ADVERTISEMENT

‘ದಲಿತ ಎಂದು ಅವಕಾಶ ನಿರಾಕರಣೆ ಯತ್ನ’:ಮಾವುತ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 9:13 IST
Last Updated 2 ಅಕ್ಟೋಬರ್ 2017, 9:13 IST
ಅಂಬಾರಿ ಹೊತ್ತ ಅರ್ಜುನ ಆನೆಯೊಂದಿಗೆ ವಿನೂ
ಅಂಬಾರಿ ಹೊತ್ತ ಅರ್ಜುನ ಆನೆಯೊಂದಿಗೆ ವಿನೂ   

ಮೈಸೂರು: ‘ಆದಿವಾಸಿ ಸಮುದಾಯವನ್ನು ನಾನು ಗೌರವಿಸುತ್ತೇನೆ. ನನ್ನ ಪತ್ನಿ ಸುಮಂಗಲಿ ಕೂಡ ಇದೇ ಸಮುದಾಯಕ್ಕೆ ಸೇರಿದವಳು. ಆದರೆ, ಅರ್ಜುನ ಆನೆ ಮುನ್ನಡೆಸುವ ನನ್ನ ಹಕ್ಕನ್ನು ಪ್ರತಿಪಾದಿಸಿ ಯಶಸ್ವಿಯಾಗಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ’ –ಹೀಗೆಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು ಅರ್ಜುನ ಆನೆ ಸಾರಥಿ ವಿನೂ. ಜಂಬೂಸವಾರಿಯಲ್ಲಿ 750 ಕೆ.ಜಿ ಚಿನ್ನದ ಅಂಬಾರಿ ಹೊತ್ತ ಈ ಆನೆಯನ್ನು ಅವರು ಇದೇ ಮೊದಲ ಬಾರಿ ಮುನ್ನಡೆಸಿದರು.

‘ಕಳೆದ ಬಾರಿಯೇ ಅರ್ಜುನನ್ನು ಮುನ್ನಡೆಸಲು ಅವಕಾಶ ಸಿಗಬೇಕಿತ್ತು. ಆದರೆ, ಈ ಆನೆ ಮೇಲೆ ನನಗೆ ನಿಯಂತ್ರಣ ಇರಲಿಲ್ಲ. ಸರಿಯಾದ ಒಡನಾಟ ಹೊಂದಿರಲಿಲ್ಲ. ಹೀಗಾಗಿ, ನಾನೇ ಸುಮ್ಮನಾಗಿದ್ದೆ. ದಲಿತ ಎಂಬ ಕಾರಣಕ್ಕೆ ಈ ಬಾರಿಯೂ ಅವಕಾಶ ತಪ್ಪಿಸಲು ಹಲವರು ಪ್ರಯತ್ನಿಸಿದರು. ಆನೆ ಸ್ಪಂದಿಸುತ್ತಿಲ್ಲ ಎಂದು ಕಥೆ ಕಟ್ಟಲು ಶುರು ಮಾಡಿದರು. ಇದರಿಂದ ತುಂಬಾ ನೋವುಂಟಾಯಿತು’ ಎಂದು ನುಡಿದರು.

ವಿನೂ 2003ರಲ್ಲಿ ಕೆಲಸಕ್ಕೆ ಸೇರಿದರು. 2009ರಲ್ಲಿ ಕಾಯಂ ಕಾವಾಡಿಯಾಗಿ ಬಡ್ತಿ ಲಭಿಸಿತು. ಈಗ ಮಾವುತರಾಗಿದ್ದಾರೆ. ಎರಡು ವರ್ಷಗಳಿಂದ ಅರ್ಜುನ ಆನೆ ಜೊತೆಗಿದ್ದಾರೆ.

ADVERTISEMENT

‘ಸಣ್ಣಪ್ಪ ಹಾಗೂ ನನ್ನ ನಡುವೆ ಪೈಪೋಟಿ ಇದ್ದದ್ದು ನಿಜ. ಸಾರಥಿಯಾಗಲು ಅವರೂ ಹಟಕ್ಕೆ ಬಿದ್ದಿದ್ದರು. ಸಣ್ಣಪ್ಪ ಇನ್ನೂ ಕಾವಾಡಿಗ. ಅವರೇಗೆ ಅರ್ಜುನ ಆನೆ ಮುನ್ನಡೆಸಲು ಅರ್ಹ? ಈ ಬಾರಿ ತಾಲೀಮಿನಲ್ಲಿ ನಾನು ಯಶಸ್ವಿಯಾಗಿ ಮುನ್ನಡೆಸಿದ್ದೇನೆ. ಹೀಗಾಗಿ, ನನಗೆ ಅವಕಾಶ ಸಿಗುವ ಭರವಸೆ ಇತ್ತು’ ಎಂದು ಹೇಳಿದರು.
‘ನನಗೂ ಜವಾಬ್ದಾರಿ ಇದೆ. ಲಕ್ಷಾಂತರ ಜನರ ಮಧ್ಯೆ ಜಂಬೂಸವಾರಿ ಸಾಗುವಾಗ ಸಣ್ಣ ಎಡವಟ್ಟು ಸಂಭವಿಸಿದರೂ ಕೆಟ್ಟ ಹೆಸರು ಬರುತ್ತದೆ.

ನಿಯಂತ್ರಣದ ಭರವಸೆ ಇದ್ದ ಕಾರಣ ಅರ್ಜುನ ಆನೆ ಮುನ್ನಡೆಸಲು ಅಧಿಕಾರಿಗಳೊಂದಿಗೆ ಹಟಕ್ಕೆ ಬಿದ್ದಿದ್ದೆ. ಈಗ ಈ ಆನೆ ನನ್ನ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದೆ. ಇಲ್ಲದಿದ್ದರೆ ನಾನೇ ಖುದ್ದಾಗಿ ಬೇಡ ಎನ್ನುತ್ತಿದ್ದೆ’ ಎಂದರು.

‘ಹಿಂದಿನ ಬಹುತೇಕ ಮೆರವಣಿಗೆಗಳ ವೇಳೆ ಅರ್ಜುನ ಆನೆ ಮದದಲ್ಲೇ ಅಂಬಾರಿ ಹೊತ್ತಿದೆ. ಮದವಿದ್ದಾಗಲೇ ಚೆನ್ನಾಗಿ ಸಾಗುತ್ತದೆ. ಆದರೆ, ಈ ಬಾರಿ ಮದವಿರಲಿಲ್ಲ. ಜನರಾಶಿ ನೋಡುತ್ತಿದ್ದಂತೆ ನನಗೆ ತುಸು ಆತಂಕ ಉಂಟಾಯಿತು. ಆದರೆ, ಆನೆ ಮಾತ್ರ ಸ್ವಲ್ಪವೂ ವಿಚಲಿತವಾಗಲಿಲ್ಲ. ಇದು ನನ್ನಲ್ಲಿ ಧೈರ್ಯ ತುಂಬಿತು’ ಎಂದು ಆ ಕ್ಷಣವನ್ನು ವಿವರಿಸಿದರು.

‘ಚಾಮುಂಡೇಶ್ವರಿ, ಕಾಡಿನ ದೇವತೆ ಮಾಸ್ತಮ್ಮ ಹಾಗೂ ಮನೆದೇವರು ಚಿಕ್ಕದೇವಮ್ಮನನ್ನು ನೆನಪಿಸಿಕೊಳ್ಳುತ್ತಲೇ ಅಂಬಾರಿ ಆನೆ ಮುನ್ನಡೆಸಿದೆ. ಆನೆ ಜೊತೆಯಲ್ಲಿಯೇ ಬಂದ ತಂದೆ ಹಾಗೂ ವೈದ ನಾಗರಾಜ್‌ ಸರ್‌ ಮಾರ್ಗದರ್ಶನ ನೀಡುತ್ತಿದ್ದರು‌‌’ ಎಂದ ಅವರ ಕಂಗಳಲ್ಲಿ ಸಂತೋಷದ ಸೆಲೆ.

750 ಕೆ.ಜಿ ಅಂಬಾರಿ ಹೊತ್ತು ಸುಮಾರು 2 ಗಂಟೆ ನಡೆದು ದಣಿದಿದ್ದ ಅರ್ಜುನ ಆನೆಗೆ ಭಾನುವಾರ ವಿಶೇಷ ತಿನಿಸು ಮಾಡಿ ಹಾಕಲಾಯಿತು. ಮಾವುತರು ಹಾಗೂ ಕಾವಾಡಿಗರಿಗೆ ದಿನವಿಡೀ ವಿರಾಮ.

ಹೊಸ ಆನೆ ಪಳಗಿಸುತ್ತೇನೆ: ಸಣ್ಣಪ್ಪ
ಮೈಸೂರು: ‘ಅರ್ಜುನ ಆನೆ ಮುನ್ನಡೆಸಲು ಅವಕಾಶ ಸಿಗದಿದ್ದಕ್ಕೆ ತುಂಬಾ ನಿರಾಸೆಯಾಗಿದೆ. ಇದರಲ್ಲಿ ರಾಜಕೀಯ ನಡೆದಿದೆ. ಇನ್ನು ಮೂರು ವರ್ಷ ಈ ಕಡೆ ತಲೆ ಹಾಕಲ್ಲ. ಹೊಸ ಆನೆ ಪಳಗಿಸಿ ತರುತ್ತೇನೆ’ ಎಂದು ಸಣ್ಣಪ್ಪ ಅಲಿಯಾಸ್‌ ಮಹೇಶ್‌ ತಿಳಿಸಿದರು.

‘ಬಾಲ್ಯದಿಂದಲೂ ಅರ್ಜುನನೊಂದಿಗೆ ಆಡಿ ಬೆಳೆದಿದ್ದೇನೆ. ಉತ್ತಮ ಬಾಂಧವ್ಯ ಹೊಂದಿದ್ದೇನೆ. ಆದರೂ ನನಗೆ ಅವಕಾಶ ನೀಡಲಿಲ್ಲ. ಮಾವುತ ಎಂಬ ಕಾರಣಕ್ಕೆ ವಿನೂ ಅವರನ್ನು ಅರ್ಜುನನ ಮೇಲೆ ಕೂರಿಸಿದ್ದಾರೆ’ ಎಂದರು.

ಇದರೊಂದಿಗೆ ವಿನೂ ಹಾಗೂ ಸಣ್ಣಪ್ಪ ನಡುವಿನ ಅಸಮಾಧಾನ ಬಹಿರಂಗವಾಗಿದೆ. ಸಣ್ಣಪ್ಪ ತಂದೆ ದೊಡ್ಡಮಾಸ್ತಿ ಅವರು ಜಂಬೂಸವಾರಿಯಲ್ಲಿ ಸತತ ನಾಲ್ಕು ವರ್ಷ ಅರ್ಜುನ ಆನೆ ಮುನ್ನಡೆಸಿದ್ದರು. ಅವರ ಅಗಲಿಕೆ ಬಳಿಕ 2016ರಲ್ಲಿ ಸಣ್ಣಪ್ಪ ಈ ಆನೆ ಸಾರಥ್ಯ ವಹಿಸಿದ್ದರು.

ಖುಷಿಯಲ್ಲಿ ವಿನೂ ಪೋಷಕರು
ಮೈಸೂರು: ವಿನೂ ಪೋಷಕರಾದ ದೊಡ್ಡಪ್ಪಾಜಿ ಹಾಗೂ ಚಿಕ್ಕಮ್ಮಣಿ ಅವರು ಭಾನುವಾರ ಮೊಮ್ಮಕ್ಕಳೊಂದಿಗೆ ಖುಷಿಯಲ್ಲಿದ್ದರು. ‘ಪುತ್ರನಿಗೆ ನ್ಯಾಯೋಚಿತವಾಗಿ ಅವಕಾಶ ಸಿಕ್ಕಿದೆ.

ಕಳೆದ ವರ್ಷವೇ ಸಿಗಬೇಕಿತ್ತು. ಆದರೆ, ಅರ್ಜುನನೊಂದಿಗೆ ಆತ ಪಳಗಿಲ್ಲದ ಕಾರಣ ನಾನೇ ಬೇಡವೆಂದಿದ್ದೆ. ತಾತನ ಕಾಲದಿಂದಲೂ ನಾವು ಆನೆಗಳ ಜೊತೆಗೆ ಒಡನಾಟ ಹೊಂದಿದ್ದೇವೆ‌’ ಎಂದು ದೊಡ್ಡಪ್ಪಾಜಿ ಹೇಳಿದರು. ಅವರ ಇನ್ನೊಬ್ಬ ಪುತ್ರ ರಾಜು ಅವರು ಭೀಮ ಆನೆಯ ಕಾವಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಂದು ಪ್ರವಾಸ; ನಾಳೆ ಬೀಳ್ಕೊಡುಗೆ
ಮೈಸೂರು: ಒಂದೂವರೆ ತಿಂಗಳಿನಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆಯು ಮಂಗಳವಾರ ಕಾಡಿಗೆ ತೆರಳಲಿದೆ. ‘ಮಾವುತರು ಹಾಗೂ ಕಾವಾಡಿಗರನ್ನು ಸೋಮವಾರ ಪ್ರವಾಸಕ್ಕೆ ಕರೆದುಕೊಂಡು ಹೋಗಲಿದ್ದೇವೆ.

ಶ್ರೀರಂಗಪಟ್ಟಣ, ರಂಗನತಿಟ್ಟು ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ದರ್ಶನ ಮಾಡಿಸಲಿದ್ದೇವೆ’ ಎಂದು ಅರಣ್ಯ ಉಪಸಂರಕ್ಷಣಾಧಿಕಾರಿ (ವನ್ಯಜೀವಿ) ವಿ.ಏಡುಕುಂಡಲ ತಿಳಿಸಿದರು.ಜಿಲ್ಲಾಡಳಿತವು ಗಜಪಡೆ, ಮಾವುತರು, ಕಾವಾಡಿಗರು ಹಾಗೂ ಅವರ ಕುಟುಂಬದವರನ್ನು ನಾಳೆ ಬೀಳ್ಕೊಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.