ADVERTISEMENT

ತೂಬು ನಿರ್ಮಾಣ ಕಾಮಗಾರಿಗೆ ರೈತರ ತಡೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2012, 4:50 IST
Last Updated 15 ಜೂನ್ 2012, 4:50 IST

ಸಾಲಿಗ್ರಾಮ: ಚಾಮರಾಜ ಎಡದಂಡೆ ನಾಲೆಯ ತೂಬಿಗೆ ತಡೆಗೋಡೆ ನಿರ್ಮಿಸಲು ಗುತ್ತಿಗೆ ನೀಡಿರುವುದನ್ನು ಗುರುವಾರ ವಿರೋಧಿಸಿ ಪ್ರತಿಭಟನೆ ನಡೆಸಿದ ರೈತರು ಕಾಮಗಾರಿಯನ್ನು ತಡೆದ ಹಿಡಿದರು.

ಚಾಮರಾಜ ಎಡದಂಡೆ ನಾಲೆಯ ತೂಬು ಮಣ್ಣಿನಲ್ಲಿ ಮುಚ್ಚಿಕೊಂಡಿದ್ದು ನೀರು ಸರಬರಾಜು ಆಗದೇ ಬೆಳೆ ತೆಗೆಯಲು ಕಷ್ಟವಾಗಿತ್ತು. ಇದನ್ನು ಸರಿ ಪಡಿಸಲು ಮುಂದಾಗದ ಎಂಜಿನಿಯರ್‌ಗಳು ತೂಬಿನ ತಡೆಗೋಡೆ ನಿರ್ಮಿಸಲು ಗುತ್ತಿಗೆ ನೀಡಿರುವುದನ್ನು ವಿರೋಧಿಸಿ ರೈತರು ಪ್ರತಿಭಟಿಸಿದರು.  

ಚಾಮರಾಜ ಎಡದಂಡೆ ನಾಲೆಯ 6ನೇ ಮೈಲುಗಲ್ಲಿನಲ್ಲಿ ಇರುವ ತೂಬಿಗೆ ಚಾಮರಾಜ ನಾಲೆ ಯಿಂದ ಅಳವಡಿಸಿರುವ ಪೈಪ್ ಮಣ್ಣಿನಲ್ಲಿ ಮುಚ್ಚಿಕೊಂಡಿದ್ದು ನೀರು ಸರಬರಾಜು ಆಗುತ್ತಿಲ್ಲ. ಇದರಿಂದ ಸುಮಾರು 30 ರಿಂದ 40 ಎಕರೆ ಅಚ್ಚುಕಟ್ಟು ಪ್ರದೇಶದ ಬತ್ತದ ಬೆಳೆಗೆ ತೊಂದರೆಯಾಗಿತ್ತು. ಅದನ್ನು ಸರಿಪಡಿಸುವಂತೆ ಸಂಬಂಧಿಸಿದ ಎಂಜಿನಿಯರ್‌ಗಳಿಗೆ ರೈತರು ಮನವಿ ಸಲ್ಲಿಸಿದರೂ ಪ್ರಯಾೀಜನವಾಗಿರಲಿಲ್ಲ.

ತೂಬಿನ ಕಾಮಗಾರಿಯನ್ನು ಗುತ್ತಿಗೆದಾರರು ಶುರು ಮಾಡುತ್ತಿದ್ದಂತೆ ಅಚ್ಚುಕಟ್ಟು ಪ್ರದೇಶದ ರೈತರು ಕಾಮಗಾರಿಗೆ ಬಳಸಲಾಗುತ್ತಿದ್ದ ಸಾಮಗ್ರಿಗಳನ್ನು ಪರಿಶೀಲಿಸಿ, ಕಳಪೆ ಆಗಿರುವುದನ್ನು ಕಂಡು ಕಾಮಗಾರಿ ಮಾಡದಂತೆ ತಡೆದು ಪ್ರತಿಭಟನೆ ಮಾಡಿದರು. ಇದರಿಂದ ವಿಚಲಿತರಾದ ಗುತ್ತಿಗೆದಾರರು ಕಾಮಗಾರಿಯನ್ನು ನಿಲ್ಲಿಸಿದರು. ಪ್ರತಿಭಟನೆಯಲ್ಲಿ ಎಸ್. ಕೆ.ನಾರಾಯಣ, ಶಿವು, ಕೃಷ್ಣೇಗೌಡ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.