚ್ಚಿನ ಮಂದಿ ಉತ್ತೀರ್ಣರಾಗುವಂತೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನ ಕೆಲವು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಭಿವೃದ್ಧಿಗೆ ಸಿಬ್ಬಂದಿ, ವೇತನ, ಕಚೇರಿ ವೆಚ್ಚಗಳಿಗೆ ಬಳಸಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ. ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಯಾವುದೇ ಅನುದಾನ ಈವೆರೆಗೆ ಬಿಡುಗಡೆಯಾಗಿಲ್ಲ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಿ, ಇಒ ಚಿಕ್ಕಲಿಂಗಯ್ಯ, ವ್ಯವಸ್ಥಾಪಕ ಕೃಷ್ಣಚಾರ್, ಸದಸ್ಯರಾದ ಮಲ್ಲಾಜಮ್ಮ, ಸುಬ್ರಹ್ಮಣ್ಯ, ರೂಪಶ್ರೀ, ಅಂದಾನಿ, ಗುರುಮೂರ್ತಿ, ಸುಜಾತ, ಪ್ರಭಾಕರ್, ಮಹದೇವಮ್ಮ, ನಟರಾಜು, ಅಧಿಕಾರಿಗಳಾದ ಶಿಲ್ಪ, ಡಾ.ಶ್ರೀನಿವಾಸ್, ಸೋಮಶೇಖರ್, ನಟರಾಜು, ಪುರುಷೋತ್ತಮ್, ಖಾನ್, ಕೆಂಚೇಗೌಡ, ಹರೀಶ್, ಗ್ರಾ.ಪಂ. ಅಧ್ಯಕ್ಷರಾದ ಬಿ.ವೀರಭದ್ರಪ್ಪ, ಹುಚ್ಚೇಗೌಡ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.